ತುಮಕೂರು :
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಲ ಜೀವನ್ ಮಿಷನ್, ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯ ವಿಷಯಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರು ಸಭೆಗೆ ಮಾಹಿತಿ ನೀಡುತ್ತಾ, 2020-21ನೇ ಸಾಲಿನ ಜಲ ಜೀವನ್ ಮಿಷನ್ ಯೋಜನೆಯಡಿ 84 ಜನವಸತಿಗಳ ಕಾರ್ಯಾತ್ಮಕ ನಳ ನೀರು ಸಂಪರ್ಕ ಕಾಮಗಾರಿಗಳ ಪೈಕಿ 8 ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ 76 ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ ಹಾಗೂ 2021-22ನೇ ಸಾಲಿನಲ್ಲಿ 82 ಕಾಮಗಾರಿಗಳ ಪೈಕಿ 22 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು, ಉಳಿದ 60 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಹಂತದಲ್ಲಿರುತ್ತವೆ.
ಅದೇ ರೀತಿ 2021-22ನೇ ಸಾಲಿಗೆ ಹೆಚ್ಚುವರಿ ಕ್ರಿಯಾ ಯೋಜನೆ ಅನುಮೋದನೆಯಾಗಿದೆ. ಈ ಯೋಜನೆಯನ್ವಯ 3012 ಜನವಸತಿಗಳಿಗೆ ಕಾರ್ಯಾತ್ಮಕ ನಳ ನೀರು ಸಂಪರ್ಕ ಕಾಮಗಾರಿಗಳ ಅನುಷ್ಠಾನ ಕುರಿತಂತೆ 514 ಕಾಮಗಾರಿಗಳ ಸರ್ವೆ ಪೂರ್ಣಗೊಂಡಿದ್ದು, 40 ಕಾಮಗಾರಿಗಳ ಡಿ.ಪಿ.ಆರ್. ತಯಾರಿಕೆ ಕಾರ್ಯ ಮುಗಿದಿರುತ್ತದೆ ಹಾಗೂ 2,606 ಗ್ರಾಮಗಳಿಗೆ ಗ್ರಾಮ ಕ್ರಿಯಾ ಯೋಜನೆ ತಯಾರಿಸಲು ಅನುಮೋದನೆ ನೀಡಲಾಗಿರುತ್ತದೆ ಎಂದು ತಿಳಿದರು.
ಇದೇ ವೇಳೆ ಪ್ರಧಾನ ಕಾರ್ಯದರ್ಶಿಗಳು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜಲ್ ಜೀವನ್ ಮಿಷನ್ ಯೋಜನೆ ಕುರಿತು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜಿಸುವ ಮೂಲಕ ಪ್ರತಿ ಮನೆ ಮನೆಗೂ ಶುದ್ಧ ಕುಡಿಯುವ ನೀರಿನ ಸಂರ್ಪಕವನ್ನು ಕಲ್ಪಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶ್ರಮಿಸಬೇಕು. ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಆಗಿಂದಾಗ್ಗೆ ಪರಿಶೀಲನೆ ನಡೆಸುವ ಮೂಲಕ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಶ್ರಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಲಾಗಿದೆ. ವಾರ್ಷಿಕ ಗುರಿಗಿಂತ ಈ ಬಾರಿ ಜಿಲ್ಲೆಯಲ್ಲಿ ಶೇಕಡ 106.41ರಷ್ಟು ಹೆಚ್ಚುವರಿಯಾಗಿ ಪ್ರಗತಿ ಸಾಧಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರಲ್ಲದೆ ಕುಣಿಗಲ್, ಚಿಕ್ಕನಾಯಕನಹಳ್ಳಿ ಮತ್ತು ತುರುವೇಕೆರೆ ಸೇರಿದಂತೆ ಕೆಲವು ತಾಲ್ಲೂಕುಗಳು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವಂತೆ ಸೂಚನೆ ನೀಡಿದರು. ಅನುಷ್ಠಾನ ಇಲಾಖೆಗಳು ಸಹ ಉತ್ತಮ ಪ್ರಗತಿ ಸಾಧಿಸಿರುವುದನ್ನು ಪ್ರಶಂಸಿಸಿದ ಅವರು ಕಳೆದ ವರ್ಷ ಬಾಕಿ ಇರುವ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು
Area Officers Mobile app ಬಗ್ಗೆ ಮಾತನಾಡಿದ ಅವರು ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಹಾಯಕ ನಿರ್ದೇಶಕರುಗಳು ಪ್ರತಿದಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಸ್ಥಳ ಭೇಟಿ ಮಾಡಿ ಛಾಯಾ ಚಿತ್ರಗಳನ್ನು ಆ್ಯಪ್ ಮೂಲಕ ಅಪ್ ಲೋಡ್ ಮಾಡಲು ಸೂಚಿಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯ ಸಾಮಾಜಿಕ ಪರಿಶೋಧನೆ ವಸೂಲಾತಿ ಹಾಗೂ 2017-18 ರಿಂದ 2020-21ರ ವರೆಗೆ ಒಟ್ಟು 6.64 ಕೋಟಿ ರೂ. ಹಣದಲ್ಲಿ 25.28 ಲಕ್ಷ ರೂ.ಗಳ ವಸೂಲಾತಿ ಮಾತ್ರ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ಪ್ರಗತಿ ಪರಿಶೀಲಿಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಅತಿ ತುರ್ತಾಗಿ ಪೂರ್ಣಗೊಳಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿನ ತ್ಯಾಜ್ಯ ವಿಲೇವಾರಿ ಕಾರ್ಯಗಳನ್ನು ತ್ವರಿತವಾಗಿ ಪ್ರಾರಂಭಿಸುವುದು ಹಾಗೂ ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 215 ಗ್ರಾಮ ಪಂಚಾಯಿತಿಗಳಲ್ಲಿ ಕಸ ಸಂಗ್ರಹಣ ವಾಹನಗಳನ್ನು (ಸ್ವಚ್ಛ ವಾಹಿನಿ) ಖರೀದಿಸಲಾಗಿದೆ. ಘಟಕ ನಿರ್ಮಾಣವಾಗದ ಗ್ರಾಮ ಪಂಚಾಯಿತಿಗಳಲ್ಲಿ ತಾತ್ಕಾಲಿಕ ಕಟ್ಟಡಗಳನ್ನು ಗುರುತಿಸಿ ತ್ಯಾಜ್ಯ ವಿಲೇವಾರಿ ಪ್ರಾರಂಭಿಸಬೇಕು ಎಂದು ತಿಳಿಸಿದ ಅವರು, ಬೂದು ನೀರು ನಿರ್ವಹಣೆ ಸಂಬಂಧ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಿ ಅನುಷ್ಟಾನಗೊಳಿಸುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ: ಕೆ. ವಿದ್ಯಾಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದ್ದು, ಮುಂದಿನ 2 ತಿಂಗಳುಗಳಲ್ಲಿ ಇನ್ನು ಹೆಚ್ಚಿನ ಪ್ರಗತಿ ಸಾಧಿಸುವ ಭರವಸೆ ವ್ಯಕ್ತಪಡಿಸಿದರು. ಸಭೆಯಲ್ಲಿ ಉಪಕಾರ್ಯದರ್ಶಿಗಳು (ಅಭಿವೃದ್ದಿ), ಉಪಕಾರ್ಯದರ್ಶಿಗಳು (ಆಡಳಿತ), ಯೋಜನಾ ನಿರ್ದೇಶಕರು, ಮುಖ್ಯ ಯೋಜನಾಧಿಕಾರಿ, ಮುಖ್ಯ ಲೆಕ್ಕಾಧಿಕಾರಿಗಳು ಸೇರಿದಂತೆ ಜಿಲ್ಲಾಮಟ್ಟದ ಅನುಷ್ಠಾನಾಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು(ಗ್ರಾಉ)ಗಳು ಹಾಜರಿದ್ದರು.