ತುಮಕೂರು :
ಮಹಾನಗರ ಪಾಲಿಕೆ, ರಾಕ್ ಯೂತ್ ಕ್ಲಬ್ ಹಾಗೂ ಜಿಲ್ಲಾ ಅಮಚೂರ್ ಕಬಡ್ಡಿ ಸಂಸ್ಥೆಯ ಸಹಯೋಗದಲ್ಲಿ ಫೆಬ್ರುವರಿ 25 ರಿಂದ 27ರವರೆಗೆ ನಗರದ ಜ್ಯೂನಿಯರ್ ಕಾಲೇಜಿನ ಮೈದಾನದಲ್ಲಿ ಮೇಯರ್ಸ್ ಕಪ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆಯ ಮೇಯರ್ ಬಿ.ಜಿ. ಕೃಷ್ಣಪ್ಪ ತಿಳಿಸಿದರು.
ತಮ್ಮ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷದಂತೆ ಈ ಬಾರಿಯೂ ಸಹ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮೇಯರ್ಸ್ ಕಪ್ ಪಂದ್ಯಾವಳಿಯಲ್ಲಿ ಹೊನಲು ಬೆಳಕಿನ ರಾಜ್ಯ ಮಟ್ಟದ ಕಬಡ್ಡಿ; ಪಾಲಿಕೆ ಸದಸ್ಯರು, ಪೌರ ಕಾರ್ಮಿಕರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಹಾಗೂ ಮಾಧ್ಯಮದವರಿಗಾಗಿ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗುವುದು ಎಂದರು.
ಮೇಯರ್ಸ್ ಕಪ್‍ನಡಿ ನಡೆಯಲಿರುವ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪುರುಷ ಮತ್ತು ಮಹಿಳಾ ತಂಡಗಳು ಭಾಗವಹಿಸಲಿವೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪಾಲಿಕೆ ವತಿಯಿಂದ ವಸತಿ, ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಪಂದ್ಯಾವಳಿಯಲ್ಲಿ ವಿಜೇತರಾದವರಿಗಾಗಿ ನಗದು ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು.
ಕ್ರೀಡೆಗಳು ನಶಿಸಿ ಹೋಗುತ್ತಿರುವುದರಿಂದ ವಿವಿಧ ಪಂದ್ಯಗಳನ್ನು ಆಯೋಜಿಸಲಾಗುತ್ತಿದ್ದು, ಈ ಕ್ರೀಡಾ ಕೂಟದಲ್ಲಿ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗಾಗಿ ಬಾಲ್ ಇನ್ ದ ಬಕೆಟ್, ಮ್ಯೂಸಿಕಲ್ ಚೇರ್, ಲೆಮನ್ ಅಂಡ್ ಸ್ಪೂನ್, ಹಗ್ಗ ಜಗ್ಗಾಟ; ಪಾಲಿಕೆಯ ಮಹಿಳಾ ಸಿಬ್ಬಂದಿಗಳಿಗಾಗಿ ಥ್ರೋಬಾಲ್, ಕಬಡ್ಡಿ, ಹಗ್ಗ ಜಗ್ಗಾಟ, ಬಾಲ್ ಇನ್ ದ ಬಕೆಟ್, ಮ್ಯೂಸಿಕಲ್ ಚೇರ್, ಲೆಮನ್ ಅಂಡ್ ಸ್ಪೂನ್; ಪಾಲಿಕೆಯ ಮಹಿಳಾ ಸದಸ್ಯರಿಗಾಗಿ ಬಾಲ್ ಇನ್ ದ ಬಕೆಟ್, ಮ್ಯೂಸಿಕಲ್ ಚೇರ್, ಲೆಮನ್ ಅಂಡ್ ಸ್ಪೂನ್, ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಲಿವೆ.
ಅಲ್ಲದೆ, ಪುರುಷ ಪೌರಕಾರ್ಮಿಕರಿಗಾಗಿ ಕಬಡ್ಡಿ, ಹಗ್ಗ ಜಗ್ಗಾಟ, ರನ್ನಿಂಗ್; ವಾಲ್ವ್ ಮನ್‍ಗಳಿಗಾಗಿ ಹಗ್ಗ ಜಗ್ಗಾಟ, ರನ್ನಿಂಗ್; ಪಾಲಿಕೆಯ ಪುರುಷ ಸಿಬ್ಬಂದಿಗಳಿಗಾಗಿ ಕ್ರಿಕೆಟ್, ಕಬಡ್ಡಿ, ಹಗ್ಗ ಜಗ್ಗಾಟ, ರನ್ನಿಂಗ್, ಶಾಟ್‍ಪುಟ್; ಪಾಲಿಕೆಯ ಪುರುಷ ಸದಸ್ಯರಿಗಾಗಿ ಕಬಡ್ಡಿ, ಶಾಟ್‍ಪುಟ್, ಕ್ರಿಕೆಟ್; ವಿಶೇಷ ನೌಕರರಿಗಾಗಿ ಪಾಸಿಂಗ್ ದ ಬಾಲ್ ಮತ್ತು ಮ್ಯೂಸಿಕಲ್ ಚೇರ್ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅಮಚೂರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ಜಿ.ಎಚ್. ಕೃಷ್ಣೇಗೌಡ ಹಾಗೂ ಕಾರ್ಯದರ್ಶಿ ಸುನೀಲ್ ಶಿವಮೂರ್ತಿ, ಪಾಲಿಕೆ ಸದಸ್ಯ ನಯಾeóï ಹಾಜರಿದ್ದರು.