ಮಧುಗಿರಿ :
ಶೈಕ್ಷಣಿಕ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರಿಗೆ ನೋಟೀಸ್ ನೀಡುವ ಬೆದರಿಕೆಯೊಡ್ಡಿ ಅವರ ಹೋರಾಟ ಮನೋಭಾವವನ್ನು ಹತ್ತಿಕ್ಕಲು ಯತ್ನಿಸುತ್ತಿರುವುದು ಖಂಡನೀಯ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಎನ್. ಮಹಲಿಂಗೇಶ್ ತಿಳಿಸಿದರು.
ಪಟ್ಟಣದ ಡಿಡಿಪಿಐ ಕಚೇರಿಯ ಮುಂದೆ ಗುರುಭವನ ಸಮಿತಿಯ ಅವ್ಯವಹಾರಗಳನ್ನು ಖಂಡಿಸಿ 9 ಶಿಕ್ಷಕರ ಸಂಘಗಳು ಹಮ್ಮಿಕೊಂಡಿದ್ದ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಯಾವುದೇ ಕಮಿಟಿಯ ಹಣಕಾಸಿನ ವ್ಯವಹಾರಗಳು ಪಾರದರ್ಶಕತೆಯಿಂದ ಕೂಡಿರಬೇಕು. ಎಲ್ಲಾ ವ್ಯವಹಾರಗಳನ್ನು ಚೆಕ್ ಮೂಲಕವೇ ನಡೆಸಬೇಕು ಎಂಬ ನಿಯಮವಿದ್ದರೂ ಈ ಎಲ್ಲಾ ನಿಯಮಗಳನ್ನು ಈಗ ಇರುವ ಗುರುಭವನ ಕಮಿಟಿ ಗಾಳಿಗೆ ತೂರಿದೆ. ಸಮಾಜದಲ್ಲಿ ಶಿಕ್ಷಕರಿಗೆ ಗೌರವಯುವ ಸ್ಥಾನವಿದ್ದು, ನಮ್ಮ ಹೋರಾಟ ಯಾವುದೇ ವ್ಯಕ್ತಿ ಅಥವಾ ಸಂಘದ ವಿರುದ್ದ ಅಲ್ಲ. ಗುರುಭವನ ಕಮಿಟಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಗೆಹರಿಸಲು ನಾವು ಹೋರಾಟ ಮಾಡುತ್ತಿದ್ದು, ಈಗ ಇರುವ ಗುರುಭವನ ಸಮಿತಿಯ ಪದಾಧಿಕಾರಿಗಳನ್ನು ಬದಲಾಯಿಸಿ ಪುನರ್ ರಚಿಸಬೇಕು ಎಂದು ಒತ್ತಾಯಿಸಿದರು.
ಪ್ರಾಥಮಿಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ್ ಮಾತನಾಡಿ ಅಂಗಡಿಗಳು ನಿರ್ಮಾಣವಾಗಿ ವರ್ಷ ಕಳೆದರೂ ಗುರುಭವನ ಸಮಿತಿಯವರು ಲೆಕ್ಕ ಪತ್ರಗಳನ್ನು ನೀಡದೆ ಮಳಿಗೆಗಳು ತಮ್ಮ ಸ್ವಂತ ಆಸ್ತಿಯಂತೆ ವರ್ತಿಸುತ್ತಿರುವುದು ಅತ್ಯಂತ ದುರಂತ. ಅಂದಿನಿಂದ ಇಲ್ಲಿಯ ವರೆಗೂ ಬಾಡಿಗೆ ವಸೂಲಿ ಮಾಡಲಾಗಿದ್ದು ಅಂದಾಜು 9 ಲಕ್ಷ ರೂ. ಬಾಡಿಗೆ ವಸೂಲಾಗಿದೆ. ಆದರೆ ಈ ಹಣ ಇಲ್ಲಿಯವರೆವಿಗೂ ಗುರುಭವನ ಸಮಿತಿಗೆ ಜಮೆಯಾಗಿರುವುದಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಕ್ರಮವಹಿಸಿ ಗುರುಭವನದ ವಾಣಿಜ್ಯ ಮಳಿಗೆಗಳ ಸಂಪೂರ್ಣ ಕಾಮಗಾರಿಯ ಖರ್ಚು, ವೆಚ್ಚಗಳನ್ನು ಪಾಸ್ ಬುಕ್ ಸಹಿತ ನೀಡಬೇಕು, 31 ಅಂಗಡಿ ಮಳಿಗೆಗಳಿಂದ ವಸೂಲಾಗಿರುವ 12 ತಿಂಗಳ ಬಾಡಿಗೆ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮ ಮಾಡಿಬೇಕು, ಸರಕಾರದ ಸುತ್ತೋಲೆಯಂತೆ ಗುರುಭವನ ಸಮಿತಿಯ ಅಧ್ಯಕ್ಷರು ಮತ್ತು ಖಜಾಂಚಿಗಳು ಜಂಟಿಯಾಗಿ ಖಾತೆಯನ್ನು ನಿರ್ವಹಿಸಬೇಕು, 31 ಅಂಗಡಿ ಮಳಿಗೆಯವರಿಂದ ಬಾಡಿಗೆಯನ್ನು ನಗದು ರೂಪದಲ್ಲಿ ವಸೂಲು ಮಾಡದೆ ನೇರವಾಗಿ ಗುರುಭವನ ಸಮಿತಿಯ ಜಂಟಿ ಖಾತೆಗೆ ಅಂಗಡಿಯವರೆ ಬಾಡಿಗೆಯನ್ನು ಸಂದಾಯ ಮಾಡಿ ಹಣವನ್ನು ಕಟ್ಟಿದ ರಶೀದಿಯನ್ನು ನಿರ್ವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಒಬ್ಬ ಗುಮಾಸ್ತರನ್ನು ನೇಮಿಸಬೇಕು, ಸರಕಾರದ ಸುತ್ತೋಲೆಯಂತೆ ಗುರುಭವನ ಸಮಿತಿಯು ಪುನರ್ ರಚನೆಯಾಗಬೇಕು. ಗುರುಭವನ ಸಮಿತಿಯಲ್ಲಿ ಆಗಿದೆ ಎನ್ನಲಾದ ಹಣಕಾಸಿನ ಅವ್ಯವಹಾರವನ್ನು ಕೂಲಂಕುಶವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೆಂಕಟರಾಮು ಮಾತನಾಡಿ ಈಗಿನ ಕಮಿಟಿಯಲ್ಲಿ ಅವ್ಯವಹಾರಕ್ಕೆ ಪ್ರೋತ್ಸಾಹ ನೀಡುತ್ತಿರುವವರಿಗೆ ತಕ್ಕ ಶಿಕ್ಷೆಯಾಗಬೇಕು. ಇಲ್ಲದಿದ್ದಲ್ಲಿ ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ನೀಡಲಾಗುವುದು ಎಂದರು.
ಮನವಿ ಸ್ವೀಕರಿಸಿದ ಡಿಡಿಪಿಐ ರವಿಶಂಕರರೆಡ್ಡಿ ಮಾತನಾಡಿ ಯಾವುದೇ ವ್ಯವಹಾರ ಬ್ಯಾಂಕಿನ ಖಾತೆಯ ಮೂಲಕ ನಡೆದಾಗ ಇಂತಹ ಸಮಸ್ಯೆಗಳು ಉದ್ಬವಿಸುವುದಿಲ್ಲ. ಬಿಇಓ ಗೆ ಅನುಭವದ ಕೊರತೆಯಿಂದ ಸಮಸ್ಯೆ ಉದ್ಬವವಾಗಿದೆ. ಒಂದು ವಾರದೊಳಗೆ ಬಿಇಓ ಅಧ್ಯಕ್ಷತೆಯಲ್ಲಿ ಗುರುಭವನ ಸಮಿತಿಯ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು. ಅವ್ಯವಹಾರ ನಡೆದದ್ದು, ಕಂಡು ಬಂದಲ್ಲಿ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ಉಪನ್ಯಾಸಕರ ಸಂಘದ ಅಧ್ಯಕ್ಷ ರಂಗಪ್ಪ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಎಸ್.ಸಿ ಎಸ್.ಟಿ ಶಿಕ್ಷಕರ ಸಂಘದ ಅಧ್ಯಕ್ಷ ಫಣೀಂದ್ರನಾಥ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಮಾಜಿ ಅಧ್ಯಕ್ಷ ಎಂ. ಶಿವಲಿಂಗಪ್ಪ, ಭಡ್ತಿ ಶಿಕ್ಷಕರ ಸಂಘದ ಅಧ್ಯಕ್ಷ ರಾಮಣ್ಣ, ಸರ್ವಜ್ಞ ವೇದಿಕೆಯ ಅಧ್ಯಕ್ಷ ವೆಂಕಟರವಣಪ್ಪ, ಹನುಮಂತರಾಯಪ್ಪ, ಬಸವರಾಜು, ನರಸೇಗೌಡ, ಶಿವಕುಮಾರ್, ವೀರಭದ್ರಪ್ಪ, ಪುಟ್ಟೇಗೌಡ ಇತರರು ಇದ್ದರು.