ತುಮಕೂರು:
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್.ಐ.ವಿ(ಏಡ್ಸ್) ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಸೋಂಕಿನ ಪ್ರಮಾಣವನ್ನು ಸೊನ್ನೆಗೆ ತರುವಲ್ಲಿ ಆರೋಗ್ಯ ಇಲಾಖೆಯೊಂದಿಗೆ ಎಲ್ಲಾ ಇಲಾಖೆಗಳು, ಸಂಘ-ಸಂಸ್ಥೆಗಳು, ಜನಸಾಮಾನ್ಯರು ಸಹಕರಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಿಕಾ ಮನವಿ ಮಾಡಿದರು.
ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ನಗರ ಪಾಲಿಕೆಯ ಬಳಿ ಇಂದು ಬೆಳಿಗ್ಗೆ ಏರ್ಪಡಿಸಿದ್ದ ಜಾಗೃತಿ ಜಾಥಾ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿ ವರ್ಷದಂತೆ ಈ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ವರ್ಷ “ತಮ್ಮ ಹೆಚ್.ಐ.ವಿ. ಸ್ಥಿತಿಯನ್ನು ತಿಳಿದುಕೊಳ್ಳಿ” ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಜಾಥಾ ಕಾರ್ಯಕ್ರಮದಲ್ಲಿ ಎರಡನೇ ಅಧಿಕ ಜಿಲ್ಲಾ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ್, ಆರನೇ ಅಧಿಕ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ್ ಸ್ವಾಮಿ ಹೆಚ್.ಎಸ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಾಬಾ ಸಾಹೇಬ ಜಿನರಾಳ್ಕರ್, ತುಮಕೂರು ವಿಶ್ವ ವಿದ್ಯಾನಿಲಯದ ಉಪಕುಲಪತಿ ಸಿದ್ದೆಗೌಡ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ: ಸನತ್‍ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ: ವೀರಭದ್ರಯ್ಯ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ವಿವಿಧ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಎನ್‍ಎಸ್‍ಎಸ್ ಘಟಕ, ಎನ್‍ಸಿಸಿ ಘಟಕ, ವಿವಿಧ ನರ್ಸಿಂಗ್ ಕಾಲೇಜು, ಐಸಿಟಿಸಿ ಕೇಂದ್ರ, ಐಆರ್‍ಟಿ ಕೇಂದ್ರ, ರಕ್ತನಿಧಿ ಕೇಂದ್ರಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಜಾಥಾ ಕಾರ್ಯಕ್ರಮವು ಟೌನ್ ಹಾಲ್ ಸರ್ಕಲ್‍ನಿಂದ ಜಿಲ್ಲಾಆಸ್ಪತ್ರೆ, ಮಂಡಿಪೇಟೆ, ಚರ್ಚ್ ಸರ್ಕಲ್ ಮುಲಕ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳ ಕಛೇರಿಯನ್ನು ತಲುಪಿತು. ಏಡ್ಸ್ ದಿನಾಚರಣೆ ಅಂಗವಾಗಿ ಕೆ.ಎಸ್.ಆರ್.ಟಿ.ಸಿ/ ಖಾಸಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ, ಮತ್ತಿತರ ಪ್ರದೇಶಗಳಲ್ಲಿ ಹೆಚ್.ಐ.ವಿ. ಕುರಿತು ಅರಿವು ಮೂಡಿಸಲು ಮಳಿಗೆಗಳನ್ನು ತೆರೆಯಲಾಗಿತ್ತು. ಕರಪತ್ರ, ಬೀದಿ ನಾಟಕ, ಜಾನಪದ ಕಾರ್ಯಕ್ರಮ ಪ್ರದರ್ಶನ ಹಾಗೂ ಮಾನವ ಸರಪಳಿ ನಿರ್ಮಿಸುವ ಮೂಲಕ ಏಡ್ಸ್ ನಿಯಂತ್ರಿಸುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಯಿತು.