ತುಮಕೂರು :
ಪೋಲಿಸ್ ಇಲಾಖೆಯಲ್ಲಿ ಯಾವುದೇ ದಯಾ, ದಾಕ್ಷಿಣ್ಯ ಇಲ್ಲದೆ ಕಾನೂನು ಪರಿಪಾಲನೆ ಮಾಡಬೇಕು ಎಂದು ಪೋಲಿಸ್ ತರಬೇತಿ ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕರಾದ ಪಿ. ಹರಿಶೇಖರನ್ ಅವರು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ಯಾರಿಗೂ ದಯೆ ತೋರಿಸದೆ, ದಾಕ್ಷಿಣ್ಯ ತೋರಿಸದೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದಾಗ ಮಾತ್ರ ನಿಸ್ವಾರ್ಥವಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದು ಅವರು ತಿಳಿಸಿದರು.
ನಗರದ ಜಿಲ್ಲಾ ಪೋಲಿಸ್ ಕವಾಯತು ಮೈದಾನದಲ್ಲಿ ನಡೆದ ತಾತ್ಕಾಲಿಕ ಪೋಲಿಸ್ ತರಬೇತಿ ಶಾಲೆಯ 11ನೇ ತಂಡದ ನಾಗರಿಕ ಮಹಿಳಾ ಪೋಲಿಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಪೋಲಿಸ್ ಇಲಾಖೆಯಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿದರೆ ಜನ ಸಮುದಾಯ ಅಂತಹವರನ್ನು ಸದಾ ಸ್ಮರಿಸುತ್ತದೆ. ಹಾಗಾಗಿ ತರಬೇತಿ ಮುಗಿಸಿಕೊಂಡು ಕರ್ತವ್ಯ ಹಾಜರಾಗುವ ಪ್ರಶಿಕ್ಷಣಾರ್ಥಿಗಳು ಇದನ್ನು ತಮ್ಮ ಸೇವಾ ಅವಧಿಯಲ್ಲಿ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಪೋಲಿಸ್ ಇಲಾಖೆಯಲ್ಲಿ ಇರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸರ್ಕಾರದ ಮತ್ತು ಜನತೆಗೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ಅವರು ಹೇಳಿದರು.
ಭಾರತದ ಹಲವಾರು ಜಾತಿ, ಮತಗಳನ್ನು ಹೊಂದಿರುವ ದೇಶ. ಇದು ಸಂವಿಧಾನದ ಮೂಲ ಆಶಯವೂ ಆಗಿದೆ. ನಮ್ಮ ಸಂವಿಧಾನದ ಮೂಲ ಆಶಯ ಕಾಪಾಡುವುದನ್ನು ಪೋಲಿಸರು ಮರೆಯಬಾರದು ಎಂದರು.
ಸರ್ಕಾರ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಾಗೆಯೇ ಪೋಲಿಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೂ ಸೌಲ್ಯಭ್ಯಗಳನ್ನು ನೀಡುತ್ತಿದ್ದು, ಮಹಿಳೆಯರಿಗೆ ಶೇ. 30-33 ರಷ್ಟು ಮೀಸಲಾತಿ ಕೊಡಲು ಸಿದ್ದವಾಗಿದೆ ಎಂದರು.