ತುಮಕೂರು :
ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ತೆಗೆದು ಕೇಸರಿ ಬಾವುಟ ಹಾರಿಸುವುದಾಗಿ ಹೇಳಿ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪನವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಹಾಗೂ ಮಾಜಿ ಶಾಸಕ ಡಾ. ರಫೀಕ್‍ಅಹಮದ್‍ರವರ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಈಶ್ವರಪ್ಪ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಸಚಿವ ಈಶ್ವರಪ್ಪ ಅವರು ನೀಡಿರುವುದು ದೇಶದ್ರೋಹ ಹೇಳಿಕೆ.
ತ್ರಿವರ್ಣ ಧ್ವಜವು ನಮ್ಮ ರಾಷ್ಟ್ರದ ಸ್ವಾತಂತ್ರ್ಯ, ಅಖಂಡತೆ, ಸಾರ್ವಭೌಮತೆ, ಅಸ್ಮಿತೆ ಮತ್ತು ಸಂವಿಧಾನಗಳ ಸಂಕೇತವಾಗಿದೆ.
ಆದ್ದರಿಂದ ಈಶ್ವರಪ್ಪನವರನ್ನು ಸಂಪುಟದಿಂದ ಕೈ ಬಿಟ್ಟು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಕಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ದೇಶ ದ್ರೋಹದ ಹೇಳಿಕೆ, ಸಂವಿಧಾನ ಆಶಯಗಳಿಗೆ ಧಕ್ಕೆಯಾಗುವ ವಿಚಾರ ಹಾಗೂ ರಾಷ್ಟ್ರ ಲಾಂಛನಗಳಿಗೆ ಅಪಮಾನ ಮಾಡುವುದನ್ನು ಸಹಿಸಲಾಗುವುದಿಲ್ಲ. ಇಂತಹ ಘಟನೆಗಳೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ವ್ಯಕ್ತಿಯೊಬ್ಬರು ರಾಜ್ಯದ ಸಚಿವರಾಗಿರುವುದನ್ನು ಊಹಿಸಲೂ ಸಾಧ್ಯವಿಲ್ಲ ಎಂದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಕಾಂಗ್ರಸ್ ಅಧ್ಯಕ್ಷ ಆರ್. ರಾಮಕೃಷ್ಣ ಮಾತನಾಡಿ, ರಾಜ್ಯದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಾರಿಸುವ ವಿಚಾರದ ಬದಲು ಕೇಸರಿ ಧ್ವಜ ಹಾರಿಸುವ ವಿಚಾರಗಳನ್ನು ಮಾತನಾಡುವಂತೆ ಮಾಡಲಾಗುತ್ತಿದೆ. ಈಶ್ವರಪ್ಪನವರು ನಾಲಿಗೆ ಹರಿಬಿಟ್ಟು ರಾಷ್ಟ್ರಧ್ವಜದ ಬಗ್ಗೆ ಹಾಗೂ ದೇಶದ ಜನರಿಗೆ ಬಹಳ ದುರಂಹಕಾರವಾಗಿ ಮಾತನಾಡಿದ್ದಾರೆ. ಕೂಡಲೇ ಬಿಜೆಪಿ ಹೈಕಮಾಂಡ್ ಸಚಿವ ಈಶ್ವರಪ್ಪನವರ ರಾಜೀನಾಮೆ ಪಡೆಯಬೇಕು ಹಾಗೂ ರಾಜ್ಯಪಾಲರು ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಈಶ್ವರಪ್ಪನವರ ರಾಜೀನಾಮೆ ಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಡಾ. ರಫೀಕ್ ಅಹಮದ್ ಮಾತನಾಡಿ, ಸಂವಿಧಾನ ರಕ್ಷಣೆಯ ಪವಿತ್ರವಾದ ಜವಾಬ್ದಾರಿಯನ್ನು ಹೊಂದಿರುವ ತಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ತಮ್ಮ ಸಂವಿಧಾನದತ್ತ ಅಧಿಕಾರವನ್ನು ಚಲಾಯಿಸಿ, ಕೂಡಲೇ ಈಶ್ವರಪ್ಪನವರನ್ನು ಸಂಪುಟದಿಂದ ವಜಾಗೊಳಿಸುವ ಜತೆಗೆ ಅವರ ವಿರುದ್ಧ ಸೂಕ್ತ ಪ್ರಕರಣ ದಾಖಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆಂಚಮಾರಯ್ಯ, ಟಿ.ಎಸ್. ತರುಣೇಶ್, ಅಸ್ಲಾಂಪಾಷ, ಚಂದ್ರಶೇಖರಗೌಡ, ರೇವಣ್ಣಸಿದ್ದಯ್ಯ, ಟಿ.ಎಸ್. ನಿರಂಜನ್, ಇನಾಯತ್, ಮಂಜುನಾಥ್, ಪಾಲಿಕೆ ಸದಸ್ಯರಾದ ನಯಾಜ್, ಮಹೇಶ್, ಆಟೋರಾಜು, ಮೆಹಬೂಬು ಪಾಷ, ಗುರುಪ್ರಸಾದ್, ಸುಜಾತ, ಸವಿತಾ, ಮಂಗಳ, ನಾಗಮಣಿ, ಸಂಜೀವಕುಮಾರ್, ಶ್ರೀನಿವಾಸ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.