ಗುಬ್ಬಿ :
ಸುಮಾರು 40 ವರ್ಷಗಳಿಂದ ಭೂ ಸಾಗುವಳಿ ಮಾಡುತ್ತಿರುವ ರೈತರ ಭೂಮಿಯನ್ನು ಅರಣ್ಯ ಪ್ರದೇಶವೆಂದು ದಾಖಲಾತಿಗಳು ಇಲ್ಲದಿದ್ದರೂ ಅಧಿಕಾರಿಗಳು ಒಕ್ಕಲೆಬ್ಬಿಸಲು ಹೋಗುತ್ತಿರುವುದು ಎಷ್ಟು ಸಮಂಜಸವೆಂದು ಗುಬ್ಬಿ ವಲಯ ಅರಣ್ಯ ಇಲಾಖೆಯ ಅಧಿಕಾರಿ ದುಗ್ಗಪ್ಪನವರ ಮೇಲೆ ಶಾಸಕ ಎಸ್.ಆರ್.ಶ್ರೀನಿವಾಸ್ ಕಿಡಿಕಾರಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣಲ್ಲಿ ಕರೆದಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು. ರಂಗನಹಳ್ಳಿ ಸರ್ವೆ ನಂ 7ರಲ್ಲಿ ಸುಮಾರು 40 ವರ್ಷಗಳಿಂದ 35ಜನ ರೈತರು ಭೂ ಸಾಗುವಳಿ ಮಾಡಿಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದು ಈಗಾಗಲೇ ಈ ಕೃಷಿ ಭೂಮಿಯಲ್ಲಿ ಕೊಳವೆಬಾವಿ ಕೊರೆಸಿದ್ದು ಹಾಗೂ ತೆಂಗಿನಗಿಡ, ಹುಣಸೇಗಿಡಗಳನ್ನು ಬೆಳೆಸಿರುವುದು ಅಧಿಕಾರಿಗಳ ಕಣ್ಣಿಗೆ ಕಾಣಲಿಲ್ಲವೇ ? ಈಗ ಒಕ್ಕಲೆಬ್ಬಿಸುವ ಹಂತಕ್ಕೆ ಹೋಗಲು ಕಾರಣವೇನು ? ತಾಲ್ಲೂಕು ದಂಡಾಧಿಕಾರಿಗಳೇ ಭೂಒಡೆತನದ ಹಕ್ಕುಪತ್ರ ನೀಡಿದ್ದು ಸರ್ಕಾರ ನೀಡಿದಂತಾಗಲಿಲ್ಲವೇ ? ಎಂದ ಅವರು ಮುಂದಿನ ದಿನದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕರೆದುಕೊಂಡು ಒಕ್ಕಲೆಬ್ಬಿಸುವ ಹಂತಕ್ಕೆ ತಲುಪಿದ್ದಲ್ಲಿ ನಾನೇ ಆ ರೈತರಿಂದಲೇ ತೆಂಗಿನಮರಕ್ಕೆ ಕಟ್ಟಿಹಾಕಿಸಿ ಆರಕ್ಷಕ ಠಾಣೆಗೆ ದೂರು ಕೊಡಿಸುತ್ತೇನೆ ಎಂದು ಎಚ್ಚರಿಸಿದರು.
ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಸಹಾಯಕ ನಿರ್ದೇಶಕರು ಮಾತನಾಡಿ 1264 ಹೆಕ್ಟೇರ್ ರಾಗಿ ಬೆಳೆ ಹಾಳಾಗಿದ್ದು ಸರ್ಕಾರದಿಂದ ಬರುವ ಪರಿಹಾರಧನವನ್ನು ನೇರವಾಗಿ ರೈತರ ಖಾತೆಗಳಿಗೆ ಹಾಕಿರುವುದಾಗಿ ತಿಳಿಸಿದರು. ಕಡಬ ಕೆರೆಯು ತುಂಬಿದ್ದು ಹಿನ್ನಿರಿನಿಂದ ಬೆಳೆಯುವಂತಹ ಭತ್ತದ ಬಿತ್ತನೆ ಬೀಜವನ್ನು ರೈತರು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಪಡೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪಂಚಾಯತ್‍ನ ಸಹಾಯಕ ಕಾರ್ಯಪಾಲಕ ಇಂಜಿನಿಯರ್‍ರವರಿಗೆ ಶಾಸಕರು ಪ್ರಶ್ನಿಸಿ ಗುದ್ದಲಿ ಪೂಜೆ ನೆರವೇರಿಸಿ 1 ತಿಂಗಳೊಳಗಾಗಿ ರಸ್ತೆ ನಿರ್ಮಿಸಿ 3 ದಿನಗಳೊಳಗಾಗಿ ರಸ್ತೆ ಹದಗೆಟ್ಟಿದೆ. ಇದರಿಂದ ಸರ್ಕಾರದ ಹಣವು ಎಲ್ಲಿ ಸೋರಿಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಂಡರೆ ಸಂಪೂರ್ಣ ಜವಾಬ್ದಾರಿಯನ್ನು ಪ್ರತಿ ಹಂತದಲ್ಲೂ ಪರೀಕ್ಷಿಸಿ ಸರಿಯಾದ ರಸ್ತೆಗಳನ್ನು ನಿರ್ಮಿಸಬೇಕೆಂದು ಇಂಜಿನಿಯರ್‍ಗಳನ್ನು ಎಚ್ಚರಿಸಿದರು.
ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲಿಸಿ ಪ್ರತಿ ಗ್ರಾಮದಲ್ಲೂ 3-4 ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು ತನ್ನದೇ ಸ್ವತ ಸ್ಥಳವಾದ ಮಣ್ಣಮ್ಮ ದೇವಿಯ ದೇವಾಲಯದ ಹತ್ತಿರ ಇರುವ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು ಇಲಾಖೆಯ ಸಿಬ್ಬಂದಿಗಳು ನಿದ್ದೆ ಮಾಡುತ್ತಿದ್ದಾರೆಯೇ ? ಎಂದ ಅವರು ಮದ್ಯ ಮಾರಾಟಗಾರರನ್ನು ಹಿಡಿದಾಗ ನನ್ನ ಮೊಬೈಲ್‍ಗೆ ಕರೆ ಮಾಡುತ್ತಾರೆ. ಅಧಿಕಾರಿಗಳು ಈಗಾಗಲೇ ಪ್ರಥಮ ವರದಿಯನ್ನು ದಾಖಲಿಸಿದ್ದೇನೆ ಎಂದು ತಿಳಿಸಿ ಅವರ ಮೇಲೆ ದೂರು ದಾಖಲಿಸುವಂತೆ ಸೂಚಿಸಿದರು. ಶಾಸಕರ ಪ್ರಶ್ನೆಗೆ ಉತ್ತರಿಸಿದ ಅಬಕಾರಿ ಇಲಾಖೆಯ ಅಧಿಕಾರಿ ಈಗಾಗಲೇ 174 ಕೇಸ್‍ಗಳನ್ನು ಏಪ್ರಿಲ್‍ನಿಂದ ಇಲ್ಲಿಯವೆರಗೂ ಹಾಕಲಾಗಿದ್ದು 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ ಅವರು ಬೇರೆ ಕಡೆಯಿಂದ ಗಾಂಜಾ ಸಾಗಿಸುತ್ತಿದ್ದವರನ್ನು ಬಂಧಿಸಿ, 3.876 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿಯವರೆಗೂ 181 ಕೇಸ್‍ಗಳನ್ನು ದಾಖಲಿಸಿರುವುದಾಗಿ ತಿಳಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.