ತುಮಕೂರು :
ಜಿಲ್ಲೆಯ ಗುಬ್ಬಿ, ಕೊರಟಗೆರೆ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ ಘಟಕ ಪ್ರಾರಂಭಿಸಬೇಕು, ವಿದ್ಯಾರ್ಥಿಗಳಿಗಾಗುತ್ತಿರುವ ತೊಂದರೆಯನ್ನು ನಿವಾರಿಸಬೇಕು ಮತ್ತು ಗ್ರಾಮಾಂತರದ ವಿವಿಧ ಭಾಗಗಳೀಗೆ ಬಸ್ ಸೌಕರ್ಯ ಹೆಚ್ಚಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಕೆಪಿಸಿಸಿ ಮಾಧ್ಯಮ ವಿಶ್ಲೇಷಕರು ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಅವರು ಒತ್ತಾಯಿಸಿದರು.
ನಗರದ ಅಂತರಸನಹಳ್ಳಿಯಲ್ಲಿರುವ ಸಾರಿಗೆ ನಿಯಂತ್ರಣಾಧಿಕಾರಿಗಳ ಕಚೇರಿಗೆ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ ಮತ್ತು ತುಮಕೂರು ನಗರದ ಕಾಂಗ್ರೆಸ್ ಮುಖಂಡರೊಂದಿಗೆ ನಿಯೋಗದಲ್ಲಿ ತೆರಳಿ ಕ.ರಾ.ರ.ಸಾ.ನಿ.,ದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್. ಬಸವರಾಜು ಅವರೊಂದಿಗೆ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುರಳೀಧರ ಹಾಲಪ್ಪ ಅವರು ಗುಬ್ಬಿ, ಚಿಕ್ಕನಾಯಕನಹಳ್ಳಿ, ಕೊರಟಗೆರೆ ತಾಲ್ಲೂಕುಗಳಲ್ಲಿ ಬಸ್ ಡಿಪೋ ಪ್ರಾರಂಭಿಸುವುದರಿಂದ ಅಲ್ಲಿನ ಸ್ಥಳೀಯರಿಗೆ ಉದ್ಯೋಗದ ಜೊತೆಗೆ ಆ ಭಾಗದ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ನಿವಾರಿಸಿದಂತಾಗುತ್ತದೆ. ಆದುದರಿಂದ ಶೀಘ್ರವಾಗಿ ಬಸ್ ಡಿಪೋ ಪ್ರಾರಂಭೀಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಅರ್.ಬಸವರಾಜು ಚಿಕ್ಕನಾಯಕನಹಳ್ಳಿಯಲ್ಲಿ ಘಟಕ ಆರಂಭಿಸಲು ಇಂದು ಭೂಮಿ ಹಸ್ತಾಂತರ ಕಾರ್ಯಕ್ರಮವಿದೆ, ಹಾಗೆಯೇ ಗುಬ್ಬಿಯಲ್ಲೂ ಸಹ ಈಗಾಗಲೇ ಭೂಮಿಯನ್ನು ಖರೀದಿಸಲಾಗಿದೆ. ಶೀಘ್ರದಲ್ಲೇ ಘಟಕ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ ಎಂದರು. ಜೊತೆಗೆ ಕೊರಟಗೆರೆಯಲ್ಲೂ ಸಹ ಘಟಕ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಮುರಳೀಧರ ಹಾಲಪ್ಪ ಅವರು,
ಬೆಳಿಗ್ಗೆ ಮತ್ತು ಸಂಜೆ ವಿದ್ಯಾರ್ಥಿ ಮತ್ತು ನೌಕರರು ಪ್ರಯಾಣಿಸುವ ಸಂದರ್ಭದಲ್ಲಿ ಜನಸಂದಣೆ ಹೆಚ್ಚಾಗಿದ್ದು, ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ತುಂಬಾ ತೊಂದರೆಯಾಗುತ್ತಿದೆ. ಬೆಳಿಗ್ಗೆ 9ರಿಂದ 11 ಗಂಟೆ ಮತ್ತು ಸಂಜೆ 4ರಿಂದ 6 ಗಂಟೆವರೆಗೆ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ, ತುಮಕೂರಿನಿಂದ ಎಲ್ಲಾ ತಾಲ್ಲೂಕುಗಳಿಗೆ ಹಾಗೂ ಎಲ್ಲಾ ತಾಲ್ಲೂಕುಗಳಿಂದ ತುಮಕೂರಿಗೆ ಪ್ರತಿ 5-10 ನಿಮಿಷಕ್ಕೊಮ್ಮೆ ಬಸ್‍ಗಳ ಸೇವೆಯನ್ನು ಒದಗಿಸುವಂತೆ ಮನವಿ ಮಾಡಿದರು.
ಶಾಲ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ನಿಲ್ಲಿಸಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಅವರಿಗೆ ಗೌರವ ಕೊಡುವಂತಹ ಕೆಲಸ ಬಸ್‍ನ ಚಾಲಕ ಮತ್ತು ನಿರ್ವಾಹಕರು ಮಾಡಬೇಕು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ವಿದ್ಯಾರ್ಥಿಗಳ ಬಸ್‍ಪಾಸ್ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು, ಹಾಗೂ ಕಾಲೇಜಿನಲ್ಲಿಯೇ ಪಾಸ್ ವಿತರಣೆಗೆ ಕ್ರಮ ಕೈಗೊಳ್ಳಬೇಕು, ಸರ್ಕಾರದಿಂದ ಉಚಿತ ವಿದ್ಯಾರ್ಥಿ ಬಸ್‍ಪಾಸ್ ನೀಡಲು ಹಾಗೂ ಸದರಿ ಮೊತ್ತವನ್ನು ಸರ್ಕಾರದಿಂದ ಭರಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಚಿಕ್ಕನಾಯಕನಹಳ್ಳಿಯಲ್ಲಿಯ ಜನರಿಗೆ ಮುಂಜಾನೆ ಮತ್ತು ರಾತ್ರಿ ವೇಳೆ ಬಸ್‍ನ ಸಮಸ್ಯೆ ಇದ್ದು, ಚಿಕ್ಕನಾಯಕನಹಳ್ಳಿಯಲ್ಲಿ ರಾತ್ರಿ ಬಸ್ ನಿಲುಗಡೆಯಾಗಿ ಮುಂಜಾನೆ ತುಮಕೂರು ಹಾಗೂ ಇತರೆ ನಗರಗಳಿಗೆ ಹೊರಡುವಂತೆ ಬಸ್ ಸೇವೆ ಒದಗಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದರು.
ಮಧುಗಿರಿಯಲ್ಲಿ ವಿಭಾಗೀಯ ಕಛೇರಿ ಪ್ರಾರಂಭಿಸಲು ಈಗಿನಿಂದಲೇ ಅಡಿಪಾಯ ಹಾಕಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ವಜಾಗೊಂಡ ಸಿಬ್ಬಂದಿಗಳ ನೇಮಕ ಹಾಗೂ ತುಮಕೂರು ವಿಭಾಗದ ನೌಕರರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್.ಬಸವರಾಜು ಮಧುಗಿರಿಯಲ್ಲಿ ವಿಭಾಗೀಯ ಕಚೇರಿ ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ ಎಂದು ತಿಳಿಸಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ಯವುದೇ ರೀತಿ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ಬಸ್ ಪಾಸ್ ವಿತರಣೆಗೂ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಚಿಕ್ಕನಾಯಕನಹಳ್ಳಿಯ ಮುಖಂಡರಾದ ಡಾ.ಪರಮೇಶ್ವರಪ್ಪ ಮಾತನಾಡಿ, ಹೊಸದುರ್ಗ-ಬೆಂಗಳೂರು ಮಾರ್ಗವಾಗಿ ರಾತ್ರಿವೇಳೆ ಬಸ್‍ಗಳ ಕೊರತೆ ಹೆಚ್ಚಾಗಿದೆ, ಆದ್ದರಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗುಬ್ಬಿ ತಾಲ್ಲೂಕು ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಣ್ಣ, ಶಂಕರಾನಂದ್, ವಸಂತಮ್ಮ, ಭರತಗೌಡ, ಗಂಗಾಧರ್, ಪುರುಷೋತ್ತಮ್ ಬಾಬು, ಚಿಕ್ಕನಾಯಕನಹಳ್ಳಿಯ ಡಾ.ಪರಮೇಶ್, ಕಿರಣ್, ತುಮಕೂರು ಗ್ರಾಮಾಂತರದ ಯದುಕುಮಾರ್, ಗ್ರಾಪಂ ಸದಸ್ಯರು, ನವೀನ್, ಚಂದ್ರಕಲಾ, ಮಾಜಿ ಎಪಿಎಂಸಿ ಸದಸ್ಯರು, ಮುಖಂಡರುಗಳಾದ ರೇವಣ್ಣಸಿದ್ಧಯ್ಯ, ನಟರಾಜು, ಯಶೋಧಮ್ಮ, ಗೀತ, ಸಾಹೇರಬಾನು ಸೇರಿದಂತೆ ಹಲವರು ಉಪಸ್ಥಿತರಿದ್ದರು.