ತಿಪಟೂರು :
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಮತ್ತು ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಅವ್ಯವಸ್ಥೆಗಳ ಆಗರವಾಗಿದ್ದು, ವಿದ್ಯಾರ್ಥಿನಿಯರನ್ನು ದನದ ದೊಡ್ಡಿಯ ರೀತಿಯಲ್ಲಿ ಕೂಡಿ ಹಾಕಿ ಹಾಸ್ಟೆಲ್ ನಡೆಸುತ್ತಿದ್ದಾರೆ.
ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತಿದ್ದು, ಪ್ರಾಣಿಗಳ ರೀತಿಯಲ್ಲಿ ಮಕ್ಕಳನ್ನು ನಡೆಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪವಿದೆ. ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ತಿಪಟೂರು ಗಾಂಧಿ ನಗರದ ಶಾಖೆಯು ಸರ್ಕಾರಿ ಕಟ್ಟಡದಲ್ಲಿ ನಡೆಯುತ್ತಿತ್ತು. ಅದನ್ನು ಬಾಗಿಲು ಮುಚ್ಚಿ ಅಲ್ಲಿ ಇದ್ದಂತಹ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರನ್ನು ಬಿ.ಹೆಚ್. ರಸ್ತೆ ಸಮೀಪದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಕ್ಲಬ್ ಮಾಡಿರುತ್ತಾರೆ.
ಸರ್ಕಾರದ ಅಧಿಕೃತ ಆದೇಶವಿರುವುದಿಲ್ಲ. ಜಿಲ್ಲಾ ಬಿಸಿಎಂ ಅಧಿಕಾರಿಗಳ ಅನುಮತಿಯೂ ಇಲ್ಲದೇ ಎರಡೂ ಹಾಸ್ಟೆಲ್‍ಗಳನ್ನು ಒಂದೇ ಕಡೆ ಕ್ಲಬ್ ಮಾಡಿದ್ದು, ಜೂನಿಯರ್ ಸೂಪರಿಡೆಂಟ್ ಶೋಭಾ ರವರು ಕ್ಲಬ್ ಮಾಡಿರುತ್ತಾರೆ.
ತಾಲ್ಲೂಕು ಬಿಸಿಎಂ ಅಧಿಕಾರಿ ಜಲಜಾಕ್ಷಮ್ಮನವರ ಜೊತೆ ನಿಕಟವಾದ ಸಂಬಂಧ ಹೊಂದಿರುವ ಶೋಭಾರವರಿಗೆ ಹಾಸ್ಟೆಲ್‍ನಲ್ಲಿರುವ ಮಕ್ಕಳ ಯೋಗಕ್ಷೇಮಕ್ಕಿಂತ ಮತ್ತಿನ್ನೇನು ಬೇಕಿತ್ತು ಎಂಬುದು ಸಾರ್ವಜನಿಕರ ಆರೋಪ. ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಸಂಜೆಯ ಉಪಹಾರವನ್ನು ಪ್ರತಿನಿತ್ಯ ನೀಡಬೇಕು. ಆದರೆ, ಇದುವರೆವಿಗೂ ಮಕ್ಕಳಿಗೆ ಸಂಜೆಯ ಉಪಹಾರವನ್ನು ನೀಡುತ್ತಿಲ್ಲ. ಮೆಟ್ರಿಕ್ ಪೂರ್ವ ಬಾಲಕಿಯರಿಗೆ ಟ್ಯೂಷನ್ ಮಾಡಿಸಬೇಕು. ಟ್ಯೂಟರ್ಸ್ ಪ್ರತಿನಿತ್ಯ ಬಂದು ಮಕ್ಕಳಿಗೆ ಟ್ಯೂಷನ್ ಮಾಡಬೇಕಿತ್ತು, ಆದರೆ ಮಕ್ಕಳಿಗೆ ಇದರ ಸೌಲಭ್ಯಗಳು ಸಿಗುತ್ತಿಲ್ಲ.
ಮೆಟ್ರಿಕ್ ನಂತರದ ಬಾಲಕಿಯರಿಗೆ ಆ ಹಾಸ್ಟೆಲ್‍ನಲ್ಲಿ ಸುಸಜ್ಜಿತವಾದ ಶೌಚಾಲಯ, ಸುಸಜ್ಜಿತವಾದ ಊಟದ ಕೋಣೆ ಮತ್ತು ಇತರ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರನ್ನು ಅಲ್ಲಿಗೇ ತಂದು ಕ್ಲಬ್ ಮಾಡಿದ್ದರಿಂದ ಅವರಿಗೆ ಸಿಗಬೇಕಾದ ಮೂಲ ಸೌಕರ್ಯಗಳ ಕೊರತೆ ಎದುರಾಗಿತ್ತು. ಸರಿಯಾದ ಸಮಯಕ್ಕೆ ಶೌಚಾಲಯದ ವ್ಯವಸ್ಥೆಗಳು ಸಿಗದೇ ಉಪಹಾರದ ವ್ಯವಸ್ಥೆ ಸಿಗದೇ ಮಕ್ಕಳು ಪರಿತಪಿಸುವಂತಹ ಸಂದರ್ಭಗಳು ಎದುರಾಗಿದ್ದರೂ ಸಹ ತಾಲ್ಲೂಕು ಬಿಸಿಎಂ ಅಧಿಕಾರಿ ಜಲಜಾಕ್ಷಮ್ಮನವರು ಈ ಹಾಸ್ಟೆಲ್‍ಗೆ ಭೇಟಿ ನೀಡಿಯೂ ಸಹ ಜಾಣಕುರುಡು ಪ್ರದರ್ಶಿಸುತ್ತಿರುವುದು ಸಾಕಷ್ಟು ಅನುಮಾನಗಳಿಗೆಡೆಮಾಡಿಕೊಡುತ್ತಿದೆ. ಮಕ್ಕಳಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ಈ ಹಾಸ್ಟೆಲ್‍ನಲ್ಲಿ ಸಿಗುತ್ತಿಲ್ಲವೆಂಬ ವ್ಯಾಪಕವಾದ ಆರೋಪ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿನಿಯರ ಪೋಷಕರಿಂದ ಕೇಳಿಬರುತ್ತಿದ್ದರೂ ಸಹ ತಾಲ್ಲೂಕು ಬಿಸಿಎಂ ಅಧಿಕಾರಿ ಕ್ರಮ ಕೈಗೊಳ್ಳದಿರುವುದು ಮತ್ತು ಜೂನಿಯರ್ ಸೂಪರಿಡೆಂಟ್ ಶೋಭಾ ಮಾಡುತ್ತಿದ್ದ ಅವ್ಯವಹಾರ ಮತ್ತು ಅವಾಂತರಗಳಿಗೆ ರಕ್ಷಣೆ ನೀಡುತ್ತಿರುವುದು ತಿಪಟೂರು ತಾಲ್ಲೂಕಿನ ಜನತೆಯ ಅನುಮಾನಕ್ಕೆಡೆಮಾಡಿಕೊಟ್ಟಿದೆ.