ತುಮಕೂರು :
ಸುಮಾರು ಐವತ್ತೆಂಟು ವರ್ಷಗಳ ಹಿಂದೆ ಶ್ರೀ ಸಿದ್ದಗಂಗಾ ಮಠದಲ್ಲಿ ಪ್ರಾರಂಭವಾದ ಕೃಷಿನ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಇಂದು ರಾಜ್ಯದಲ್ಲಿಯೇ ಮೊದಲನೇ ಸ್ಥಾನದಲ್ಲಿ ಗುರ್ತಿಸಿಕೊಂಡಿದೆ ಎಂದು ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಹೇಳಿದರು.
ಶ್ರೀ ಸಿದ್ಧಗಂಗಾ ಮಠದ ವತಿಯಿಂದ ಆಯೋಜಿಸಲಾಗಿದ್ದ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಶ್ರೀ ಮಠದಿಂದ ಹೊರ ತಂದಿರುವ ವಸ್ತು ಪ್ರದರ್ಶನದ ಇತಿಹಾಸವನ್ನು ಸಾರುವ ಸ್ಮರಣ ಸಂಚಿಕೆ “ಸುವರ್ಣ ದರ್ಶನ”ವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು 1964ರಲ್ಲಿ ಪ್ರಾರಂಭವಾದ ಕೃಷಿ ಮತ್ತು ಕೈಗಾರಿಕ ವಸ್ತು ಪ್ರದರ್ಶನ ಇಂದು ವಿಶ್ವ ವಿಖ್ಯಾತಿ ಪಡೆದಿದ್ದು, ಆಪಾರ ಜನಪ್ರಿಯತೆಯನ್ನು ಹೊಂದಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವುದು ಹಾಗೂ ಕೃಷಿಯಲ್ಲಿ ಆಗಿರುವ ಬದಲಾವಣೆಗಳನ್ನು ತಿಳಿಸುವುದೇ ಈ ವಸ್ತು ಪ್ರದರ್ಶನದ ಮೂಲ ಉದ್ದೇಶವಾಗಿದೆ. 12ನೇ ಶತಮಾನದ ಕಾಯಕದಲ್ಲಿ ನಂಬಿಕೆಯಿಟ್ಟಿದ್ದ, ಬಸವಣ್ಣರಾದಿಯಾಗಿ ಎಲ್ಲಾ ವಚನಕಾರರನ್ನ ಶ್ರೀಗಳಲ್ಲಿ ಕಂಡಿದ್ದೆವೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಎಂ.ರುದ್ರೇಶ್ ಮಾತನಾಡಿ ನಡೆದಾಡುವ ದೇವರ ಕ್ಷೇತ್ರದಲ್ಲಿ ಯಾವುದೇ ಬೇದ-ಭಾವವಿಲ್ಲದೆ ಅನ್ನ,ಅಕ್ಷರ, ಆಸ್ರಯವನ್ನು ನೀಡುವ ಕೆಲಸವನ್ನು ಮಾಡುತ್ತಿರುವುದು ಮಠದ ಪರಂಪರೆಯನ್ನು ತಿಳಿಸುತ್ತದೆ ಎಂದ ಅವರು ಶ್ರೀಗಳ ಹುಟ್ಟೂರು ವೀರಾಪುರದಲ್ಲಿ 111ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದ್ದು, ಗ್ರಾಮವನ್ನು ಸರ್ವಾಂಗಿಣ ಅಭಿವೃದ್ಧಿ ಮಾಡಲು ಸರ್ಕಾರ ಮುಂದಡಿಯಿಟ್ಟಿದೆ ಎಂದರಲ್ಲದೆ ಶ್ರೀಗಳ ಕುರಿತ ಕಿರುಚಿತ್ರಕ್ಕಾಗಿ ಚಿತ್ರೀಕರಣ ಮಾಡಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಮಹಾಸ್ವಾಮೀಜಿಯವರು ಶಿಕ್ಷಣ, ಮಾಹಿತಿ, ಮನರಂಜನೆಗಳ ಮೂಲಕ ರೈತರಿಗೆ ಹೊಸ ಆವಿಷ್ಕಾರಗಳನ್ನು ತಲುಪಿಸುವುದು ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು. ಪರಮಪೂಜ್ಯ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ದೂರದೃಷ್ಟಿಯ ಫಲವಾಗಿ ಅನೇಕ ಸತ್ಕಾರ್ಯಗಳು ನಡೆದುಕೊಂಡು ಬರುತ್ತಿವೆ. ಅಂತಹ ಮಹತ್ತರ ಕಾರ್ಯಗಳಲ್ಲೊಂದಾದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವು 1964ರಲ್ಲಿ ಪ್ರಾರಂಭವಾಗಿ ನಿರಂತರವಾಗಿ ತಂತ್ರಜ್ಞಾನದ ಉಪಯೋಗವನ್ನು ರೈತರಿಗೆ ತಿಳಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನದ ಜಂಟಿ ಕಾರ್ಯದರ್ಶಿಗಳಾದ ಎಸ್.ಶಿವಕುಮಾರ್, ಕೆಂ.ಬ. ರೇಣುಕಯ್ಯ, ಬಿ.ಗಂಗಾಧರಯ್ಯ, ಸಿದ್ಧಗಂಗಾ ಮಠದ ವಿದ್ಯಾರ್ಥಿಗಳು ಹಾಗೂ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.