ತುಮಕೂರು :
ಜಿಲ್ಲೆಯಲ್ಲಿ ಕೋವಿಡ್ ಹಾಗೂ ಒಮಿಕ್ರಾನ್ ಹರಡುವಿಕೆ ಪ್ರಮಾಣ ಹೆಚ್ಚಾಗುತ್ತಿದ್ದು, ಮೊದಲನೇ ಹಾಗೂ ಎರಡನೇ ಡೋಸ್ ಲಸಿಕೆ ನೀಡುವಲ್ಲಿ ವಿಳಂಬ ಮಾಡದೇ ಲಸಿಕಾಕರಣವನ್ನು ಶೇ.100ರಷ್ಟು ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 200ರ ಗಡಿ ದಾಟಿದೆ. ಈ ಸಂದರ್ಭದಲ್ಲಿ ಲಸಿಕೆ ನೀಡುವಲ್ಲಿ ವಿನಾಕಾರಣ ಮುಂದೂಡದೆ ಲಸಿಕೆ ನೀಡಬೇಕು ಎಂದರಲ್ಲದೆ, ಎರಡನೇ ಡೋಸ್ ಲಸಿಕಾಕರಣ ಶೇ.80ರಷ್ಟಾಗಿದ್ದು, ಲಸಿಕೆ ಪಡೆಯಲು ಹಿಂಜರಿಯುವ ನಿಗಧಿತ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಿ ಲಸಿಕೆ ಹಾಕಿಸಿಕೊಳ್ಳಲು ಮನವೊಲಿಸುವ ಮೂಲಕ ಶೀಘ್ರವಾಗಿ ಶೇ.100ರಷ್ಟು ಗುರಿ ಸಾಧಿಸಬೇಕು ಎಂದು ತಿಳಿಸಿದರು.
ಹಾಸ್ಟೆಲ್‍ಗಳಲ್ಲಿ ಕೋವಿಡ್ ಪಾಸಿಟೀವ್ ಪ್ರಕರಣ ವರದಿಯಾದಲ್ಲಿ ಸೋಂಕಿತ ವಿದ್ಯಾರ್ಥಿಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಬೇಕು. ಪ್ರತಿದಿನ 2 ಬಾರಿಯಂತೆ ವೈದ್ಯರು ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುವುದರ ಜೊತೆಗೆ ಪ್ರಕರಣ ಕಂಡುಬಂದ ಕೂಡಲೇ ಶಾಲೆಯ ಎಲ್ಲರನ್ನೂ ಪರೀಕ್ಷೆಗೊಳಪಡಿಸಬೇಕು. ಪ್ರಕರಣ ವರದಿಯಾದ ದಿನದಿಂದ 7 ದಿನಗಳ ಕಾಲ ರಜೆ ಘೋಷಣೆ ಮಾಡಬೇಕು. ಪಾಸಿಟೀವ್ ಪ್ರಕರಣಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಆರ್‍ಟಿಪಿಸಿಆರ್ ಪರೀಕ್ಷೆಯನ್ನು ನಡೆಸಬೇಕು ಹಾಗೂ ಪರೀಕ್ಷೆ ನಡೆಸಿರುವ ಕುರಿತು 2 ದಿನಗಳೊಳಗೆ ವರದಿ ನೀಡಬೇಕು. ಜಿಲ್ಲೆಯಲ್ಲಿ ಸ್ಥಾಪಿಸಿರುವ ಎಲ್ಲಾ ಆಕ್ಸಿಜûನ್ ಘಟಕಗಳನ್ನು ಸಕ್ರಿಯ ಹಾಗೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ತಾಲೂಕು ವೈದ್ಯಾಧಿಕಾರಿಗಳಿಗೆ ನಿರ್ದೇಶಿಸಿದರು.
ಮಧುಗಿರಿ ತಾಲೂಕಿಗೆ ಬಂಧಿಖಾನೆ ಕಾಮಗಾರಿಗಾಗಿ ಸರ್ಕಾರಿ ಜಮೀನನ್ನು ಕೂಡಲೇ ಮಂಜೂರು ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಅತೀವೃಷ್ಟಿ ಸಂಬಂಧ ಪರಿಹಾರ ಪೋರ್ಟಲ್ ಎಂಟ್ರಿಗಳು, ಭೂಮಿ ಪೆಂಡೆನ್ಸಿ, ಪೈಕಿ ಪಹಣಿ ಒಗ್ಗೂಡಿಸುವಿಕೆ, ಪಹಣಿ ಕಲಂ 3/9 ಮಿಸ್ ಮ್ಯಾಚ್, ಆಧಾರ್ ಸೀಡಿಂಗ್ ಸೇರಿದಂತೆ ಇತರೆ ಯಾವುದೇ ಪ್ರಕರಣಗಳಲ್ಲಿನ ತಾಂತ್ರಿಕ ದೋಷಗಳನ್ನು ಬಗೆಹರಿಸಿಕೊಂಡು ವಿನಾ ಕಾರಣ ಮುಂದೂಡದೆ ನಿರ್ಧಿಷ್ಟ ಸಮಯದೊಳಗೆ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ಅತೀವೃಷ್ಟಿಯಿಂದ ಸಂಭವಿಸಿದ ಮನೆ ಹಾನಿ ಹಾಗೂ ಪರಿಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ನಿಗಧಿಪಡಿಸಿರುವ ಎ, ಬಿ ಹಾಗೂ ಸಿ ಗ್ರೂಪ್‍ಗಳಿಗೆ ಸೇರದ ಪ್ರಕರಣಗಳನ್ನು ಕೈಬಿಡಬೇಕು ಮತ್ತು ನೈಜ ಫಲಾನುಭವಿಗಳಿಗೆ ಶೀಘ್ರ ಪರಿಹಾರ ಚೆಕ್ ವಿತರಣೆ ಮಾಡಬೇಕು. ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದಲ್ಲಿ ಅಂತಹವರ ವಿರುದ್ಧ ಯಾವುದೇ ರೀತಿಯ ದೂರುಗಳು ಕೇಳಿಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಅರಣ್ಯಾಧಿಕಾರಿ ಡಾ.ಎಸ್.ರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ:ನಾಗೇಂದ್ರಪ್ಪ, ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.