ತುಮಕೂರು :

      ಇತಿಹಾಸ ಪ್ರಸಿದ್ದ ಹೆತ್ತೇನಹಳ್ಳಿಯ ಶ್ರೀ ಮಾರಮ್ಮ ಆಧಿಶಕ್ತಿ ದೇವಿಯ ಜಾತ್ರಾ ಮಹೋತ್ಸವ ರಾತ್ರಿಯಿಂದ ಆರಂಭವಾಗಿದ್ದು, ಶ್ರೀ ಅಮ್ಮನವರ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಇಂದು ಮುಂಜಾನೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಪ್ರತಿ ವರ್ಷದಂತೆ ಈ ಬಾರಿಯೂ ನಸುಕಿನಲ್ಲಿ ನಡೆದ ಹೆತ್ತೇನಹಳ್ಳಿಯಮ್ಮನ ರಥೋತ್ಸವಕ್ಕೆ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತ ಸಮೂಹ ಸಾಕ್ಷಿಯಾಯಿತು. ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿಯ ಹೆತ್ತೇನಹಳ್ಳಿ, ಕೈದಾಳ, ಗೂಳೂರು, ಕಂಭತ್ತನಹಳ್ಳಿ, ರಂಗಯ್ಯನಪಾಳ್ಯ, ಚಿಕ್ಕಸಾರಂಗಿ, ನರುಗನಹಳ್ಳಿ, ಮಾಯಣ್ಣಗೌಡನ ಪಾಳ್ಯ ಸೇರಿದಂತೆ ಈ ಭಾಗದ ಹಳ್ಳಿಗಳಲ್ಲಿ ಹೆತ್ತೇನಹಳ್ಳಿಯಮ್ಮನ ಜಾತ್ರೆಗೆ ವಿಶೇಷವಾಗಿಯೇ ಭಕ್ತ ಸಮೂಹ ಸಜ್ಜಾಗುತ್ತಾರೆ. ಅದರಂತೆ ಸೋಮವಾರ ಇಡೀ ದಿನ ಭಕ್ತರು ಉಪವಾಸ ವ್ರತ ಮಾಡಿದ ಭಕ್ತರು ಮಧ್ಯರಾತ್ರಿಯಿಂದಲೇ ಅಗ್ನಿಕೊಂಡ ಹಾಯ್ದು ಅಮ್ಮನವರಿಗೆ ಹರಕೆ ಅರ್ಪಿಸಿ ಭಕ್ತಿ ಸಮರ್ಪಿಸಿದರು.
ಇನ್ನು ಈ ಭಾಗದ ಹೆಣ್ಣು ಮಕ್ಕಳು ಅಮ್ಮನವರಿಗೆ ಬಾಯಿ ಬೀಗದ ಹರಕೆ ತೀರಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹದಿ ಹರೆಯದ ಹೆಣ್ಣು ಮಕ್ಕಳು, ಮಹಿಳೆಯರು ಸಹ ಉಪವಾಸ ವ್ರತ ಮಾಡಿ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ಬಾಯಿಬೀಗ ಹಾಕಿಸಿಕೊಂಡು ಪೂಜೆ ಸಲ್ಲಿಸುವ ಮೂಲಕ ತಮ್ಮ ಹರಕೆ ತೀರಿಸಿದರು. ಹೆತ್ತೇನಹಳ್ಳಿ ಜಾತ್ರೆಗೆಂದೇ ಕಂಭತ್ತನಹಳ್ಳಿಯ ವೀರ ಮಕ್ಕಳು ಒಂದು ವಾರದಿಂದ ಉಪವಾಸವಿದ್ದು, ಮಧ್ಯರಾತ್ರಿ ಅಗ್ನಿಕೊಂಡ ಹಾಯುವ ಮೂಲಕ ಹರಕೆ ತೀರಿಸಿದ್ದು ವಿಶೇಷವಾಗಿತ್ತು. ನಾಡಿನ ನಾನಾ ಕಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತ ಸಮೂಹ ಅಗ್ನಿಕೊಂಡ ಹಾಯ್ದ ಬಳಿಕ ವಿವಿಧ ಬಗೆಯ ಪುಷ್ಪಗಳಿಂದ ವರ್ಣರಂಜಿತವಾಗಿ ಅಲಂಕರಿಸಲಾಗಿದ್ದ ರಥಕ್ಕೆ ಹೆತ್ತೇನಹಳ್ಳಿಯಮ್ಮ ದೇವಿಯನ್ನು ಕೂರಿಸುತ್ತಿದ್ದಂತೆ ನೆರೆದಿದ್ದ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು.

(Visited 101 times, 1 visits today)