ತುಮಕೂರು :
ಜಿಲ್ಲೆಯಲ್ಲಿ ತುಮಕೂರು-ರಾಯದುರ್ಗ ರೈಲ್ವೇ ಯೋಜನೆಗೆ ಸಂಬಂಧಿಸಿದಂತೆ ಹೊಸದಾಗಿ ಹೆಚ್ಚುವರಿಯಾಗಿ ಬೇಡಿಕೆ ಇಟ್ಟಿರುವ 400 ಎಕರೆ ಜಮೀನಿನ ಭೂಸ್ವಾಧೀನಕ್ಕಾಗಿ ಅಗತ್ಯವಿರುವ 50 ಕೋಟಿ ರೂ.ಗಳ ಅನುದಾನವನ್ನು ಇನ್ನೊಂದು ತಿಂಗಳೊಳಗೆ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ, ಚಿತ್ರದುರ್ಗ ಸಂಸದ ಹಾಗೂ ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷ ಎ. ನಾರಾಯಣಸ್ವಾಮಿ ಭರವಸೆ ನೀಡಿದರು.
ಜಿಲ್ಲಾ ಪಂಚಾಯತಿಯಲ್ಲಿಂದು ಜರುಗಿದ ದಿಶಾ ಸಮಿತಿ ಸಭೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತುಮಕೂರು-ರಾಯದುರ್ಗ ಮಾರ್ಗದಲ್ಲಿ ಕೈಗೊಂಡಿರುವ ರೈಲ್ವೆ ಯೋಜನೆ ಸಾಕಾರಕ್ಕಾಗಿ ಶೇ.100ರಷ್ಟು ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯು ಹೊಸದಾಗಿ ಹೆಚ್ಚುವರಿಯಾಗಿ ಬೇಡಿಕೆ ಇಟ್ಟಿರುವ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ಅಗತ್ಯವಿರುವ 50 ಕೋಟಿ ರೂ.ಗಳ ಅನುದಾನವನ್ನು ಒದಗಿಸಲು ಯಾವುದೇ ಹಣದ ಕೊರತೆಯಿಲ್ಲ ಎಂದು ಸ್ಪಷ್ಟ ಪಡಿಸಿದರು.
ಅದೇ ರೀತಿ ಬಹಳ ದಿನಗಳ ಕನಸಾದ ತುಮಕೂರು-ದಾವಣಗೆರೆ ರೈಲ್ವೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಯೋಜನೆಯಡಿ ತುಮಕೂರು-ಹಿರಿಯೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಒಟ್ಟಾರೆ 200 ಕೋಟಿ ರೂ.ಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗಾಗಲೇ ಯೋಜನೆ ಅನುಷ್ಠಾನಕ್ಕಾಗಿ ಬಿಡುಗಡೆಯಾಗಿ ಖರ್ಚಾಗದೆ ಉಳಿದಿರುವ ಹಣವನ್ನು ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡಿದ ನಂತರ ಮುಂದಿನ ಹಂತದ ಅನುದಾನವನ್ನು ಬಿಡುಗಡೆ ಮಾಡಲಾಗುವುದೆಂದು ಮುಖ್ಯಮಂತ್ರಿಗಳು ಪತ್ರದ ಮೂಲಕ ತಿಳಿಸಿದ್ದಾರೆ.
ಇದೇ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಭೂಸ್ವಾಧೀನಕ್ಕಾಗಿ ಬಿಡುಗಡೆಯಾಗಿದ್ದ 50 ಕೋಟಿ ರೂ. ಹಣ ವೆಚ್ಚವಾದ ನಂತರ ಪ್ರಸ್ತಾವನೆಯಲ್ಲಿ ಕೋರಿರುವ 200 ಕೋಟಿ ರೂ. ಹಣವನ್ನು ಒದಗಿಸಲಾಗುವುದೆಂದು ಮುಖ್ಯಮಂತ್ರಿಗಳು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಪ್ರಸ್ತಾವನೆಯಲ್ಲಿ ಕೋರಿರುವ 200 ಕೋಟಿ ರೂ.ಗಳ ಪೈಕಿ ಜಿಲ್ಲೆಗೆ ಅಗತ್ಯವಿರುವ 50 ಕೋಟಿ ರೂ.ಗಳನ್ನು ಇನ್ನೊಂದು ವಾರದೊಳಗೆ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರಲ್ಲದೆ, ಕೇಂದ್ರದಿಂದ ಈಗಾಗಲೇ ರೈಲ್ವೆ ಯೋಜನೆಗಳಿಗಾಗಿ 901 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಹೊಸದಾಗಿ ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಲು ಗುರುತಿಸಿರುವ 400 ಗ್ರಾಮಗಳ ಪೈಕಿ 112 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಅಂತಿಮ ಅಧಿಸೂಚಿತ ಕಂದಾಯ ಗ್ರಾಮಗಳಲ್ಲಿ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಸಿಎಸ್‍ಆರ್ ನಿಧಿಯ ಸದ್ವಿನಿಯೋಗಕ್ಕೆ ಸಂಬಂಧಿಸಿದಂತೆ ಉತ್ತರ ಭಾರತಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತಿದೆ ಎಂದು ಹಲವಾರು ಕಂಪನಿಗಳಿಗೆ ಪತ್ರ ಬರೆದಿದ್ದೇನೆ. ಕರ್ನಾಟಕ ರಾಜ್ಯದ ಬರಪೀಡಿತ ಪ್ರದೇಶಗಳಾದ ತುಮಕೂರು, ಚಿತ್ರದುರ್ಗ ಜಿಲ್ಲೆ ಶಾಲೆಗಳ ಅಭಿವೃದ್ಧಿಗೆ ಹಣ ಒದಗಿಸಬೇಕು ಎಂದು ಈ ಪತ್ರದಲ್ಲಿ ಕೋರಲಾಗಿತ್ತು. ಅದರಂತೆ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಾಗಿ 300 ಕೋಟಿ ರೂ. ಸಿಎಸ್‍ಆರ್ ನಿಧಿಯನ್ನು ವೆಚ್ಚ ಮಾಡಲಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದು, ಇದರನ್ವಯ ಜಿಲ್ಲೆಯಲ್ಲಿ ಸಿಎಸ್‍ಆರ್ ನಿಧಿಯನ್ನು ಪ್ರಾಮಾಣಿಕವಾಗಿ ವೆಚ್ಚ ಮಾಡಿರುವ ಬಗ್ಗೆ ಕೂಲಂಕುಷವಾಗಿ ಮಾಹಿತಿ ಪಡೆದು ಪರಿಶೀಲಿಸುತ್ತೇನೆ ಎಂದು ತಿಳಿಸಿದರು.
ವಿದ್ಯಾರ್ಥಿನಿಲಯಗಳಲ್ಲಿ ಕಳಪೆ ಆಹಾರ ಪೂರೈಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸಚಿವರು ರಾಜ್ಯದ ಸಮಾಜ ಕಲ್ಯಾಣ ಸಚಿವರು ಈ ಬಗ್ಗೆ ಕ್ರಮವಹಿಸಲಿದ್ದಾರೆ ಎಂದು ತಿಳಿಸಿದರಲ್ಲದೆ, ದೇಶದಾದ್ಯಂತ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಲು ಉದ್ದೇಶಿಸಲಾಗಿದ್ದು, ಸಭೆಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ದಲಿತರ ಸಮಸ್ಯೆ, ಪರಿಶಿಷ್ಟ ಜಾತಿ/ಪಂಗಡ ಸೇರಿದಂತೆ ಹಿಂದುಳಿದ ಸಮುದಾಯದ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವ ಬಗ್ಗೆ ಚರ್ಚಿಸಲಾಗುವುದೆಂದರು.
ಉಡುಪಿ ಜಿಲ್ಲೆಯಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿರುವ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ವಿಚಾರಣೆ ಇತ್ಯರ್ಥವಾದ ನಂತರ ಸರ್ಕಾರ ಮುಂದಿನ ನಿರ್ಣಯಗಳನ್ನು ಕೈಗೊಳ್ಳಲಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಇಂತಹ ಧಾರ್ಮಿಕ ವಿಷಯಗಳ ಚರ್ಚೆಗೆ ಅವಕಾಶ ನೀಡಬಾರದಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ನಿರುದ್ಯೋಗಿಗಳಿಗೆ ಅನುವಾಗುವಂತೆ ಸುಮಾರು 16 ಇಲಾಖೆಗಳಡಿ ಕೌಶಲ್ಯ ತರಬೇತಿ ನೀಡಲು ಸರ್ಕಾರ ಮುಂದಾಗಿದೆ. ಈ ತರಬೇತಿ ಬಗ್ಗೆ ಸಾರ್ವಜನಿಕರಿಗೆ ನಿರ್ದಿಷ್ಟ ಮಾಹಿತಿ ಇಲ್ಲದಿರುವುದರಿಂದ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಕೌಶಲ್ಯ ತರಬೇತಿಗಳ ಬಗ್ಗೆ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರು ನಿರುದ್ಯೋಗಿಗಳು ಸ್ವಾವಲಂಬಿ ಕೈಗಾರಿಕೋದ್ಯಮಿಗಳಾಗಬೇಕೆಂಬ ನಿಟ್ಟಿನಲ್ಲಿ ಮುದ್ರಾ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯಡಿ ಜಿಲ್ಲೆಯಲ್ಲಿ 62000 ಕ್ಕೂ ಹೆಚ್ಚು ಮಂದಿಗೆ 376 ಕೋಟಿ ರೂ.ಗಳ ಸಾಲ ಸೌಲಭ್ಯ ಒದಗಿಸಲಾಗಿದೆ. ಅಲ್ಲದೆ ವಿವಿಧ ಇಲಾಖೆ, ನಿಗಮ, ಮಂಡಳಿಗಳಡಿ ಜಿಲ್ಲೆಯ ನಿರುದ್ಯೋಗಿಗಳಿಗೆ ಸಾಲ ನೀಡಿರುವ ಅಂಕಿ ಅಂಶಗಳನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರಲ್ಲದೆ, ಸಾಲ ಸೌಲಭ್ಯ ನೀಡಲು ಬ್ಯಾಂಕಿನ ಅಧಿಕಾರಿಗಳು ಅಸಹಕಾರ ನೀಡುತ್ತಿದ್ದಾರೆಂಬ ದೂರುಗಳು ಸಹ ಕೇಳಿ ಬರುತ್ತಿದ್ದು, ಈ ಕುರಿತು ಮುಂದಿನ ಸಭೆಯಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಕೇಂದ್ರ ಸರ್ಕಾರದ ವಸತಿ ಯೋಜನೆಗಳಡಿ 2014-15ನೇ ಸಾಲಿನಲ್ಲಿ ಆಯ್ಕೆಯಾದ ಗ್ರಾಮೀಣ ಪ್ರದೇಶದ ವಸತಿಹೀನ ಫಲಾನುಭವಿಗೆ ಆದ್ಯತೆ ನೀಡಲಾಗುತ್ತಿದೆ. ಪ್ರಸ್ತುತ 2020-21ನೇ ಸಾಲಿನ ವಸತಿಹೀನರಿಗೂ ಆದ್ಯತೆ ನೀಡಬೇಕೆಂದು ಎಲ್ಲಾ ಶಾಸಕರಿಗೆ ಮನವಿ ಮಾಡಿದ್ದೇನೆ. ಎಲ್ಲಾ ಶಾಸಕರು ಆಶ್ರಯ ಸಮಿತಿ ಸಭೆ ಕರೆದು ಬಡವರಿಗೆ ವಸತಿ ಸೌಲಭ್ಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಸತಿಹೀನರಿಗೆ ನಿವೇಶನ ಒದಗಿಸಲು ಜಿಲ್ಲಾಡಳಿತದಿಂದ ಜಾಗವನ್ನು ಮೀಸಲಿಟ್ಟು ಕಾನೂನಾತ್ಮಕವಾಗಿ ಜಿಲ್ಲಾ ಪಂಚಾಯತಿಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದವರಿಗೆ ಸ್ವಚ್ಛ ನೀರು ಒದಗಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಕೇಂದ್ರದ ಜಲ್ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತೀ ಮನೆ-ಮನೆಗೂ ನೀರೊದಗಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದರಲ್ಲದೆ, ಪಾವಗಡ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ನೀಗಿಸಲು ತುಂಗಾ ಹಿನ್ನೀರಿನಿಂದ ಎಲ್ಲಾ ಹಳ್ಳಿಗಳಿಗೆ ನೀರೊದಗಿಸುವ ಯೋಜನೆಯನ್ನು ಈಗಾಗಲೇ ಕೈಗೊಂಡಿದ್ದು ಜುಲೈ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.