ತುಮಕೂರು :

      ಬೇಸಿಗೆ ಬರುತ್ತಿರುವುದರಿಂದ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಕೆಲಸ ನಿರ್ವಹಿಸಬೇಕು, ಕುಡಿಯುವ ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಬೆಸ್ಕಾಂ ಅಧಿಕಾರಿಗಳಿಗೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಸೂಚನೆ ನೀಡಿದರು.

     ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಅಭಿವೃದ್ಧಿ ನಿಗಮಗಳು ಕೊರೆಸಿರುವ ಕೊಳವೆ ಬಾವಿಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಹಿರಿತನದ ಆಧಾರದ ಮೇಲೆ ವಿದ್ಯುತ್ ಪರಿವರ್ತಕ ನೀಡಬೇಕೆ ಹೊರತು, ಶಿಫಾರಸ್ಸಿಗಲ್ಲ ಎಂದು ಬೆಸ್ಕಾಂ ಎಇಇ ಷರೀಫ್ ಅವರಿಗೆ ತಾಕೀತು ಮಾಡಿದರು.
ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ರೈತರ ಮೇಲೆ ವಿಜಿಲೆನ್ಸ್ ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ, ಮನೆ ಕಟ್ಟುವಾಗಲೋ, ಪುಂಪು ಮೋಟಾರು ಬಿಡುವಾಗಲೋ ವಿದ್ಯುತ್ ಸಂಪರ್ಕ ಪಡೆದುಕೊಂಡವರ ಮೇಲೆ ಲಕ್ಷಾಂತರ ರೂ ದಂಡ ವಿಧಿಸಿದರೆ ಹೇಗೆ? ಅಕ್ರಮ ನಿಗದಿ ಮಾಡುವಾಗ ಸರಿಯಾದ ಮಾನದಂಡ ಅನುಸರಿಸಬೇಕು, ಕಷ್ಟದಲ್ಲಿರುವ ರೈತರ ಮೇಲೆ ಈ ರೀತಿ ದೌರ್ಜನ್ಯ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಬಡವರು ಆಸ್ಪತ್ರೆಗೆ ಬಂದರೆ ಗೌರವಯುತವಾಗಿ ನಡೆದುಕೊಳ್ಳಬೇಕು, ಜಿಲ್ಲಾಸ್ಪತ್ರೆಯಲ್ಲಿರುವ ಡಾ.ಶಿವಲಿಂಗಯ್ಯ ಯಾವುದೋ ಇಂಜೆಕ್ಷನ್ ಕೊಟ್ಟು ಪ್ರಜ್ಞಾಹೀನ ಸ್ಥಿತಿಗೆ ಗ್ರಾಮಾಂತರ ಕ್ಷೇತ್ರದ ಯುವಕ ತಲುಪಿದ್ದಾನೆ, ಒಬ್ಬನೇ ಮಗ, ಆ ಕುಟುಂಬಕ್ಕೆ ಈಗ ಯಾರು ಆಧಾರ, ಅವರಿಗೆ ಆತನಿಗೆ ಯಾವುದೇ ಪರಿಹಾರ ಕೊಡುತ್ತಿಲ್ಲ, ಡಾಕ್ಟರ್ ಮಾಡಿರೋ ಯಡವಟ್ಟಿಗೆ ಯಾರು ಪರಿಹಾರ ಕೊಡಬೇಕು ಎಂದು ಪ್ರಶ್ನಿಸಿದ ಅವರು, ಆತನ ಕುಟುಂಬಕ್ಕೆ ನೆರವಾಗಲು ಗುತ್ತಿಗೆ ಉದ್ಯೋಗ ನೀಡುವಂತೆ ಟಿಎಚ್‍ಒ ಲಕ್ಷ್ಮೀಕಾಂತ್‍ಗೆ ಸೂಚನೆ ನೀಡಿದರು.


ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕೋವಿಡ್ ಮೂರನೇ ಅಲೆಯಲ್ಲಿ ಎಪ್ಪತ್ತು ವರ್ಷ ಮೇಲ್ಪಟ್ಟ 10 ಮಂದಿ ಸಾವನ್ನಪ್ಪಿದ್ದು, ಕೋವಿಡ್ ಬೂಸ್ಟರ್ ಡೋಸ್ ಪಡೆಯಲು ಜನರು ಮುಂದಾಗುತ್ತಿಲ್ಲ, ಮೂರನೇ ಅಲೆಯಲ್ಲಿ ಶೇ.90ರಷ್ಟು ಜನರಿಗೆ ಸೋಂಕಿನ ಲಕ್ಷಣ ಇತ್ತು, ಆಗಾಗಿ ಬೂಸ್ಟರ್ ಡೋಸ್ ಕುಂಠಿತವಾಗಿದ್ದು, ಮಕ್ಕಳಿಗೆ ಲಸಿಕೆ ನಿರೀಕ್ಷಿತ ಗುರಿ ಸಾಧಿಸಲಾಗುವುದು ಎಂದು ಟಿಎಚ್‍ಒ ಲಕ್ಷ್ಮೀಕಾಂತ್ ಸಭೆಗೆ ತಿಳಿಸಿದರು.
ರೇಷ್ಮೆ ಇಲಾಖೆಯಿಂದ ರೇಷ್ಮೆ ಬೆಳೆಯುವ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು, ರೇಷ್ಮೆ ಬೆಳೆಗಾರರೊಂದಿಗೆ ಗುಂಪು ಚರ್ಚೆಗಳನ್ನು ನಡೆಸುವ ಮೂಲಕ ರೇಷ್ಮೆ ಬೆಳೆ ವಿಸ್ತರಣೆಯನ್ನು ಮಾಡಬೇಕೆಂದು ಸೂಚಿಸಿದ ಅವರು, ಹೆಗ್ಗೆರೆ ಭಾಗದಲ್ಲಿ ಹೆಚ್ಚು ಒತ್ತು ನೀಡಬೇಕೆಂದು ಸೂಚನೆ ನೀಡಿದರು.
ಬೆಳೆ ನಷ್ಟ ಸಮೀಕ್ಷೆ ಸರಿಯಾಗಿ ಮಾಡಲಿಲ್ಲ, ರಾಗಿ ಖರೀದಿ ನಿಲ್ಲಿಸಲಾಗಿದೆ, ಬಿಪಿಎಲ್ ಕೊಟ್ಟು ಎಪಿಎಲ್ ಮಾಡಲಾಗಿದೆ, ಯಾವ ರೀತಿ ಸರ್ವೇ ಮಾಡಿದೀರಿ? ನಿಗರ್ತಿಕರಿಗೂ ಎಪಿಎಲ್ ಕಾರ್ಡ್ ಪರಿವರ್ತನೆ ಮಾಡಲಾಗಿದೆ? ರಾಗಿ ಖರೀದಿ ಕೇಂದ್ರ ನಿಲ್ಲಿಸಲು ಕಾರಣವೇನು ಎಂದು ಕೃಷಿ ಮತ್ತು ಆಹಾರ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.
ರಾಗಿ ಖರೀದಿ ಕೇಂದ್ರಕ್ಕೆ ರಾಗಿ ತರಲು ದಿನಾಂಕ ಸೂಚಿಸಲಾಗಿದ್ದು, ರಾಗಿ ಖರೀದಿ ರಾಜ್ಯದ ಪಾಲಿನ ಖರೀದಿಗೆ 2.1ಮೆ.ಟನ್ ಗುರಿ ನಿಗದಿಪಡಿಸಲಾಗಿತ್ತು, ಈಗ ಗುರಿ ನಿಗದಿ ಪೂರ್ಣಗೊಂಡಿದ್ದು, ಸರ್ಕಾರದ ಆದೇಶದ ಮೇರೆಗೆ ಮತ್ತೆ ಖರೀದಿ ಶುರು ಮಾಡಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಈ ಸರ್ಕಾರದಲ್ಲಿ ಎರಡು ಲಕ್ಷ ಅನುದಾನ ತರುವುದು ಕಷ್ಟದ ಕೆಲಸವಾಗಿದೆ. ತಂದ ಅನುದಾನವನ್ನು ಸರಿಯಾಗಿ ಬಳಸಿ. ಸುಖಾ ಸುಮ್ಮನೆ ಹಣ ವ್ಯಯ ಮಾಡುವ ಕೆಲಸವನ್ನು ನಿಲ್ಲಿಸಿ.
ಎಲ್ಲ ಕಾಮಗಾರಿಗನ್ನು ನಿಗದಿತ ಸಮಯದಲ್ಲಿ ಮುಗಿಸುವ ಕೆಲಸ ಮಾಡಿ. ಗ್ರಾಮೀಣ ಭಾಗದಿಂದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಬಡವರನ್ನು ವೈದ್ಯರು ಗೌರವ ಪೂರ್ವಕವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.ಸಭೆಯಲ್ಲಿ ತಾ.ಪಂ.ಆಡಳಿತಾಧಿಕಾರಿ ಬಿ.ರಘು, ಕಾರ್ಯನಿರ್ವಾಹಕ ಅಧಿಕಾರಿ ಜೈಪಾಲ್, ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಶಿವಣ್ಣ, ಕವಿತಾ, ಭಾನುಮತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

(Visited 11 times, 1 visits today)