ತುಮಕೂರು :
ರಾಜ್ಯ ಚುನಾವಣಾ ಆಯೋಗವು ಶಿರಾ ನಗರಸಭೆ 31 ವಾರ್ಡ್ಗಳ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ವೇಳಾಪಟ್ಟಿಯನ್ನು ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.
ವೇಳಾಪಟ್ಟಿಯನ್ವಯ ಡಿಸೆಂಬರ್ 8ರಂದು ಚುನಾವಣಾ ನೋಟೀಸನ್ನು ಪ್ರಕಟಿಸಲಾಗಿದ್ದು, ಡಿಸೆಂಬರ್ 15 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ನಾಮಪತ್ರಗಳ ಪರಿಶೀಲನೆಯನ್ನು ಡಿಸೆಂಬರ್ 16ರಂದು ನಡೆಸಲಾಗುವುದು. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಡಿಸೆಂಬರ್ 18 ಕಡೆಯ ದಿನವಾಗಿದೆ. ಮತದಾನ(ಅವಶ್ಯವಿದ್ದರೆ)ದ ಡಿಸೆಂಬರ್ 27ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಹಾಗೂ ಮರು ಮತದಾನದ ಅವಶ್ಯವಿದ್ದಲ್ಲಿ ಡಿ.29ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಸಲಾಗುವುದು. ಮತಗಳ ಎಣಿಕೆಯು ಡಿಸೆಂಬರ್ 30ರ ಬೆಳಿಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರದಲ್ಲಿ ನಡೆಯಲಿದ್ದು, ಡಿಸೆಂಬರ್ 30ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ.
ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು ಡಿಸೆಂಬರ್ 8 ರಿಂದ 30ರವರೆಗೆ ಜಾರಿಯಲ್ಲಿದ್ದು, ಡಿಸೆಂಬರ್ 11ರಂದು ಎರಡನೇ ಶನಿವಾರ ಸಾರ್ವತ್ರಿಕ ರಜಾದಿನವಾದ್ದರಿಂದ ಅಂದು ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿಲ್ಲ. ಶಿರಾ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಸದಾಚಾರ ಸಂಹಿತೆಯನ್ನು ಪಾಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.