ತುಮಕೂರು :
ಜಿಲ್ಲೆಯಲ್ಲಿ ಪ್ರತಿದಿನವೂ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟು ವರದಿ ಬಂದ ದಿನದಿಂದ ಆಯಾ ಶಾಲೆಗಳಿಗೆ 7 ದಿನಗಳ ಕಾಲ ರಜೆ ಘೋಷಿಸಲು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಮ್ಮ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ ವಿವಿಧ ಅಧಿಕಾರಿಗಳೊಂದಿಗೆ ಜûೂಮ್ ಮೀಟಿಂಗ್ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ದೃಢಪಡುವ (ಪಾಸಿಟಿವಿಟಿ) ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿರುವುದು ಕಂಡು ಬಂದಿದ್ದು, ಮಕ್ಕಳಲ್ಲೂ ಸಹ ಕೋವಿಡ್ ಸೋಂಕು ಹೆಚ್ಚಾಗಿ ಹರಡುತ್ತಿದೆ. ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ನಿರ್ದೇಶಿಸಿದರು.
ಕೋವಿಡ್ ಮೊದಲ ಹಾಗೂ ಎರಡನೇ ಅಲೆಗಿಂತ 3ನೇ ಅಲೆ ಹರಡುವಿಕೆಯ ಸ್ವರೂಪ ಭಿನ್ನವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಸಂಬಂಧಿಸಿದ ಅಧಿಕಾರಿಗಳ ಪರಿಶ್ರಮ ಅಗತ್ಯವಿದೆ ಎಂದರಲ್ಲದೆ, ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಎಲ್ಲಾ ಡಿಡಿಪಿಐ, ಬಿಆರ್‍ಸಿ, ಸಿಆರ್‍ಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಕೆಮ್ಮು, ನೆಗಡಿಯಂತಹ ಕೋವಿಡ್ ಗುಣಲಕ್ಷಣಗಳಿದ್ದು, ಕೋವಿಡ್ ಪರೀಕ್ಷೆಗೆ ಒಳಗಾಗಿ ಸೋಂಕು ದೃಢಪಟ್ಟ ಶಾಲಾ ವಿದ್ಯಾರ್ಥಿಗಳು ಶಾಲೆಗೆ ಬರುವ ಅಗತ್ಯವಿಲ್ಲ. ಮಕ್ಕಳು ಶಾಲೆ ಪ್ರವೇಶಕ್ಕೂ ಮುನ್ನ ಕಡ್ಡಾಯ ಮಾಸ್ಕ್ ಧರಿಸಿರುವ ಹಾಗೂ ಕೋವಿಡ್ ಗುಣಲಕ್ಷಣಗಳಿರುವ ಬಗ್ಗೆ ಶಿಕ್ಷಕರು ಕಡ್ಡಾಯವಾಗಿ ಪರಿಶೀಲಿಸಬೇಕು. ಗುಣಲಕ್ಷಣಗಳು ಕಂಡು ಬಂದರೆ ಕೂಡಲೇ ಕೋವಿಡ್ ಪರೀಕ್ಷೆಗೊಳಪಡಿಸಲು ಕ್ರಮ ಕೈಗೊಳ್ಳಬೇಕು. ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಮಾಸ್ಕ್ ಧಾರಣೆ ಕುರಿತು ಅರಿವು ಮೂಡಿಸಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಕಲಿಸಬೇಕು ಎಂದು ಸಲಹೆ ನೀಡಿದರು.
ಕೋವಿಡ್ ಲಕ್ಷಣ ಕಂಡು ಬಂದ ಮಕ್ಕಳನ್ನು ಶಾಲೆಯಲ್ಲಿ ಪ್ರತ್ಯೇಕಿಸಿ ಮನೆಗೆ ಮರಳುವಂತೆ ಕ್ರಮ ಕೈಗೊಳ್ಳಬೇಕಲ್ಲದೆ, ಮಕ್ಕಳ ಪೋಷಕರಿಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಹಾಗೂ 7 ದಿನಗಳ ಕಾಲ ಮಕ್ಕಳನ್ನು ಶಾಲೆಗೆ ಕಳುಹಿಸಬಾರದೆಂದು ಮನವರಿಕೆ ಮಾಡಬೇಕು ಎಂದು ತಿಳಿಸಿದರು.
ಮಕ್ಕಳಲ್ಲಿ ಗಂಭೀರ ಪ್ರಮಾಣದಲ್ಲಿ ಕೋವಿಡ್ ಗುಣಲಕ್ಷಣ ಕಂಡು ಬಂದರೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಿಸಬೇಕು. ಮಧುಗಿರಿ, ಮತ್ತಿತರ ಕಡೆ ಸೋಂಕು ದೃಢಪಟ್ಟ ಮಕ್ಕಳನ್ನೆಲ್ಲಾ ಆಸ್ಪತ್ರೆಗೆ ದಾಖಲಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಸರ್ಕಾರದ ನಿಯಮದನ್ವಯ ಪಾಸಿಟಿವ್ ಬಂದವರನ್ನೆಲ್ಲಾ ಆಸ್ಪತ್ರೆಗೆ ದಾಖಲಿಸಿದರೆ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಹಾಸಿಗೆಗಳ ಕೊರತೆ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಪಾಸಿಟಿವ್ ಬಂದವರನ್ನೆಲ್ಲಾ ದಾಖಲು ಮಾಡದೆ ವೈದ್ಯರ ಸಲಹೆ ಮೇರೆಗೆ ಅವಶ್ಯಕತೆ ಇದ್ದಾಗ ಮಾತ್ರ ಆಸ್ಪತ್ರೆಗೆ ದಾಖಲು ಮಾಡಬೇಕು ಎಂದು ಸಲಹೆ ನೀಡಿದರು.
ಯಾವುದೇ ಮಗುವಿಗೆ ಕೋವಿಡ್ ಗುಣಲಕ್ಷಣಗಳ ಬಗ್ಗೆ ಶಿಕ್ಷಕರು ಗಮನಿಸುತ್ತಿರಬೇಕು. ಶಾಲಾ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ವರದಿಯಾದಲ್ಲಿ ಖಾಸಗಿ ಸೇರಿದಂತೆ ಆಯಾ ಶಾಲೆಗೆ 7 ದಿನಗಳ ರಜೆ ನೀಡಲು ಸಂಬಂಧಿಸಿದ ಶಾಲಾ ಮುಖ್ಯಸ್ಥರಿಗೆ ಅಧಿಕಾರ ನೀಡಲಾಗಿದೆ. ಕೋವಿಡ್ ಸೋಂಕಿತ ಮಕ್ಕಳು ಸಹಜ ಸ್ಥಿತಿಗೆ ಮರಳಿ ಗುಣಮುಖರಾದಾಗ ಹೋಂ ಐಸೋಲೇಷನ್‍ಗೆ ಸಲಹೆ ನೀಡಬೇಕು ಎಂದು ತಿಳಿಸಿದರು.
ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಬಗ್ಗೆ ವಾರ್ಡನ್‍ಗಳಿಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ. ವಸತಿ ನಿಲಯಗಳ ಮಕ್ಕಳಿಗೆ ಪಾಸಿಟಿವ್ ದೃಢಪಟ್ಟರೆ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿ ಪರೀಕ್ಷೆಗೊಳಪಡಿಸಬೇಕು. ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ವಿದ್ಯಾರ್ಥಿನಿಲಯಗಳಲ್ಲೂ ಸಹ ಪಾಸಿಟಿವ್ ಪ್ರಕರಣ ವರದಿ ಬಂದ ನಂತರ ಆಯಾ ತರಗತಿ ಮಕ್ಕಳನ್ನು ತಪಾಸಣೆ ನಡೆಸಿ ಪ್ರತ್ಯೇಕ ಕೋಣೆಯಲ್ಲಿರಿಸಬೇಕು. ಉಳಿದವರ ಜೊತೆ ಬೆರೆಯದ ಹಾಗೆ ನಿಗಾವಹಿಸಬೇಕು. ಪಾಸಿಟಿವ್ ದೃಢಪಟ್ಟ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ಯಲು ಮನವಿ ಮಾಡಿದಾಗ ಅನುಸರಿಸಬೇಕಾದ ಕೋವಿಡ್ ನಿಯಮ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿ ಹೇಳಿ ಮಕ್ಕಳನ್ನು ಪೋಷಕರೊಂದಿಗೆ ಕಳುಹಿಸಬೇಕೆಂದು ತಿಳಿಸಿದರು.
ಕೋವಿಡ್ ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪ್ರತೀ ದಿನ 10,000 ಪರೀಕ್ಷೆ ನಡೆಸಲು ಸರ್ಕಾರ ನಿಗಧಿಪಡಿಸಿದ್ದು, ಅದರನ್ವಯ ತುಮಕೂರು ತಾಲ್ಲೂಕಿಗೆ 2500; ಶಿರಾ-1500; ಗುಬ್ಬಿ, ತಿಪಟೂರು ಹಾಗೂ ಮಧುಗಿರಿಗೆ ತಲಾ 1200; ಉಳಿದ ಎಲ್ಲಾ ತಾಲ್ಲೂಕುಗಳಿಗೆ ತಲಾ 1000 ಕೋವಿಡ್ ಪರೀಕ್ಷೆ ನಡೆಸಬೇಕು ಎಂದು ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು. ಪಾಸಿಟಿವಿಟಿ ದರವನ್ನು ನಿಯಂತ್ರಿಸುವ ಸಲುವಾಗಿ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಶಾಲೆಗಳಲ್ಲಿ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕಾಕರಣ ಕಾರ್ಯವನ್ನು ಮುಂದುವರೆಸಲಾಗುವುದು. ಕೋವಿಡ್ 2ನೇ ಡೋಸ್ ಬಾಕಿಯಿರುವ 1,84,000 ಲಸಿಕಾಕರಣವನ್ನು ಪೂರ್ಣಗೊಳಿಸಬೇಕು. ಮೊದಲ ಡೋಸ್ ಪೂರ್ಣಗೊಳಿಸಲು 40,000 ಬಾಕಿಯಿದ್ದು, ಆದಷ್ಟು ಬೇಗ ಪೂರ್ಣಗೊಳಿಸಬೇಕು. ಪಾವಗಡ, ತುಮಕೂರು ನಗರ, ತಿಪಟೂರು, ಗುಬ್ಬಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿಯಲ್ಲಿ ಲಸಿಕಾಕರಣ ಪ್ರಮಾಣ ಕಡಿಮೆ ಇದ್ದು, ಗಂಭೀರವಾಗಿ ಪರಿಗಣಿಸಿ ಶೀಘ್ರ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ನಾಗೇಂದ್ರಪ್ಪ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ: ಸನತ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ: ಮೋಹನ್ ದಾಸ್, ಡಿಡಿಪಿಐ ಸಿ.ನಂಜಯ್ಯ ಹಾಜರಿದ್ದರು.