ತುಮಕೂರು :
ವಿಧಾನ ಪರಿಷತ್ ಚುನಾವಣೆಯ ಮತದಾನದ ದಿನ ಸನ್ನಿಹಿತವಾಗುತ್ತಿದ್ದಂತೆ ಮೂರೂ ಪಕ್ಷಗಳಲ್ಲಿ ಚುನಾವಣೆ ರಂಗೇರುತ್ತಿದೆ. ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಗೆಲ್ಲುವ ತರಾತುರಿಯಲ್ಲಿದ್ದಾರೆ. ಆದರೆ, ಮತದಾರನ ಒಲವು ಯಾರೆಡೆ ಇದೆ ಎಂಬುದು ಇನ್ನೂ ಗೌಪ್ಯವಾಗೇ ಉಳಿಯುತ್ತದೆ.
5559 ಮತದಾರರನ್ನ ಹೊಂದಿದ್ದ ಈ ಕ್ಷೇತ್ರದಲ್ಲಿ 2623 ಪುರುಷ ಮತದಾರರು, 2936 ಮಹಿಳಾ ಮತದಾರರಿದ್ದಾರೆ.
328 ಗ್ರಾಮ ಪಂಚಾಯ್ತಿ, 1ಪಾಲಿಕೆ, 4 ಪುರಸಭೆ ಹಾಗೂ 4 ಪಟ್ಟಣ ಪಂಚಾಯ್ತಿಗಳನ್ನು ಹೊಂದಿದೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಶಾಸಕ ಕೆ.ಎನ್.ರಾಜಣ್ಣರ ಪುತ್ರ ಆರ್.ರಾಜೇಂದ್ರ ಕಣದಲ್ಲಿದ್ದರೆ, ಹಾಗಲವಾಡಿ ಜಿ.ಪಂ.ಸದಸ್ಯನ ಪುತ್ರ ಮಾಜಿ ಕೆಎಎಸ್ ಅಧಿಕಾರಿ ಅನಿಲ್ ಕುಮಾರ್ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದರೆ,
ಬೆಂಗಳೂರಿನ ಕಾರ್ಪೋರೇಟರ್ ಲೋಕೇಶ್ ಗೌಡ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದಾರೆ. ಮೂರೂ ಪಕ್ಷಗಳಲ್ಲಿ 3 ಅಭ್ಯರ್ಥಿಗಳು ಕೋಟ್ಯಾಧೀಶ್ವರರು, 3 ಅಭ್ಯರ್ಥಿಗಳಿಗೆ ಜನಾಭಿಪ್ರಾಯಕ್ಕಿಂತ ಹಣಬಲ ಪ್ರದರ್ಶನವೇ ಮಂದಾಗಿದೆ.
3 ಪಕ್ಷಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಾಟಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ರಾಜೇಂದ್ರರವರನ್ನ ಶತಾಯಗತಾಯ ಸೋಲಿಸಲೇ ಬೇಕೆಂಬ ಉದ್ದೇಶದಿಂದ ಜೆಡಿಎಸ್ ನ ವರಿಷ್ಠ ಹೆಚ್.ಡಿ.ದೇವೇಗೌಡರು ಈ ಕ್ಷೇತ್ರದಲ್ಲಿ ಮತಭೇಟೆಗಿಳಿದಿದ್ದು ಒಂದೆಡೆಯಾದರೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತನ್ನ ತಂದೆಯ ಸೋಲಿನ ಪ್ರತಿಕಾರವನ್ನ ತೀರಿಸಿಕೊಳ್ಳಲು ಶತಾಯಗತಾಯ ಪ್ರಯತ್ನಪಡುತ್ತಿದ್ದಾರೆ. ಒಟ್ಟಾರೆ ದೊಡ್ಡ ಗೌಡರ ಸೋಲಿನ ಸೇಡು ಕಿಡಿಯಾಗಿ ಈ ಚುನಾವಣೆಯಲ್ಲಿ ಸೇಡಿನ ದಳ್ಳುರಿಯನ್ನ ಜ್ವಲಿಸುತ್ತಿದೆ. ಗೌಡರ ಸೇಡಿನ ದಳ್ಳುರಿಯು ಕಾಂಗ್ರೆಸ್ ಅಭ್ಯರ್ಥಿಯನ್ನ ಆಹುತಿ ತೆಗೆದುಕೊಳ್ಳುತ್ತದೆ ಎಂಬ ಭ್ರಮೆಯಲ್ಲಿ ಜೆಡಿಎಸ್ಸಿಗರು ತೇಲಾಡುತ್ತಿದ್ದಾರೆ. ಜೆಡಿಎಸ್ ಪಕ್ಷದ ವರಿಷ್ಠರಿಗೆ ಮತ್ತು ಕಾರ್ಯಕರ್ತರಿಗೆ ಗೌಡರ ಸೋಲಿನ ಸೇಡಿನ ದಳ್ಳುರಿ ಎದ್ದು ಕಾಣುತ್ತಿದೆಯಾದರೂ, ಆರ್.ರಾಜೇಂದ್ರರವರನ್ನ ಸೋಲಿಸಬೇಕೆನ್ನುವ ಹಠ ಕೇವಲ ಎದ್ದು ಕಾಣುತ್ತಿದೆಯೇ ವಿನಹ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬರುತ್ತೇವೆಂಬ ನಂಬಿಕೆ ಅಷ್ಟರಮಟ್ಟಿಗೆ ಎದ್ದು ಕಾಣುತ್ತಿಲ್ಲ.
ಮಾಜಿ ಕೆಎಎಸ್ ಅಧಿಕಾರಿ ಅನಿಲ್ ರಾಜಕೀಯದಲ್ಲಿ ಇದೀಗ ದಾಪುಗಾಲಿಡುತ್ತಿರುವ ವ್ಯಕ್ತಿಯಷ್ಟೇ. ರಾಜಕೀಯದ ಗಂಧ-ಗಾಳಿಯರಿಯದ ಅನಿಲ್ ಕುಮಾರ್ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿರುವುದು ಕೇವಲ ಹಣ ಬಲದಿಂದ ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಕೃಪಾಕಟಾಕ್ಷ ಎಂಬುದು ಮತದಾರರ ಅರಿವಿಗೆ ಬಂದಂತಿದೆ. ಸದಾ ಜೆಡಿಎಸ್‍ನ ಭದ್ರಕೋಟೆಯಂತಿರುವ ಈ ವಿಧಾನಪರಿಷತ್ ಚುನಾವಣೆ ಜೆಡಿಎಸ್‍ನ ಪಾಲಿಗೆ ಅನಾಯಾಸವೂ ಹೌದು.
ಆದರೆ, ಬಿಜೆಪಿ ಪಕ್ಷದಲ್ಲಿನ ಒಕ್ಕಲಿಗ ಸಮುದಾಯದ ಅಭ್ಯರ್ಥಿ ಲೋಕೇಶ್ ಗೌಡರ ಸ್ಪರ್ಧೆ ಜೆಡಿಎಸ್ ನ ದಳಪತಿಗಳ ನಿದ್ದೆಗೆಡಿಸಿರುವುದು ಸಹಜ. ಹಾಲಿ 5 ಬಿಜೆಪಿ ಶಾಸಕರು, ಇಬ್ಬರು ಕರ್ನಾಟಕದ ಸಚಿವರು, ಇಬ್ಬರು ಬಿಜೆಪಿ ಸಂಸದರು, ಒಬ್ಬ ಕೇಂದ್ರ ಸಚಿವರು, ಓರ್ವ ಎಂಎಲ್‍ಸಿಯನ್ನೊಳಗೊಂಡ ಬಿಜೆಪಿ ಪಕ್ಷ ತನ್ನ ಅಭ್ಯರ್ಥಿಯನ್ನ ಗೆಲ್ಲಿಸಿಕೊಳ್ಳಲು ಅತ್ಯಂತ ಹೆಚ್ಚು ಶ್ರಮ ವಹಿಸುವ ಅಗತ್ಯತೆಯಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಕ್ಕೆ ಬಿಜೆಪಿ ಅಭ್ಯರ್ಥಿಯ ಗೆಲುವು ಪ್ರತಿಷ್ಠೆಯಾಗಿ ಕಂಡು ಬರುತ್ತಿದೆ.
ಇಡೀ ಜಿಲ್ಲೆಯಲ್ಲಿರುವ ಎಲ್ಲಾ ಬಿಜೆಪಿಯ ಜನಪ್ರತಿನಿಧಿಗಳು ಮತ್ತು ಮುಖಂಡರು ಪಕ್ಷ ನಿಷ್ಠೆಯನ್ನ ತೋರಿಸಿದರೆ ಸಾಕು ತಮ್ಮ ಪಕ್ಷದ ಅಭ್ಯರ್ಥಿಯನ್ನ(ಬಿಜೆಪಿ) ಅನಾಯಾಸವಾಗಿ ವಿಧಾನಸೌಧದ ಮೆಟ್ಟಿಲೇರಲು ಅನುವುಮಾಡಿಕೊಡಬಹುದು ಎನ್ನುವುದು ಬಿಜೆಪಿ ಕಾರ್ಯಕರ್ತರ ಲೆಕ್ಕಾಚಾರ.
ರಾಜೇಂದ್ರ ಮತಬೇಟೆಯಲ್ಲಿ :
ಇನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ರಾಜೇಂದ್ರ ಸ್ಥಳೀಯನೆಂಬ ಹಣೆಪಟ್ಟಿ ಹೊತ್ತು ತಂದೆಯ ಹೆಸರನ್ನ ಬಳಕೆ ಮಾಡಿಕೊಂಡು ಚುನಾವಣಾ ಅಖಾಡದಲ್ಲಿ ಮತಬೇಟೆಯಾಡುತ್ತಿದ್ದಾರೆ. ಆದರೆ, ಕಳೆದ ಲೋಕಸಭಾ ಚುನಾವಣೆಯ ಜೆಡಿಎಸ್ ಪಕ್ಷದ ಅಭ್ಯರ್ಥಿ ಹೆಚ್.ಡಿ.ದೇವೇಗೌಡರ ಸೋಲು ಒಕ್ಕಲಿಗ ಸಮುದಾಯದ ಪ್ರಬಲ ವಿರೋಧ, ಕುಂಚಿಟಿಗ ಸಮುದಾಯದ ಆಕ್ರೋಶ ದೊಡ್ಡಗೌಡರ ಕುಟುಂಬ ಆರ್.ರಾಜೇಂದ್ರ ಸೋಲಿನ ಸಿಹಿ ತಿನ್ನುವ ತವಕ ಕೊರಟಗೆರೆ ಕ್ಷೇತ್ರದ ಹಾಲಿ ಶಾಸಕ, ಹಿಂದಿನ ಕಾಂಗ್ರೆಸ್ ಸರ್ಕಾರದ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಗೆ ಕೆ.ಎನ್.ರಾಜಣ್ಣನವರ ಆಕ್ರೋಶದ ನುಡಿಗಳು, ‘ಪರಮೇಶ್ವರ್ ಹಠಾವೋ-ಕಾಂಗ್ರೆಸ್ ಬಚಾವೋ’ ಭಿತ್ತಿಪತ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣರವರನ್ನ ಜೈಲಿಗೆ ಕಳಿಸಿದ ಸೇಡು, ಜೀರೋ ಟ್ರಾಫಿಕ್ ನಿಂದನೆಗಳಿಂದ ದಲಿತ ಸಮುದಾಯದ ವಿರೋಧ, ಕೊಂಡವಾಡಿ ಚಂದ್ರಶೇಖರ್ ಮತ್ತು ಕೆಂಚಮಾರಯ್ಯನವರನ್ನ ರಾಜಕೀಯವಾಗಿ ಧಮನಿಸಲು ಹೊರಟ ವಿಚಾರ, 2018 ರ ವಿಧಾನಸಭಾ ಚುನಾವಣೆಯಲ್ಲಿ ಜಯಚಂದ್ರ ಸೋಲಿಗೆ ಕೆ.ಎನ್.ಆರ್ ಕಾರಣವೆಂಬ ವಿಚಾರ ಹೀಗೆ ಹಲವು ವಿಚಾರಗಳು ರಾಜೇಂದ್ರರವರ ಮತಬೇಟೆಗೆ ಅಡ್ಡಿ-ಆತಂಕಗಳನ್ನು ಉಂಟು ಮಾಡುತ್ತಿವೆ. ತಿಪಟೂರು ಮಾಜಿ ಶಾಸಕರು ಮತ್ತು ಕುಣಿಗಲ್ ನ ಹಾಲಿ ಶಾಸಕರ ತಟಸ್ಥ ನೀತಿಗಳು ಕಾಂಗ್ರೆಸ್ ಪಕ್ಷದೊಳಗಿನ ಮುಖಂಡರ ಇಬ್ಬಗೆಯ ನೀತಿ, ಆಂತರಿಕ ಭಿನ್ನಾಭಿಪ್ರಾಯಗಳು ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆಯೆಂಬ ಭಾವನೆಯನ್ನು ತೋರ್ಪಡಿಸಿಕೊಳ್ಳಲು ಹವಣಿಸುತ್ತಿರುವ ಕಾಂಗ್ರೆಸ್ ನಾಯಕರು ತಮ್ಮ ಆಂತರಿಕ ದಳ್ಳುರಿಯನ್ನ ದೂರವಿಟ್ಟು, ಪಕ್ಷದ ನಿಷ್ಠೆಯನ್ನ ಕೇಂದ್ರೀಕರಿಸಿದರೆ ಮಾತ್ರ ರಾಜೇಂದ್ರ ಪಾಲಿಗೆ ಎಲ್ಲವೂ ಸುಗಮವಾಗಬಹುದು. ಇಲ್ಲದಿದ್ದರೆ, ಈ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯ ಪಾಲಿಗೆ ಕಬ್ಬಿಣದ ಕಡಲೆಯಾಗುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಮಾಜಿ ಸಂಸದ ಮುದ್ದಹನುಮೇಗೌಡ, ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್, ತುರುವೇಕೆರೆಯ ಹಾಲಿ ಎಂಎಲ್‍ಸಿ ಬೆಮೆಲ್ ಕಾಂತರಾಜು, ಪಾವಗಡ ಶಾಸಕ ವೆಂಕಟರಮಣಪ್ಪರ ಬೆಂಬಲಗಳು ರಾಜೇಂದ್ರ ಪರವಾಗಿವೆ.
ಲೋಕೇಶ್ ಗೌಡರ ಗೆಲುವಿನ ಲೆಕ್ಕದಲ್ಲಿ ಬಿಜೆಪಿ :
ಬಿಜೆಪಿ ಪಕ್ಷ ಜಿಲ್ಲೆಯ ಅಭ್ಯರ್ಥಿಯನ್ನ ಕಣಕ್ಕಿಳಿಸದಿದ್ದರೂ, ಬಲಾಢ್ಯ ಜನಪ್ರತಿನಿಧಿಗಳನ್ನ ಹೊಂದಿದ್ದು, ಹಣಬಲ, ಜನಬಲ ಎಲ್ಲವನ್ನೂ ಇಟ್ಟುಕೊಂಡಿದೆ. ಅಭ್ಯರ್ಥಿ ಲೋಕೇಶ್ ಗೌಡರ ಪರವಾಗಿ ಗ್ರಾಮಾಂತರ ಮಾಜಿ ಶಾಸಕ ಬಿ.ಸುರೇಶ್ ಗೌಡರು ಶತಾಯಗತಾಯ ಗೆಲ್ಲಿಸಲು ಪಣತೊಟ್ಟಿದ್ದಾರೆ. ಇವರು ಅತಿ ಹೆಚ್ಚು ಬಿಜೆಪಿ ಪಕ್ಷದ ಗ್ರಾ.ಪಂ.ಸದಸ್ಯರ ಪ್ರಾಬಲ್ಯ ಹೊಂದಿದವರಾಗಿದ್ದು ಸದಸ್ಯರ ಮೇಲೆ ಹಿಡಿತ ಹೊಂದಿರುವುದು ಅನುಕೂಲಕರ ವಾತಾವರಣ ಸೃಷ್ಟಿಸಿದೆ. ಮಾಜಿ ಶಾಸಕ ಬಿ.ಸುರೇಶ್ ಗೌಡ, ತುರುವೇಕೆರೆ ಶಾಸಕ ಮಸಾಲಾ ಜಯರಾಮ್, ಸಚಿವ ಬಿ.ಸಿ.ನಾಗೇಶ್, ಸಚಿವ ಜೆ..ಸಿ.ಮಾಧುಸ್ವಾಮಿ, ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಶಿರಾ ಶಾಸಕ ಡಾ||ರಾಜೇಶ್, ಸಂಸದ ಬಸವರಾಜು, ಸಂಸದ ನಾರಾಯಣಸ್ವಾಮಿ, ಎಂಎಲ್‍ಸಿ ಚಿದಾನಂದಗೌಡರ ಬೆಂಬಲಗಳಿದೆ. ಆದರೆ, ಅದೇ ಪಕ್ಷದೊಳಗಿನ ಸಂಸದರೊಬ್ಬರು ಆಂತರಿಕವಾಗಿ ತನ್ನ ಗೆಲುವಿನ ಋಣ ತೀರಿಸಲು ತನ್ನ ಗೆಲುವಿಗೆ ಸಹಕಾರಿಯಾದ ಕಾಂಗ್ರೆಸ್ ಅಭ್ಯರ್ಥಿಯನ್ನ ಬೆಂಬಲಿಸುತ್ತಿರುವ ವಿಚಾರ ವ್ಯಾಪಕವಾಗಿ ಕೇಳಿಬರುತ್ತಿದೆ. ಆದರೆ, ಪಕ್ಷನಿಷ್ಠೆ, ಬಿಜೆಪಿಯ ಸಿದ್ಧಾಂತ-ಬದ್ಧತೆಗಳನ್ನು ಆ ಪಕ್ಷದ ಜನಪ್ರತಿನಿಧಿಗಳು ಧಿಕ್ಕರಿಸಲು ಸಾಧ್ಯವಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ಒಕ್ಕಲಿಗ ಸಮುದಾಯದವರಾಗಿದ್ದು, ಜಿಲ್ಲೆಯ ಪ್ರಬಲ ಒಕ್ಕಲಿಗ ಮತದಾರರ ಪ್ರಾಭಲ್ಯ ಹೊಂದಿದ್ದು, ಸಹಜವಾಗಿ ಒಕ್ಕಲಿಗ ಸಮುದಾಯ ಬಜಾಪ ಪಕ್ಷದ ಲೋಕೇಶ್ ಗೌಡರನ್ನ ಬೆಂಬಲಿಸಿದ್ದೇ ಆದರೆ, ಬಿಜೆಪಿ ಪಕ್ಷದ ಮತಬ್ಯಾಂಕ್ ಎಂದೇ ಹೆಸರುವಾಸಿಯಾದ ಲಿಂಗಾಯಿತರ ಮತಗಳು ಒಕ್ಕಲಿಗ ಮತದ ಜೊತೆ ಒಗ್ಗೂಡುವುದರಿಂದ ಮತ್ತು ಆಡಳಿತಾರೂಢ ಸರ್ಕಾರದ ಬೆಂಬಲವಿರುವುದರಿಂದ ಪಕ್ಷದೊಳಗೆ ಸ್ವಪಕ್ಷದ ಮುಖಂಡರ ಮತ್ತು ಪ್ರತಿನಿಧಿಗಳ ಪ್ರಬಲ ವಿರೋಧಗಳಿಲ್ಲದಿರುವುದರಿಂದ ಲೋಕೇಶ್ ಗೌಡರಿಗೆ ಸ್ವಪಕ್ಷಗಳಲ್ಲಿ ಅನ್ಯಾಯವಾಗದಿದ್ದರೆ, ಸಹಜವಾಗಿ ಕಮಲ ನಳನಳಿಸುವುದರಲ್ಲಿ ಅನುಮಾನವಿಲ್ಲವೆಂದು ಬಜಾಪ ಜನಪ್ರತಿನಿಧಿಗಳು ಹಾಗೂ ರಾಜಕೀಯ ವಿಶ್ಲೇಷಕರು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಿದ್ದಾರೆ.
ಗೌಡರ ಕಟ್ಟಾಳು ಅನಿಲ್ ಕುಮಾರ್ ನಗುವಿನಲ್ಲಿ :
ಪ್ರಾದೇಶಿಕ ಪಕ್ಷವೆಂಬ ಏಕವಾಕ್ಯದೊಂದಿಗೆ ದೊಡ್ಡ ಗೌಡರ ಮತ್ತು ಕುಟುಂಬದ ಕೃಪಾಶೀರ್ವಾದದೊಂದಿಗೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿ ಅನಿಲ್ ಕುಮಾರ್‍ಗೆ ಸದ್ಯದ ಮಟ್ಟಿಗೆ ಗುಬ್ಬಿ ಜೆಡಿಎಸ್‍ನ ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜುರವರ ಪ್ರಬಲ ವಿರೋಧ, ಜನರೊಂದಿಗೆ ಬೆರೆಯುವುದಿಲ್ಲವೆಂಬ ಹಣೆಪಟ್ಟಿ, ರಾಜಕಾರಣಿಯಲ್ಲವೆಂಬ ತಲೆಬರಹಗಳು, ಕೋಟಿಗಟ್ಟಲೆ ಹಣ ಮಾಡಿದ್ದಾರೆಂಬ ಆಪಾದನೆಯನ್ನ ಹೊರತಪಡಿಸಿದರೆ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾರೊಬ್ಬರ ವಿರೋಧಗಳೂ ಕಂಡುಬರುತ್ತಿಲ್ಲ. ಜೆಡಿಎಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಸ್ವತಃ ದೊಡ್ಡಗೌಡರೇ ಮತಬೇಟೆಗಿಳಿದಿದ್ದು ವರದಾನವಾಗಬಹುದು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇವರನ್ನ ಮಾಜಿ ಅಧಿಕಾರಿಯನ್ನಾಗಿ ಮಾರ್ಪಡಿಸಿ ಚುನಾವಣಾ ಅಖಾಡದಲ್ಲಿ ಧುಮುಕಿಸಿ ಬೆಂಬಲಿಸುತ್ತಿರುವುದು ವರದಾನವಾಗುವ ಸಾಧ್ಯತೆಗಳಿವೆ. ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು, ಕೊರಟಗೆರೆ ಮಾಜಿ ಶಾಸಕ ಸುಧಾಕರ್ ಲಾಲ್, ಪಾವಗಡದ ಮಾಜಿ ಶಾಸಕ ತಿಮ್ಮರಾಯಪ್ಪ, ತುರುವೇಕೆರೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಕುಣಿಗಲ್‍ನ ಮಾಜಿ ಶಾಸಕ ಡಿ.ನಾಗರಾಜಯ್ಯ, ತುಮಕೂರು ಗ್ರಾಮಾಂತರ ಹಾಲಿ ಶಾಸಕ ಡಿ.ಸಿ.ಗೌರಿಶಂಕರ್, ಮಧುಗಿರಿ ಹಾಲಿ ಶಾಸಕ ವೀರಭದ್ರಯ್ಯ ಮತಬೇಟೆಗಿಳಿದು ಅನಿಲ್ ಕುಮಾರ್ ಬೆಂಬಲಕ್ಕೆ ನಿಂತಿರುವುದು ಒಂದೆಡೆಯಾದರೆ, ಶಿರಾ ಕ್ಷೇತ್ರದಲ್ಲಿ ನಾಯಕನಿಲ್ಲದೇ ಚುನಾವಣೆಯನ್ನ ಎದುರಿಸುವಂತಾಗಿದೆ. ಜೆಡಿಎಸ್‍ನ ಹಾಲಿ ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಶಿರಾ ಕ್ಷೇತ್ರದವರಾದರೂ ಶಿರಾ ಕ್ಷೇತ್ರದಲ್ಲಿ ರಾಜಕೀಯ ಹಿಡಿತ ಸಾಧಿಸಿಲ್ಲ ಮತ್ತು ಜಿಲ್ಲೆಯಲ್ಲಿ ತಿಪ್ಪೇಸ್ವಾಮಿಯವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಹಾಗಾಗಿ ಜೆಡಿಎಸ್ ಪಕ್ಷ ಸ್ಪರ್ಧೆಗೆ ಪ್ರತಿಸ್ಪರ್ಧೆಯನ್ನ ತೀವ್ರವಾಗಿಯೇ ಒಡ್ಡಿದೆ. ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ತಾನು ಗೆಲ್ಲಲು ಪೂರಕವಾದ ವಾತಾವರಣಗಳನ್ನ ಸೃಷ್ಟಿಸಿಕೊಳ್ಳಲು ಸಹಕಾರಿಯಾದ ವಾತಾವರಣವಿದೆ ಎನ್ನುವುದು ಜೆಡಿಎಸ್ ಪಕ್ಷದವರ ಅಭಿಪ್ರಾಯ.
ಇಡೀ ಚುನಾವಣೆ ಮೂರೂ ಪಕ್ಷಗಳಿಗೂ ವ್ಯತಿರಿಕ್ತವಾದ ಅಭಿಪ್ರಾಯ-ಭಿನ್ನಾಭಿಪ್ರಾಯಗಳನ್ನು ಹೊಂದಿದ್ದು, ಒಂದೆಡೆಯಾದರೆ ಆಸೆ-ಆಮಿಷಗಳಿಗೆ ಬಲಿಯಾಗುತ್ತಿರುವ ಮತದಾರರು ಹಣಕ್ಕಾಗಿ ತಮ್ಮ ಮತಗಳನ್ನ ಹರಾಜಿಗಿಟ್ಟ ಸಂದರ್ಭಗಳು ಎದುರಾಗುತ್ತಿರುವುದರಿಂದ ಹಣಬಲವೊಂದಿರುವ ಬಲಾಢ್ಯರು ಚುನಾವಣೆಯಲ್ಲಿ ಗೆಲುವಿನ ನಗೆ ಬೀರಲಿದ್ದಾರೆ ಎನ್ನುವುದು ವಿಶೇಷ ಸಂಗತಿ.