ತುಮಕೂರು :
ಕರ್ನಾಟಕ ವಿಧಾನ ಪರಿಷತ್‍ಗೆ 14-ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಈಗಾಗಲೇ ಡಿಸೆಂಬರ್ 10ರಂದು ನಡೆದಿರುವ ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಡಿಸೆಂಬರ್ 14ರಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ನಡೆಸಲು ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಸಲು ಕೈಗೊಂಡಿರುವ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಮತ ಎಣಿಕಾ ಕೇಂದ್ರದಲ್ಲಿ ಡಿಸೆಂಬರ್ 14ರ ಬೆಳಿಗ್ಗೆ 6.30 ಗಂಟೆಯೊಳಗಾಗಿ ಜಿಲ್ಲಾಧಿಕಾರಿಗಳ ಕಛೇರಿಯಿಂದ ನೀಡಿರುವ ಗುರುತಿನ ಚೀಟಿಯೊಂದಿಗೆ ಹಾಜರಿರಬೇಕೆಂದು ಎಣಿಕಾ ಏಜೆಂಟ್ ಹಾಗೂ ಮತ ಎಣಿಕೆಗೆ ನಿಯೋಜನೆಗೊಂಡಿರುವ ಅಧಿಕಾರಿ/ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು
ಮತ ಪೆಟ್ಟಿಗೆಗಳು ಭದ್ರವಾಗಿರುವ ಭದ್ರತಾ ಕೊಠಡಿಯನ್ನು ಬೆಳಿಗ್ಗೆ 7.30 ಗಂಟೆಗೆ ತೆರೆದು 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎರಡು ಕೊಠಡಿಗಳಲ್ಲಿ 14 ಟೇಬಲ್‍ಗಳಲ್ಲಿ ಮತ ಎಣಿಕೆ ನಡೆಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಪ್ರತಿ ಟೇಬಲ್‍ಗೂ ತಲಾ ಒಬ್ಬ ಸೂಪರ್‍ವೈಸರ್, ಎಣಿಕಾ ಸಹಾಯಕ ಹಾಗೂ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ. ಮತ ಎಣಿಕೆಗಾಗಿ 42 ಅಧಿಕಾರಿ/ ಸಿಬ್ಬಂದಿ ಹಾಗೂ ಪೊಲೀಸ್ ಭದ್ರತೆಗಾಗಿ ಸುಮಾರು 100 ಮಂದಿ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಮತ ಎಣಿಕಾ ಕೇಂದ್ರದೊಳಗೆ ಬಾಲ್ ಪಾಯಿಂಟ್ ಪೆನ್ ಹೊರತುಪಡಿಸಿ ಇಂಕ್/ಇತರೆ ಪೆನ್‍ಗಳನ್ನು ತರಲು ಅವಕಾಶವಿರುವುದಿಲ್ಲ. ಅಲ್ಲದೆ ಮೊಬೈಲ್, ಕ್ಯಾಮೆರಾ, ಐಪ್ಯಾಡ್, ಬ್ಲೇಡ್, ಚಾಕು, ಬೀಡಿ, ಸಿಗರೇಟು, ಬೆಂಕಿಪೊಟ್ಟಣ, ಪಾನ್ ಮಸಾಲ, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಯಾವುದೇ ಪೊಟ್ಟಣ/ ಬಾಕ್ಸ್ ಹಾಗೂ ಎಲ್ಲಾ ಅಪಾಯಕರ/ ವಿಧ್ವಂಸಕ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಎಣಿಕಾ ಕೇಂದ್ರದೊಳಗೆ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಎಣಿಕಾ ಕೇಂದ್ರವನ್ನು ಪ್ರವೇಶಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಅಭ್ಯರ್ಥಿಗಳು/ ಚುನಾವಣಾ ಏಜೆಂಟರು/ ಮತ ಎಣಿಕೆ ಏಜೆಂಟರುಗಳು ತಮಗೆ ಅಗತ್ಯವಿರುವ ಕುಡಿಯುವ ನೀರು, ಉಪಹಾರ, ಇತ್ಯಾದಿಗಳನ್ನು ತಾವೇ ಒದಗಿಸಿಕೊಳ್ಳಬೇಕು. ಯಾವುದೇ ವ್ಯಕ್ತಿಯು ಮತ ಎಣಿಕಾ ಕಾರ್ಯ/ ಚುನಾವಣಾ ಕಾರ್ಯಕ್ಕೆ ತೊಂದರೆ ಉಂಟು ಮಾಡಿದಲ್ಲಿ/ ಅಸಭ್ಯವಾಗಿ ವರ್ತಿಸಿದಲ್ಲಿ ಕಾನೂನು ರೀತ್ಯಾ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಮತ ಎಣಿಕಾ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಒದಗಿಸಲು ನಿಯೋಜಿಸಲಾಗಿರುವ ಅಧಿಕಾರಿ/ ಸಿಬ್ಬಂದಿಗಳಿಗೆ ಕರ್ತವ್ಯಗಳ ಬಗ್ಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಅಜಯ್, ನಿರ್ಮಿತಿ ಕೇಂದ್ರದ ರಾಜಶೇಖರ್ ಮತ್ತಿತರರು ಹಾಜರಿದ್ದರು.