ತುಮಕೂರು :
ವಿಧಾನಪರಿಷತ್ ಚುನಾವಣೆಯಲ್ಲಿ ಮಾಜಿ ಶಾಸಕ ಕೆ.ರಾಜಣ್ಣರ ಪುತ್ರ ಆರ್. ರಾಜೇಂದ್ರ ಜಯ ಭೇರಿ ಬಾರಿಸಿದ್ದಾರೆ.
ರಾಜೇಂದ್ರರನ್ನ ಸೋಲಿಸಲು ತೊಡೆ ತಟ್ಟಿದ್ದ ದೊಡ್ಡ ಗೌಡರು ಮತ್ತು ಅವರ ಕುಟುಂಬದ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ತುಮಕೂರಿನ ಮತದಾರರು ದೊಡ್ಡ ಗೌಡರ ಆಟ ಜಿಲ್ಲೆಯಲ್ಲಿ ನಡೆಯುವುದಿಲ್ಲವೆಂಬ ಸ್ಪಷ್ಟ ಸಂದೇಶವನ್ನು ರವಾನಿಸುವ ಮುಖೇನ್ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಗೆಲುವಿಗೆ ಬೆಂಬಲಿಸಿದ್ದಾರೆ.
ಜೆಡಿಎಸ್ ನ ಭದ್ರಕೋಟೆಯಂತಿದ್ದ ತುಮಕೂರು ಜಿಲ್ಲೆ ದೊಡ್ಡ ಗೌಡರ ಆಗಮನದ ನಂತರ ಅವನತಿಯತ್ತ ಸಾಗುತ್ತಿದೆಯೇನೋ ಎಂಬ ಆತಂಕ ಜನರ ಮನಸ್ಸಿನಲ್ಲಿ ಮೂಡುತ್ತಿದೆ. ಇದಕ್ಕೆ ಇಂಬು ನೀಡುವಂತೆ ಕಳೆದೆರಡು ಬಾರಿ ಹಿಡಿತದಲ್ಲಿಟ್ಟುಕೊಂಡಿದ್ದ ವಿಪ್ ಕ್ಷೇತ್ರ ‘ಕೈ’ ಪಕ್ಷದ ಪಾಲಾಗುವ ಮುಖೇನ ಜೆಡಿಎಸ್ ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ ಎಂಬ ಸ್ಪಷ್ಟ ಸಂದೇಶ ನೀಡುತ್ತಿದೆ.
ಮೊದಲನೇ ಪ್ರಾಶಸ್ತ್ಯ ಮತದಲ್ಲಿ ಹೆಚ್ಚು ಮತಗಳನ್ನು ಪಡೆದರೂ ಗೆಲುವಿನ ದಡ ಸೇರಲು ಎರಡನೇ ಪ್ರಾಶಸ್ತ್ಯದ ಮತಗಳನ್ನು ಅವಲಂಬಿಸಬೇಕಾಯಿತು.
ಆರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ರಾಜೇಂದ್ರ ಸೋಲುತ್ತಾರೆಂಬ ಚರ್ಚೆ ನಡುವೆಯೂ ಬಿಜೆಪಿ ಅಭ್ಯರ್ಥಿಗಿಂತ 499 ಮತಗಳ ಅಂತರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಪ್ರತಿ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡೇ ಬಂದ ಆರ್. ರಾಜೇಂದ್ರ ಮೊದಲ ಪ್ರಾಶಸ್ತ್ಯದ ಮತಗಳಲ್ಲೂ ಮುನ್ನಡೆದರು. ಹಾಗಾಗಿ ಎರಡನೆ ಪ್ರಾಶಸ್ತ್ಯದ ಮತಗಳಲ್ಲಿ ಆರ್.ರಾಜೇಂದ್ರ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಆರ್. ರಾಜೇಂದ್ರ 2250 ಮತಗಳನ್ನು ಪಡೆದು ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರೆ, ಬಿಜೆಪಿಯ ಲೋಕೇಶ್ ಗೌಡ 1751 ಮತ ಗಳಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ 1296 ಮತಗಳನ್ನು ಪಡೆಯಲು ಶಕ್ತರಾಗಿದ್ದಾರೆ.
ಬಿಜೆಪಿಯ ಆಂತರಿಕ ಜಗಳ ಮತ್ತು ಜೆಡಿಎಸ್ ನ ಮನೆಯೊಂದು ಹಲವು ಬಾಗಿಲು ಎನ್ನುವ ಒಡಕಿನ ಲಾಭವನ್ನು ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಂಡಿರುವುದು ಈ ಫಲಿತಾಂಶದಿಂದ ವ್ಯಕ್ತವಾಗಿದೆ.
ತುಮಕೂರು ಜಿಲ್ಲೆಯಲ್ಲಿ ಆಡಳಿತಾರೂಢ ಬಿಜೆಪಿ ಇಬ್ಬರು ಸಚಿವರು ಸೇರಿದಂತೆ ಐವರು ಶಾಸಕರನ್ನು ಹೊಂದಿದ್ದರೂ ತನ್ನ ಅಭ್ಯರ್ಥಿ ಲೋಕೇಶ್ ಗೌಡ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ವಿಫಲವಾಗಿದೆ. ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಇದು ತೀವ್ರ ಹಿನ್ನಡೆಯಾಗಿದೆ.
ಆದರೆ ಜಿಲ್ಲೆಯಲ್ಲಿ ಕೆಎನ್ಆರ್ ಪ್ರಾಬಲ್ಯವನ್ನು ಮುರಿಯುವ ತಂತ್ರಗಳು ವಿಫಲಗೊಂಡಿವೆ. ಜೆಡಿಎಸ್ ವರಿಷ್ಠರಿಗೆ ಮುಖಭಂಗವಾಗಿದೆ. ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರು ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿಗೆ ಹಿಡಿಶಾಪ ಹಾಕುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋಲಿಗೆ ವರಿಷ್ಠರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.