ತುಮಕೂರು :
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಅಭಿಯಾನ ಕಾರ್ಯಕ್ರಮ’ದಡಿ ಡಿಸೆಂಬರ್ 18ರಂದು ತುರುವೇಕೆರೆ ತಾಲ್ಲೂಕು ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ವಾಸ್ತವ್ಯ ಮಾಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ.
ಸರ್ಕಾರದ ಸೂಚನೆಯಂತೆ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯಿಂದ ಸ್ಥಗಿತಗೊಳಿಸಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಅಕ್ಟೋಬರ್ 18ರಂದು ಪುನರಾರಂಭಿಸುತ್ತಿರುವುದರಿಂದ ಎಲ್ಲಾ ಕಂದಾಯ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಲು ಕ್ರಮ ಕೈಗೊಳ್ಳಲಿದ್ದಾರೆ.
ನಿಗಧಿಪಡಿಸಿದ ತಾಲ್ಲೂಕಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಡೀಸಿ ಸೂಚನೆ:-
ಸರ್ಕಾರದ ನಿರ್ದೇಶನದಂತೆ ಪ್ರತಿ ತಿಂಗಳ 3ನೇ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಅಭಿಯಾನ ಕಾರ್ಯಕ್ರಮದಡಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ರಮದಲ್ಲಿ ಆಯಾ ತಾಲ್ಲೂಕು ತಹಶೀಲ್ದಾರರು ನಿಗಧಿಪಡಿಸಿರುವ ಗ್ರಾಮಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಗ್ರಾಮ ವಾಸ್ತವ್ಯ ಮಾಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಂಡು ಕೈಗೊಂಡ ಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿಗೆ ವರದಿ ಸಲ್ಲಿಸಬೇಕು. ಉಪವಿಭಾಗಾಧಿಕಾರಿಗಳು ಆಯಾ ಉಪವಿಭಾಗದ ಒಂದು ತಾಲ್ಲೂಕಿನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದ್ದಾರೆ.
ತುರುವೇಕೆರೆ ತಾಲ್ಲೂಕು ತಹಶೀಲ್ದಾರರು ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮ, ಚಿ.ನಾ.ಹಳ್ಳಿ ತಾಲ್ಲೂಕು ತಹಶೀಲ್ದಾರರು ಹಂದನಕೆರೆ ಹೋಬಳಿಯ ಕಾಮಲಾಪುರ ಗ್ರಾಮ, ತಿಪಟೂರು ತಾಲ್ಲೂಕು ತಹಶೀಲ್ದಾರರು ಹೊನ್ನವಳ್ಳಿ ಹೋಬಳಿಯ ಪಟ್ರೇಹಳ್ಳಿ, ತುಮಕೂರು ತಾಲ್ಲೂಕು ತಹಶೀಲ್ದಾರರು ಗೂಳೂರು ಹೋಬಳಿ ಮಸ್ಕಲ್ ವೃತ್ತ ಚಿಕ್ಕಕೊರಟಗೆರೆ ಗ್ರಾಮ, ಗುಬ್ಬಿ ತಾಲ್ಲೂಕು ತಹಶೀಲ್ದಾರರು ಚೇಳೂರು ಹೋಬಳಿ ತಾಳೆಕೊಪ್ಪ ಗ್ರಾಮ, ಕುಣಿಗಲ್ ತಾಲ್ಲೂಕು ತಹಶೀಲ್ದಾರರು ಹುಲಿಯೂರು ದುರ್ಗ ಹೋಬಳಿ ಹಳೇವೂರು ಗ್ರಾಮ, ಕೊರಟಗೆರೆ ತಾಲ್ಲೂಕು ತಹಶೀಲ್ದಾರರು ಹೊಳವನಹಳ್ಳಿ ಹೋಬಳಿ ಕಾಶಾಪುರ ಗ್ರಾಮ, ಮಧುಗಿರಿ ತಾಲ್ಲೂಕು ತಹಶೀಲ್ದಾರರು ದೊಡ್ಡೇರಿ ಹೋಬಳಿ ಹೂವಿನಮಡಗು ಗ್ರಾಮ, ಪಾವಗಡ ತಾಲ್ಲೂಕು ತಹಶೀಲ್ದಾರರು ಕಸಬಾ ಹೋಬಳಿ ಕೋಟಬಂಡೆ ಗ್ರಾಮ ಹಾಗೂ ಶಿರಾ ತಾಲ್ಲೂಕು ತಹಶೀಲ್ದಾರರು ಗೌಡಗೆರೆ ಹೋಬಳಿ ಡ್ಯಾಗೇರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ವಾಸ್ತವ್ಯ ಮಾಡಬೇಕೆಂದು ಅವರು ನಿರ್ದೇಶನ ನೀಡಿದ್ದಾರೆ.