ಚಿಕ್ಕನಾಯಕನಹಳ್ಳಿ:

      ಈ ತಿಂಗಳ ಅಂತ್ಯದೊಳಗೆ ಬಗರ್‍ಹುಕುಂ ಸಾಗುವಳಿಯಲ್ಲಿ ಭೂಮಿ ಮಂಜೂರಾಗಿರುವ ರೈತರಿಗೆ ಸಾಗುವಳಿ ಚೀಟಿ ವಿತರಿಸಲಾಗುವುದು, 2019ರ ಜನವರಿ 15ರೊಳಗೆ ಸಾಗುವಳಿ ಚೀಟಿ ವಿತರಿಸಿರುವ ರೈತರಿಗೆ ಖಾತೆ ಮಾಡಿಕೊಡಲಾಗುವುದು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

      ತಾಲ್ಲೂಕಿನ ಕಾತ್ರಿಕೆಹಾಲ್‍ನಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕಿನ ಜನತೆ ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳಬೇಕು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಈ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ, ಈಗಾಗಲೇ ತಾಲ್ಲೂಕಿನಿಂದ 12ಸಾವಿರಕ್ಕೂ ಹೆಚ್ಚು ಜನರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗಿದ್ದಾರೆ, ಇವರ ಜೀವನವೂ ಸುಖಕರವಾಗಿಲ್ಲ ಹಾಗಾಗಿ ರೈತರಿಗೆ ಜಮೀನು ನೀಡಿ ಸಾಗುವಳಿ ಮಾಡುವಂತೆಯೂ ಈ ಮೂಲಕ ತಮ್ಮ ಜೀವನ ರೂಪಿಸಿಕೊಳ್ಳುವಂತೆ ತಿಳಿಸಿದ ಅವರು, ಕಂದಿಕೆರೆ ಹೋಬಳಿಯಲ್ಲಿ ಪ್ರತಿ ಬಾರಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಲ್ಲಿ ನಮ್ಮ ಅಭ್ಯರ್ಥಿಗಳಗೆ ಹೆಚ್ಚು ಮತ ನೀಡುತ್ತಿದ್ದರು ಆದರೆ ವಿಧಾನಸಭೆಯಲ್ಲಿ ಮತ ಬರುತ್ತಿರಲಿಲ್ಲ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆ ಕೊರಗನ್ನು ನೀಗಿಸಿದ್ದೀರಿ, ಕಂದಿಕೆರೆ ಭಾಗದ ಜನತೆ ಹೆಚ್ಚಿನ ಮತ ನೀಡುವುದರೊಂದಿಗೆ ನನ್ನನ್ನು ಗೆಲ್ಲಿಸಿದ್ದೀರಿ, ಈ ಭಾಗಕ್ಕೆ ಶಾಲೆ-ಕಾಲೇಜು, ಬೆಸ್ಕಾಂನ ಶಕ್ತಿ ಕೇಂದ್ರ ನೀಡಿದ್ದೇನೆ ಅದೇ ರೀತಿ ಈ ಬಾರಿ ಕುಡಿಯುವ ನೀರು, ರಸ್ತೆ ಕಡೆ ಹೆಚ್ಚು ಗಮನ ಹರಿಸುತ್ತೇನೆ ಎಂದರು.

      ತಾಲ್ಲೂಕಿನ ಪ್ರತಿ ಹಳ್ಳಿಗಳಿಗೂ ಸಿಸಿರಸ್ತೆ ಮಾಡಲು ಎಲ್ಲಾ ಪಿಡಿಓಗಳಿಗೂ ಈಗಾಗಲೇ ಸೂಚನೆ ನೀಡಿದ್ದೇನೆ, ಸರ್ಕಾರ ಗ್ರಾಮೀಣಾಭಿವೃದ್ದಿಗೆ ಹೆಚ್ಚಿನ ಹಣ ನೀಡುತ್ತದೆ ಪಿಡಿಓಗಳು ಕೃಷಿಹೊಂಡ ನಿರ್ಮಿಸಿವುದನ್ನು ಬಿಟ್ಟು ರಸ್ತೆ, ಚರಂಡಿ ಕಡೆ ಗಮನ ಹರಿಸುವಂತೆ ತಿಳಿಸಿದ್ದೇನೆ ಎಂದ ಅವರು, ಈ ಭಾಗದ ಗ್ರಾಮೀಣ ಮಕ್ಕಳು ಇಂಗ್ಲೀಷ್ ಮೀಡಿಯಂಗಾಗಿಯೇ ಪಟ್ಟಣದ ಶಾಲೆಗಳಿಗೆ ತೆರಳುತ್ತಿದ್ದಾರೆ, ಇದರಿಂದ ಮಕ್ಕಳಿಗೆ ಸಮಯ ಇಲ್ಲದಂತಾಗಿದ್ದು ಇಲ್ಲಿರುವ ಶಾಲೆಗಳಲ್ಲಿ 6ನೇ ತರಗತಿಯಿಂದ ಇಂಗ್ಲೀಷ್ ಶಾಲೆ ಪ್ರಾರಂಭಿಸಲು ಮುಂದಾಗುತ್ತೇನೆ ಆಸಕ್ತಿ ಇರುವಂತಹವರು ಬಂದು ಸಂಪರ್ಕಿಸಿ ಎಂದ ಅವರು, ತಾಲ್ಲೂಕಿನಲ್ಲಿ 5ಸಾವಿರಕ್ಕೂ ಹೆಚ್ಚು ಬೆಳೆವಿಮೆ ರೈತರಿಗೆ ದೊರಕಬೇಕು, ಜಿಲ್ಲೆಯಲ್ಲಿಯೂ ರೈತರ ಸಂಖ್ಯೆ ಏರಿದೆ ಹಾಗಾಗಿ ಅಧಿವೇಶನ ಮುಗಿದ ನಂತರ ಪ್ರಧಾನಿಯವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಮಸ್ಯೆ ಬಗ್ಗೆ ಚರ್ಚಿಸಲಾಗುವುದು ಎಂದರು.

      ತಾ.ಪಂ.ಸದಸ್ಯ ಸಿಂಗದಹಳ್ಳಿರಾಜ್‍ಕುಮಾರ್ ಮಾತನಾಡಿ, ಜೆ.ಸಿ.ಮಾಧುಸ್ವಾಮಿರವರು ಆಳವಾದ ಅಧ್ಯಯನ ಮಾಡುತ್ತಾರೆ ಆ ಮೂಲಕ ಪ್ರತಿ ಇಲಾಖೆಯಲ್ಲಿ ಬರುವ ಅನುದಾನ, ಸಮಸ್ಯೆ ಬಗ್ಗೆ ಸಮರ್ಪಕವಾಗಿ ಚರ್ಚಿಸಿ ತಾಲ್ಲೂಕಿಗೆ ಅನುದಾನ ತರುತ್ತಾರೆ, ಕೆ.ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್‍ರವರಲ್ಲಿ ಚರ್ಚಿಸಿ ಕರೆಸಿ ಗುಡ್ಡದಾಚೆ ಭಾಗಕ್ಕೆ ಹೆಚ್ಚಿನ ಬಸ್‍ಗಳನ್ನು ಬಿಡಲು ತಿಳಿಸಿದ್ದಾರೆ, ಉದ್ಯೋಗಖಾತ್ರಿಯಲ್ಲಿ ತಾಲ್ಲೂಕಿಗೆ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸಿದ್ದಾರೆ ಎಂದ ಅವರು, ಶಾಸಕರು ತೀರ್ಥಪುರ ಪಂಚಾಯ್ತಿಯಲ್ಲಿ ಪಿಂಚಣಿ ಅದಾಲತ್ ನಡೆಸುವಂತೆಯೂ ಹಾಗೂ ಕೆ.ಎನ್.ರಾಜಣ್ಣರವರಿಗೆ ಹೇಳಿ ಈ ಭಾಗದಲ್ಲಿ ಡಿಸಿಸಿ ಬ್ಯಾಂಕ್ ಮಂಜೂರು ಮಾಡಲು ಹೇಳುವಂತೆ ಒತ್ತಾಯಿಸಿದರು.

      ತಾ.ಪಂ.ಸದಸ್ಯ ಕೇಶವಮೂರ್ತಿ ಮಾತನಾಡಿ, ಜೆ.ಸಿ.ಮಾಧುಸ್ವಾಮಿರವರು ಈ ಭಾಗಕ್ಕೆ ಮೊದಲೇ ಶಾಲೆ, ಕಾಲೇಜುಗಳನ್ನು ತಂದು ಗ್ರಾಮೀಣ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದ ಅವರು, ಈಗ ಈ ಭಾಗದ ಹಳ್ಳಿಗಳಿಗೆ ಸಿ.ಸಿ.ರಸ್ತೆ ಮಾಡಲು ಅಧಿಕಾರಿಗಳ ಜೊತೆ ಚರ್ಚಿಸಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ದಪಡಿಸುತ್ತಿದ್ದರೆ ಎಂದರು.

      ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳ, ಸಮಾಜ ಕಲ್ಯಾಣಾಧಿಕಾರಿ ರೇಣುಕದೇವಿ, ಕೆಂಪಮ್ಮದೇವಿ ಟ್ರಸ್ಟ್ ಅಧ್ಯಕ್ಷ ನರಸಿಂಹಯ್ಯ, ತೀರ್ಥಪುರ ಗ್ರಾ.ಪಂ.ಅಧ್ಯಕ್ಷ ವೈ.ಸಿ.ನಾಗರಾಜು, ಕರಿಯಮ್ಮ, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.

(Visited 16 times, 1 visits today)