ತುಮಕೂರು : 

      ರಾಜ್ಯ ಚುನಾವಣಾ ಆಯೋಗವು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ 28 ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ವೇಳಾಪಟ್ಟಿಯನ್ವಯ ಡಿಸೆಂಬರ್ 13ರಂದು ಚುನಾವಣಾ ನೋಟೀಸನ್ನು ಹೊರಡಿಸಲಾಗಿದ್ದು, ಡಿಸೆಂಬರ್ 17 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ನಾಮಪತ್ರಗಳ ಪರಿಶೀಲನೆಯನ್ನು ಡಿಸೆಂಬರ್ 18ರಂದು ನಡೆಸಲಾಗುವುದು. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಡಿಸೆಂಬರ್ 20 ಕಡೆಯ ದಿನವಾಗಿದೆ. ಮತದಾನ(ಅವಶ್ಯವಿದ್ದರೆ)ವನ್ನು ಡಿಸೆಂಬರ್ 27ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಹಾಗೂ ಮರು ಮತದಾನದ ಅವಶ್ಯವಿದ್ದಲ್ಲಿ ಡಿ.29ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಸಲಾಗುವುದು. ಮತಗಳ ಎಣಿಕೆಯು ಡಿಸೆಂಬರ್ 30ರ ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ.
ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡಿಸೆಂಬರ್ 13 ರಿಂದ 30ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಗ್ರಾಮ ಪಂಚಾಯತಿಯ ಯಾವುದೇ ಕ್ಷೇತ್ರದಲ್ಲಿ ನಾಮಪತ್ರ ಸ್ವೀಕೃತವಾಗದೆ ಚುನಾವಣಾ ಪ್ರಕ್ರಿಯೆ ಮುಂದುವರೆಯಲಾಗದೆ ಇರುವಂತಹ ಗ್ರಾಮ ಪಂಚಾಯತಿಗಳಲ್ಲಿ ಹಾಗೂ ಅಭ್ಯರ್ಥಿಗಳ ನಾಮಪತ್ರ ತಿರಸ್ಕøತ/ ನಾಮಪತ್ರ ಹಿಂತೆಗೆತ ಮತ್ತಿತರ ಕಾರಣಗಳಿಂದ ಯಾವುದೇ ಅಭ್ಯರ್ಥಿಯು ಕಣದಲ್ಲಿರದೆ ಆ ಗ್ರಾಮ ಪಂಚಾಯತಿಯ ಯಾವುದೇ ಸ್ಥಾನಕ್ಕೂ ಚುನಾವಣೆ ನಡೆಯದೇ ಇದ್ದಲ್ಲಿ ಅಥವಾ ಗ್ರಾ.ಪಂ.ನ ಚುನಾವಣೆ ಘೋಷಿಸಿರುವ ಎಲ್ಲಾ ಸ್ಥಾನಗಳೂ ಅವಿರೋಧವಾಗಿ ಆಯ್ಕೆಯಾಗಿ, ಆಯ್ಕೆಯಾದ ಅಭ್ಯರ್ಥಿಯ ಫಲಿತಾಂಶವನ್ನು ಚುನಾವಣಾಧಿಕಾರಿ ಘೋಷಿಸಿದಲ್ಲಿ ಅಂತಹ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದು ತಕ್ಷಣದಿಂದ ನಿಂತು ಹೋಗುತ್ತದೆ.

      ನೀತಿ ಸಂಹಿತೆಯು ಜಾರಿಯಲ್ಲಿರುವ ಪ್ರದೇಶಗಳಲ್ಲಿ ಮತದಾನವು ಮುಕ್ತಾಯಗೊಳ್ಳುವ ನಲವತ್ತೆಂಟು ಗಂಟೆಗಳ ಮೊದಲಿನ ಅವಧಿಯಲ್ಲಿ ಎಲ್ಲಾ ಮದ್ಯದಂಗಡಿ ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಮಾಲೀಕರು/ ಅಧಿಭೋಗದಾರರು ಮುಚ್ಚಬೇಕು. ಈ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾಧೀನದಲ್ಲಿಟ್ಟುಕೊಂಡಿರುವುದು ಅಥವಾ ಮದ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ಕಂಡು ಬಂದರೆ ಮುನ್ನಚ್ಚರಿಕಾ ಕ್ರಮವಾಗಿ ಅಂತಹವರನ್ನು ಚುನಾವಣಾ ಮುಕ್ತಾಯವಾಗುವವರೆಗೂ ಕಸ್ಟಡಿಯಲ್ಲಿ ಇಡಲಾಗುವುದು. ಚುನಾವಣಾ ಸಂದರ್ಭದಲ್ಲಿ ಭ್ರಷ್ಟಾಚಾರ ತಡೆಗಟ್ಟುವ ಬಗ್ಗೆ ಸೂಕ್ತ ತಂಡ ರಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಚುನಾವಣೆ ನಡೆಯುವ ಗ್ರಾ.ಪಂ. ಮತ್ತು ಸದಸ್ಯ ಸ್ಥಾನಗಳ ವಿವರ :-

      ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯತಿ ಉಪ ಚುನಾವಣೆಗೆ ಸಂಬಂಧಿಸಿದಂತೆ ತಾಲ್ಲೂಕುವಾರು ಖಾಲಿ ಇರುವ ಗ್ರಾಮ ಪಂಚಾಯತಿ, ಕ್ಷೇತ್ರ ಹಾಗೂ ಸದಸ್ಯ ಸ್ಥಾನಗಳ ವಿವರ ಇಂತಿದೆ.

      ಗುಬ್ಬಿ ತಾಲ್ಲೂಕಿನ ಅಂಕಸಂದ್ರ ಗ್ರಾಮಪಂಚಾಯತಿಯ ಎಲ್ಲಾ 10 ಕ್ಷೇತ್ರಗಳ 21 ಸದಸ್ಯ ಸ್ಥಾನ ಹಾಗೂ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮ ಪಂಚಾಯತಿಯ ಎಲ್ಲಾ 6 ಕ್ಷೇತ್ರಗಳ 14 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ತುರುವೇಕೆರೆ ತಾಲ್ಲೂಕು ಕೊಡಗೀಹಳ್ಳಿ ಗ್ರಾ.ಪಂ.ನ 02-ಕಲ್ಕೆರೆ ಕ್ಷೇತ್ರ, ತಂಡಗ ಗ್ರಾ.ಪಂ.ನ 02-ಗೋವಿಂದಘಟ್ಟ, ಹುಲ್ಲೇಕೆರೆ ಗ್ರಾ.ಪಂ.ನ 05-ಮಾಚೇನಹಳ್ಳಿ ಹಾಗೂ ಹಡವನಹಳ್ಳಿ ಗ್ರಾ.ಪಂ.ನ 06-ಮಾರಸಂದ್ರ; ತುಮಕೂರು ತಾಲ್ಲೂಕು ಮೈದಾಳ ಗ್ರಾ.ಪಂ.ನ 9-ಪಂಡಿತನಹಳ್ಳಿ(1), ಹರಳೂರು ಗ್ರಾ.ಪಂ.ನ 4-ಕೆ.ಗೊಲ್ಲಹಳ್ಳಿ ಹಾಗೂ ದೊಡ್ಡನಾರವಂಗಲ ಗ್ರಾ.ಪಂ.ನ 2-ಗೌಡಿಹಳ್ಳಿ; ಕುಣಿಗಲ್ ತಾಲ್ಲೂಕು ಇಪ್ಪಾಡಿ ಗ್ರಾ.ಪಂ.ನ 1-ಇಪ್ಪಾಡಿ ಹಾಗೂ ನಾಗಸಂದ್ರ ಗ್ರಾ.ಪಂ.ನ 1-ನಾಗಸಂದ್ರ; ಮಧುಗಿರಿ ತಾಲ್ಲೂಕು ಹೊಸಕೆರೆ ಗ್ರಾ.ಪಂ.ನ 6-ಅವರಗಲ್ಲು, ನೇರಳೆಕೆರೆ ಗ್ರಾ.ಪಂ.ನ 3-ದೊಡ್ಡಗೊಲ್ಲರಹಟ್ಟಿ ಹಾಗೂ ರಂಟವಳಲು ಗ್ರಾ.ಪಂ.ನ 1-ರಂಟವಳಲು; ಶಿರಾ ತಾಲ್ಲೂಕು ಕೊಟ್ಟ ಗ್ರಾ.ಪಂ.ನ 1-ಕೊಟ್ಟ ಹಾಗೂ ದ್ವಾರನಕುಂಟೆ ಗ್ರಾ.ಪಂ.ನ 1-ದ್ವಾರನಕುಂಟೆ; ಪಾವಗಡ ತಾಲ್ಲೂಕು ರಂಗಸಮುದ್ರ ಗ್ರಾ.ಪಂ.ನ 6-ಬೆಳ್ಳಿಬಟ್ಲು, ಪೋತಗಾನಹಳ್ಳಿ ಗ್ರಾ.ಪಂ.ನ 1-ಪೋತಗಾನಹಳ್ಳಿ, ಸಿದ್ಧಾಪುರ ಗ್ರಾ.ಪಂ.ನ 06-ಯಲ್ಲಪ್ಪನಾಯಕನಹಳ್ಳಿ, ನ್ಯಾಯದಗುಂಟೆ ಗ್ರಾ.ಪಂ.ನ 08-ಕೊಡಿಗೇಹಳ್ಳಿ ಹಾಗೂ ಚನ್ನಕೇಶವಪುರ ಗ್ರಾ.ಪಂ.ನ 01-ಚನ್ನಕೇಶವಪುರ(1); ಗುಬ್ಬಿ ತಾಲ್ಲೂಕು ಎಂ.ಹೆಚ್.ಪಟ್ಟಣ ಗ್ರಾ.ಪಂ.ನ 8-ಬೈಚೇನಹಳ್ಳಿ ಹಾಗೂ ಕಡಬ ಗ್ರಾ.ಪಂ.ನ 1-ಕಡಬ(1); ಕೊರಟಗೆರೆ ತಾಲ್ಲೂಕು ಎಲೆರಾಂಪುರ ಗ್ರಾ.ಪಂ.ನ 3-ಸಿಂಗ್ರಿಹಳ್ಳಿ, ನೀಲಗೊಂಡನಹಳ್ಳಿ ಗ್ರಾ.ಪಂ.ನ 4-ಚಿಕ್ಕಪಾಲನಹಳ್ಳಿ, ಅಕ್ಕಿರಾಂಪುರ ಗ್ರಾ.ಪಂ.ನ 1-ಅಕ್ಕಿರಾಂಪುರ ಹಾಗೂ ಮಾವತ್ತೂರು ಗ್ರಾ.ಪಂ.ನ 1-ಮಾವತ್ತೂರು; ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆ ಗ್ರಾ.ಪಂ. 7-ಕೆಂಗಲಾಪುರ ಕ್ಷೇತ್ರದಲ್ಲಿ ತಲಾ ಒಂದು ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

(Visited 14 times, 1 visits today)