ತುಮಕೂರು :
ಮಹಾತ್ಮಗಾಂಧಿ ನರೇಗಾ ಯೋಜನೆಯ 2021-22ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಜಿಲ್ಲೆಯಿಂದ ಮೂವರು ಆಯ್ಕೆಯಾಗಿದ್ದಾರೆ.
ಕೊರಟಗೆರೆ ತಾಲ್ಲೂಕು ಐ.ಇ.ಸಿ. ಸಂಯೋಜಕ ಟಿ.ಕೆ.ವಿನುತ್, ಕುಣಿಗಲ್ ತಾಲ್ಲೂಕು ಹುತ್ರಿದುರ್ಗ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧುಸೂಧನ್ ಮೂರ್ತಿ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಯ ಡೇಟಾ ಎಂಟ್ರಿ ಆಪರೇಟರ್ ನವೀನ್ ಕುಮಾರ್ ಆಯ್ಕೆಯಾಗಿದ್ದಾರೆ
ಜಿಲ್ಲಾ ಪಂಚಾಯಿತಿಯಿಂದ ಸ್ವೀಕೃತಗೊಂಡಿದ್ದ ನಾಮ ನಿರ್ದೇಶನಗಳನ್ನು ಪರಿಶೀಲಿಸಿ, ಎಂ.ಐ.ಎಸ್. ಅಂಕಿ ಅಂಶಗಳನ್ನು ಆಧರಿಸಿ ಈ ಮೂರು ಮಂದಿಯನ್ನು ರಾಜ್ಯ ಮಟ್ಟದ ಪ್ರಶಸ್ತಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಆಯ್ಕೆ ಮಾಡಿದ್ದು, ಮಾರ್ಚ್ 14 ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಆಯ್ಕೆಗೊಂಡ ಈ ಮೂರು ಮಂದಿ ಅಧಿಕಾರಿ/ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಕಟಣೆ ತಿಳಿಸಿದೆ.