ತುಮಕೂರು :
ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು 108 ಆ್ಯಂಬುಲೆನ್ಸ್ ಸೇವೆಯು 24 x 7 ಕಾಲ ಸಾರ್ವಜನಿಕರಿಗೆ ಲಭ್ಯವಿರುವಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಕಚೇಯಲ್ಲಿಂದು ಜರುಗಿದ ತಾಯಿ ಮತ್ತು ಶಿಶು ಮರಣ, ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮಗಳ ನಾಲ್ಕನೇ ತ್ರೈಮಾಸಿಕ, ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, 108 ಆ್ಯಂಬುಲೆನ್ಸ್ ಸೇವೆ ಸಾರ್ವಜನಿಕರಿಗೆ ಸಕಾಲದಲ್ಲಿ ಅಲಭ್ಯವಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ದಿನದ 24 ಗಂಟೆಗಳ ಕಾಲ ಸೇವೆ ಒದಗಿಸದೆ ಕರ್ತವ್ಯ ಲೋಪ ಎಸಗಿದರೆ 108 ವಾಹನ ನಿರ್ವಹಣಾ ಸಂಸ್ಥೆಯ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುವುದರಿಂದ ರಾಷ್ಟ್ರೀಯ ಹೆದ್ದಾರಿಗಳು, ಮಾಯಸಂದ್ರದ ರಸ್ತೆ ಸೇರಿದಂತೆ ಮತ್ತಿತರ ರಸ್ತೆಗಳಲ್ಲಿ 108 ವಾಹನ ಚಾಲಕರು ಸೇವೆ ಒದಗಿಸಲು ಸದಾ ಸಿದ್ಧರಿರುವಂತೆ ಹಾಗೂ ವಾಹನ ದುರಸ್ತಿಗೆ ಬಂದಾಗ ಸ್ಥಳೀಯ ತಾಲ್ಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ತರುವಂತೆ ಆ್ಯಂಬುಲೆನ್ಸ್ ನಿರ್ವಹಣಾ ಸಂಸ್ಥೆಯ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ಕುರಿತು ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ: ಕೇಶವ್‍ರಾಜ್ ಕಳೆದ 2021ರ ನವೆಂಬರ್ ಮಾಹೆಯಿಂದ 2022ರ ಫೆಬ್ರವರಿವರೆಗೆ 10855 ಹೆರಿಗೆಗಳಾಗಿದ್ದು, ಈ ಪೈಕಿ ವಿವಿಧ ಕಾರಣಗಳಿಂದ 10 ತಾಯಿ ಮರಣ ಹಾಗೂ 102 ಶಿಶು ಮರಣ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಕರಣಗಳು ವರದಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಅವರು, ತಾಯಿ-ಶಿಶು ಮರಣ ಹೊಂದಿರುವ ತಾಲ್ಲೂಕು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾದ್ಯಂತ ಶಾಲಾ- ಕಾಲೇಜು ಸುತ್ತ ಮುತ್ತ 92 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಸಂಪೂರ್ಣವಾಗಿ ನಿμÉೀಧಿಸಲಾಗಿದ್ದರೂ, ಇದಕ್ಕೆ ವ್ಯತಿರಿಕ್ತವಾಗಿ ಮಾರಾಟ ಮಾಡುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಡಿಡಿಪಿಐ ಸಿ. ನಂಜಯ್ಯ ಅವರಿಗೆ ಸೂಚಿಸಿದರು.
ಜಿಲ್ಲಾ ತಂಬಾಕು ಕೋಶದ ಸಲಹೆಗಾರ ರವಿಪ್ರಕಾಶ್ ಮಾತನಾಡಿ, ಜಿಲ್ಲಾದ್ಯಂತ 2021ರ ಏಪ್ರಿಲ್‍ನಿಂದ 2022ರ ಫೆಬ್ರುವರಿ ಮಾಹೆಯವರೆಗೆ 62 ದಾಳಿ ನಡೆಸಿ 2212 ಪ್ರಕರಣಗಳನ್ನು ದಾಖಲಿಸಲಾಗಿದ್ದು, 1,92,660 ರೂ.ಗಳನ್ನು ದಂಡ ವಸೂಲಿ ಮಾಡಲಾಗಿದೆ. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಶಾಲಾ-ಕಾಲೇಜುಗಳಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯಲ್ಲದೆ, ತಂಬಾಕು ವ್ಯಸನಿಗಳಿಗೆ ಗುಂಪು ಚರ್ಚೆ ಮತ್ತು ಆಪ್ತ ಸಮಾಲೋಚನೆ ಮೂಲಕ ಮಾರ್ಗದರ್ಶನ ನೀಡಲಾಗಿದೆ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ: ಸನತ್ ಕುಮಾರ್ ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ 2002 ರಿಂದ ಮಾರ್ಚ್ 2021ರವರೆಗೆ 10,85,268 ಜನರನ್ನು ಹೆಚ್.ಐ.ವಿ. ಪರೀಕ್ಷೆಗೊಳಪಡಿಸಲಾಗಿದ್ದು, ಇವರಲ್ಲಿ 17,495 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿಸಿದರಲ್ಲದೆ, 2021-22ರಲ್ಲಿ ತಿಪಟೂರಿನ ಶ್ರೀ ದುರ್ಗ ಇಂಡಸ್ಟ್ರೀಸ್, ತುಮಕೂರಿನ ಎಸ್‍ಎಲ್‍ಎನ್ ರೈಸ್ ಇಂಡಸ್ಟ್ರೀಸ್, ಗುಬ್ಬಿ ತಾಲ್ಲೂಕಿನ ಕೆಎಂಎಫ್ ಫುಡ್ ಕಾರ್ಖಾನೆ, ಮಧುಗಿರಿಯ ಶ್ರೀನಿಧಿ ಫಾರಂ ಹಾಗೂ ಶ್ರೀ ಕಾಲಭೈರವೇಶ್ವರ ಫೌಟ್ರಿ ಫಾರಂ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಪೂರ್ವ ಕನ್ಸಟ್ರಕ್ಷನ್ ಸೇರಿದಂತೆ 6 ಕೈಗಾರಿಕೆ/ಕಾರ್ಖಾನೆಗಳಲ್ಲಿ ಹೆಚ್.ಐ.ವಿ. ಕುರಿತು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಕೈಗಾರಿಕೆ/ಕಾರ್ಖಾನೆಗಳಲ್ಲಿ ವಾರ್ಷಿಕ ಕನಿಷ್ಟ 2 ಬಾರಿಯಾದರೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸಬೇಕು ಎಂದು ಕಾರ್ಖನೆಗಳ ಮುಖ್ಯಸ್ಥರಿಗೆ ಸೂಚಿಸಿದರು.
ನಗರದ ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕ ಪ್ರದೇಶದಲ್ಲಿ ಜೈವಿಕ ತ್ಯಾಜ್ಯ ನಿರ್ವಹಣೆಗಾಗಿ 2 ಎಕರೆ ಪ್ರದೇಶವನ್ನು ನೀಡಬೇಕೆಂದು ಪಾಲಿಕೆಗೆ ಸೂಚಿಸಿದರಲ್ಲದೆ ಜೈವಿಕ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯನ್ನು ಭಾರತೀಯ ವೈದ್ಯಕೀಯ ಸಂಘದ ತುಮಕೂರು ಶಾಖೆಗೆ ವಹಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ ವಿದ್ಯಾಕುಮಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ: ಟಿ.ಎ.ವೀರಭದ್ರಯ್ಯ, ಕುಟುಂಬ ಕಲ್ಯಾಣಾಧಿಕಾರಿ ಡಾ: ಮಹಿಮಾ, ತಾಲ್ಲೂಕು ವೈದ್ಯಾಧಿಕಾರಿಗಳು, ಸಹಾಯಕ ವೈದ್ಯಾಧಿಕಾರಿಗಳು ಹಾಜರಿದ್ದರು.