ತುಮಕೂರು :
ಗ್ರಾಮದ ಸಮಗ್ರ ಅಭಿವೃದ್ಧಿಯೇ ಆದರ್ಶ ಗ್ರಾಮ ಯೋಜನೆಯ ಉದ್ದೇಶವಾಗಿದೆ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿರುವ ಗುಬ್ಬಿ ತಾಲ್ಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮದ ಪ್ರಗತಿ ಪರಿಶೀಲನಾ ಸಭೆ ಹಾಗೂ ಮಧುಗಿರಿ ತಾಲ್ಲೂಕಿನ ಗಂಜಲಗುಂಟೆ, ಕೊರಟಗೆರೆ ತಾಲ್ಲೂಕಿನ ಕುರಂಕೋಟೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಮತ್ತು ತಿಪಟೂರು ತಾಲ್ಲೂಕಿನ ಅರಳಗುಪ್ಪೆ ಗ್ರಾಮಗಳಲ್ಲಿ ಗ್ರಾಮಸಭೆ ನಡೆಸಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಳ್ಳಿಗಳು ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಈ ಯೋಜನೆಯಡಿ ನೀರಿನ ಮೂಲಗಳು ಮತ್ತು ಅವುಗಳ ಸಮರ್ಪಕ ಬಳಕೆ, ಸ್ವಚ್ಛತೆ ಮತ್ತು ನೈರ್ಮಲ್ಯ, ಜೀವನಮಟ್ಟ, ಶಾಲೆ ಸೇರಿದಂತೆ ಹಳ್ಳಿಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳು ಆದರ್ಶ ಗ್ರಾಮಗಳ ಅಭಿವೃದ್ಧಿಗಾಗಿ ಸಹಕಾರ ಮನೋಭಾವದಿಂದ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕು. ಸರ್ಕಾರದ ಯೋಜನೆ ಕುರಿತಾದ ಪರಿಕಲ್ಪನೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.
ಆದರ್ಶ ಗ್ರಾಮ ಯೋಜನೆಯನ್ನು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕು. ಈ ಯೋಜನೆಯ ಅನುಷ್ಠಾನದಿಂದ ರೈತರು ವಲಸೆ ಹೋಗುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾ ಕುಮಾರಿ ಮಾತನಾಡಿ, ಗ್ರಾಮಸ್ಥರಲ್ಲಿ ನಿರ್ಧಿಷ್ಟ ಮೌಲ್ಯ ಅಳವಡಿಸುವುದು, ಅಭಿವೃದ್ಧಿ ಕಾಮಗಾರಿಗಳಲ್ಲಿ ಜನರ ಸಹಭಾಗಿತ್ವ, ಸಮುದಾಯ ಸೇವೆ, ಪ್ರಕೃತಿಯೊಂದಿಗೆ ಜೀವಿಸುವುದು, ಶಾಂತಿ-ಸುವ್ಯವಸ್ಥೆ, ಸ್ವ-ಆಡಳಿತ ರೂಪಿಸುವುದು ಸೇರಿದಂತೆ ಗ್ರಾಮದ ಸಮಗ್ರ ಅಭಿವೃದ್ಧಿ ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಗೊಂಡಿರುವ ತಿಪಟೂರು ತಾಲ್ಲೂಕಿನ ಅರಳಗುಪ್ಪೆ ಗ್ರಾಮದಲ್ಲಿ ಮಾರ್ಚ್ 5ರಂದು, ಕೊರಟಗೆರೆ ತಾಲ್ಲೂಕಿನ ಕುರಂಕೋಟೆಯಲ್ಲಿ ಮಾ. 7ರಂದು, ಮಧುಗಿರಿ ತಾಲ್ಲೂಕಿನ ಗಂಜಲಗುಂಟೆ ಗ್ರಾಮದಲ್ಲಿ ಮಾ. 8ರಂದು ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮದಲ್ಲಿ ಮಾರ್ಚ್ 10ರಂದು ಗ್ರಾಮಸಭೆ ನಡೆಯಲಿದ್ದು, ಸಂಬಂಧಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಯೋಜನೆಯಡಿ ಆಯ್ಕೆಗೊಂಡ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು, ಮತ್ತಿತರರು ಹಾಜರಿದ್ದರು.