ತುಮಕೂರು :
ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ರಚಿಸದ ಸಾಹಿತ್ಯ ಪ್ರಕಾರವಿಲ್ಲ ಎಂದು ಕವಿ, ಚಿತ್ರ ಸಾಹಿತಿ ಹಾಗೂ ನಿಯೋಜಿತ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ ನುಡಿದರು.
ನಗರದ ಅಮಾನಿಕೆರೆ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಉದ್ಘಾಟನೆ, ಕುವೆಂಪು ಜಯಂತಿ, ಅಭಿನಂದನಾ ಸಮಾರಂಭ ಹಾಗೂ ಪ್ರೇರಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನಕ್ಕೆ ಮತ್ತೊಂದು ಹೆಸರೇ ಕುವೆಂಪು. ಅವರು ತಮ್ಮ ಜ್ಞಾನದಿಂದ ವಸ್ತು-ವಿಷಯದ ನಿಜವಾದ ಸಾರಸಂಗ್ರಹವನ್ನು ಸಮರ್ಥವಾಗಿ ಬಣ್ಣಿಸುವ ಶಕ್ತಿ ಹೊಂದಿದ್ದರು. ಆದ್ದರಿಂದಲೇ ಅವರೊಬ್ಬ ವಾಗ್ದೇವಿಯ ಶಬ್ದ ಭಂಡಾರವನ್ನು ಸೂರೆಗೈದ ಕನ್ನಡದ ಏಕೈಕ ಮೇರು ಕವಿ ಎಂದರಲ್ಲದೆ, ಕನ್ನಡದ ಮತ್ತೋರ್ವ ಸಾಹಿತ್ಯ ಶ್ರೇಷ್ಠ ವರಕವಿ ದ.ರಾ.ಬೇಂದ್ರೆಯವರು ಕುವೆಂಪು ಅವರನ್ನು ಯುಗದ ಕವಿ, ಜಗದ ಕವಿ ಎಂದು ಬಣ್ಣಿಸಿದ್ದಾರೆಂಬುದನ್ನು ಸ್ಮರಿಸಿದರು.
ಕನ್ನಡ ಸಾಹಿತ್ಯ ಕ್ಷೇತ್ರಕಂಡ ಕವಿ ರತ್ನ ಕುವೆಂಪು. ಅವರು ಹಸಿರೇ ಉಸಿರೆಂದು ನಂಬಿದ್ದವರು. ಅವರ ಪ್ರಕೃತಿ ಆರಾಧನೆಯನ್ನು ಅವರ ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಕಾರ್ಯಕ್ರಮಗಳಲ್ಲಿ ಹಾರ, ಶಾಲುಗಳಿಗೆ ಬದಲಾಗಿ ಕನ್ನಡ ಪುಸ್ತಕಗಳನ್ನು ನೀಡುವ ಪ್ರವೃತ್ತಿ ಬೆಳೆಯಬೇಕು. ಕುವೆಂಪು ಅವರಂತೆಯೇ ಸಾಹಿತ್ಯವನ್ನು ಬೆಳೆಸುವ ಕಾರ್ಯಗಳಾಗಬೇಕು ಎಂದು ತಿಳಿಸಿದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಷಿ ಮಾತನಾಡಿ, ಜೀವನದಲ್ಲಿ ಗುರಿ ತಲುಪಲು ಗುರು ಇರಬೇಕು. ಕುವೆಂಪು ಅವರಿಗೆ ಸ್ವಾಮಿ ರಾಮಕೃಷ್ಣ ಪರಮಹಂಸರು ಹಾಗೂ ಸ್ವಾಮಿ ವಿವೇಕಾನಂದರು ಗುರುಗಳಾಗಿದ್ದರು. ಪ್ರಕೃತಿ ಮತ್ತು ಆಧ್ಯಾತ್ಮ ಕುವೆಂಪು ಅವರ ಸಾಹಿತ್ಯದ ಎರಡು ಕಣ್ಣುಗಳಾಗಿದ್ದವು ಎಂದು ತಿಳಿಸಿದರಲ್ಲದೆ, ಕಸಾಪ ಚುನಾವಣೆ ರಾಜಕೀಯ ಚುನಾವಣೆಯಂತಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ನಿಂತ 20 ಜನರು ಠೇವಣಿಯನ್ನು ಕಳೆದುಕೊಂಡಿರುವುದು ಇದೇ ಮೊದಲು. ನಂಬಿಕೆಯಿಟ್ಟು ಮತ ನೀಡಿದವರ ವಿಶ್ವಾಸ ಉಳಿಸಿಕೊಂಡು ಹೋಗುವ ಕೆಲಸ ಮಾಡಲಾಗುವುದು. ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಪರಿಷತ್ತನ್ನಾಗಿ ಮಾಡಲಾಗುವುದು ಎಂದರು.
ಸಾಹಿತಿ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ಕನ್ನಡ ನಾಡು ನುಡಿಗಾಗಿ ಶ್ರಮಿಸಿದವರ ಬಗ್ಗೆ ಅಭಿನಂದನಾ ನುಡಿಗಳನ್ನಾಡುತ್ತಾ, ಇತಿಹಾಸಗಳಲ್ಲಿ ಓದಿರುವಂತೆ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯರ ಅವಧಿಯಲ್ಲಿ ಕನ್ನಡ ಸಾಹಿತ್ಯದ ಕಂಪು ದೇಶಾದ್ಯಂತ ಪಸರಿಸಿತ್ತು. ಅಂದಿಗೆ ಅವರನ್ನು ಕರ್ನಾಟಕ ರಾಜ್ಯ ರಮಾರಮಣ ಎಂದೂ ಬಣ್ಣಿಸಲಾಗುತ್ತಿತ್ತು. ನಂತರ ಮೈಸೂರಿನ ಕೃಷ್ಣರಾಜ ಒಡೆಯರ್ ಅವರ ಕಾಲಘಟ್ಟದಲ್ಲಿ ರಾಜ್ಯ ಸಾಹಿತ್ಯದ ಜೊತೆಗೆ ಸಾಂಸ್ಕøತಿಕ ಹಾಗೂ ಅಭಿವೃದ್ಧಿ ಕ್ಷೇತ್ರಗಳಲ್ಲಿಯೂ ಉನ್ನತ ಸ್ಥಾನದಲ್ಲಿತ್ತು. ಮಾನವೀಯತೆಯ ಮಂದಾರವಾಗಿದ್ದ ಒಡೆಯರ್ ರೈತರಿಗಾಗಿ ಇಂದಿನ ಕೃಷ್ಣ ರಾಜ ಸಾಗರ ಅಣೆಕಟ್ಟು, ಮೈಸೂರು ವಿಶ್ವ ವಿದ್ಯಾಲಯ, ಮೈಸೂರು ಬ್ಯಾಂಕ್, ಭದ್ರಾವತಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ, ಗಂಧದೆಣ್ಣೆ ಕಾರ್ಖಾನೆ, ಕಾಗದದ ಕಾರ್ಖಾನೆ, ವಾಣಿ ವಿಲಾಸ ಸಾಗರ ಅಣೆಕಟ್ಟು, ತುಮಕೂರು ಜಿಲ್ಲೆಯಲ್ಲಿ ಮಾರ್ಕೋನಳ್ಳಿ ಅಣೆಕಟ್ಟು ಹೀಗೆ ಕೃಷಿ, ಕೈಗಾರಿಕೆ, ಕಲೆ, ಸಂಗೀತ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕ್ರಾಂತಿಯನ್ನೇ ಮಾಡಿದರು ಎಂದು ತಿಳಿಸಿದರು.
ಕನ್ನಡ ಸಾಹಿತ್ಯವನ್ನು ಪರಿಷತ್ತಿನ ಮೂಲಕ ಹಿಮದ ಗಡಿಯಿಂದ ಕಡಲ ತಡಿಯವರೆಗೂ ಶ್ರೀಗಂಧದಂತೆ ಕನ್ನಡವನ್ನು ಮತ್ತಷ್ಟು ಪಸರಿಸುವ ಕೆಲಸ ಮಾಡುತ್ತಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಪುರಸ್ಕøತ ಡಾ. ಮಹೇಶ್ ಜೋಷಿ ಹಾಗೂ ಚಿತ್ರ ಸಾಹಿತ್ಯದ ಮೂಲಕ ಕನ್ನಡ ನಾಡಿನ ಮನೆ-ಮನಗಳಲ್ಲಿರುವ ನಮ್ಮ ಜಿಲ್ಲೆಯವರೇ ಆಗಿರುವಂತಹ ಪದ್ಮಶ್ರೀ ಪುರಸ್ಕøತ ಡಾ.ದೊಡ್ಡರಂಗೇಗೌಡ ಅವರನ್ನು ಅಭಿನಂದಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಮಾತನಾಡಿ, ಕನ್ನಡ ನಾಡು ರಂಗಭೂಮಿಯ ಜೊತೆಗೆ ಸಾಹಿತ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ. ಜಿಲ್ಲೆಗೆ ಕೀರ್ತಿ ತರುವಂತಹ ನವ ಲೇಖಕರು, ಸಾಹಿತಿಗಳು ಹುಟ್ಟಿಕೊಳ್ಳುತ್ತಿದ್ದು, ಅಂತಹವರನ್ನು ಗಟ್ಟಿಗೊಳಿಸುವ ಕಾರ್ಯವನ್ನು ಪರಿಷತ್ತು ಮಾಡಬೇಕಾಗಿದೆ ಎಂದರು.
ಯಾವುದೇ ಕಾಲಘಟ್ಟವಾದರೂ ಅದಕ್ಕೆ ಚಲನಶೀಲತೆ ಎನ್ನುವುದು ಬಹಳ ಮುಖ್ಯ. ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಪರಿಷತ್ತಿನ ಕೆಲವು ಸದಸ್ಯರಲ್ಲಿ ಸಂಘಟನೆ ಕಡಿಮೆಯಾಗುತ್ತಿದೆ. ಇತಿಹಾಸದಲ್ಲಿ ಮುಚ್ಚಿಹೋಗಿರುವಂತಹ ಸಾಹಿತ್ಯದ ಎಷ್ಟೋ ವಿಷಯಗಳನ್ನು ಮುನ್ನೆಲೆಗೆ ತರುವಂತಹ ಕೆಲಸವಾಗಬೇಕು. ಪರಿಷತ್ತಿನ ಕಚೇರಿಗಳಿಲ್ಲದ ಜಿಲ್ಲೆ/ತಾಲ್ಲೂಕುಗಳಲ್ಲಿ ನಿವೇಶನ ಅಥವಾ ಕಟ್ಟಡವನ್ನು ನಿರ್ಮಿಸಿ ಕೊಡಬೇಕೆಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಕನ್ನಡದ ಅಗ್ರಮಾನ್ಯ ಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಅವರ ದೈನಂದಿನ ಚಟುವಟಿಕೆ, ಕವಿಯಾಗಿ, ಸಾಮಾನ್ಯ ವ್ಯಕ್ತಿಯಾಗಿ ಅವರು ಮಾಡುತ್ತಿದ್ದ ಸಮಾಜಮುಖಿ ಕಾರ್ಯಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ವಿಶ್ವ ಮಾನವ ದಿನಾಚರಣೆಯನ್ನು ಸಾರ್ಥಕಗೊಳಿಸಬೇಕು ಎಂದರು.
ಜಿಲ್ಲಾ ಮಟ್ಟದಲ್ಲಿ ಸ್ಥಾಪಿತವಾಗುವ ಸಾಹಿತ್ಯ ಪರಿಷತ್ತಿನ ಘಟಕಗಳು ಜಡತ್ವವನ್ನು ಬಿಟ್ಟು ಸದಾ ಚೈತನ್ಯಶೀಲವಾಗಿರಬೇಕು. ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತಿನ ಕಚೇರಿಗಳು ಇಲ್ಲದಿರುವ ಕಡೆಗಳಲ್ಲಿ ಸರ್ಕಾರಿ ಕಚೇರಿಗಳನ್ನೇ ಪರಿಷತ್ತಿನ ಚಟುವಟಿಕೆಗಳಿಗಾಗಿ ಬಿಟ್ಟುಕೊಡಲಾಗಿದೆ. ಕಟ್ಟಡ ಇಲ್ಲದಿರುವುದನ್ನೇ ಸವಾಲೆಂದು ನೋಡದೆ ಕನ್ನಡ ಭಾಷೆ, ನಾಡು-ನುಡಿಯ ಏಳ್ಗೆಗಾಗಿ ಮಾಡಬಹುದಾದಂತಹ ಕಾರ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪರಿಷತ್ತಿನ ತಾಲೂಕು ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.