ತುಮಕೂರು :
ಪಾವಗಡ ಸಮೀಪದ ಪಳವಳ್ಳಿ ಕೆರೆ ಕಟ್ಟೆ ಮೇಲೆ ಸಂಭವಿಸಿ ಭೀಕರ ಬಸ್ ಅಪಘಾತದಲ್ಲಿ ಗಾಯಗೊಂಡು ನಗರದ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯವನ್ನು ಸಂಸದ ಜಿ.ಎಸ್. ಬಸವರಾಜು, ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಹಾಗೂ ಬಿಜೆಪಿ ಮುಖಂಡ ಎಸ್. ಶಿವಪ್ರಸಾದ್ ವಿಚಾರಿಸಿದರು.
ಬಸ್ ಅಪಘಾತದಲ್ಲಿ ಗಾಯಗೊಂಡವರ ಪೈಕಿ 21 ಮಂದಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆಗಾಗಿ ದಾಖಲಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ ಸಂಸದರು, ವಿಧಾನ ಪರಿಷತ್ ಸದಸ್ಯರು ಗಾಯಾಗಳುಗಳ ಬೆಡ್ ಬಳಿ ತೆರಳಿ ಅವರಿಂದ ಬಸ್ ಅವಘಾತದ ಮಾಹಿತಿ ಪಡೆದು ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.
ಗಾಯಾಳುಗಳಿಗೆ ಯಾವುದೇ ರೀತಿಯ ಕೊರತೆಯಾಗದಂತೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯನವರಿಗೆ ಸೂಚಿಸಿದರು.
ನಂತರ ಮಾತನಾಡಿದ ಸಂಸದ ಜಿ.ಎಸ್. ಬಸವರಾಜು ಅವರು, ಆರ್‍ಟಿಓ ಇಲಾಖೆ ಸತ್ತು ಹೋಗಿದೆ. ಹೀಗಾಗಿ ಈ ದುರಂತ ನಡೆದಿದೆ. ಈ ಘಟನೆಗೆ ಆರ್‍ಟಿಓ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೂ ಕಾರಣವಾಗಿ. ಹಾಗಾಗಿ ಈ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೆಎಸ್ಸಾರ್ಟಿಸಿ ಚಾಲಕರನ್ನು ಬುಕ್ ಮಾಡಿಕೊಂಡು ಖಾಸಗಿ ಬಸ್‍ನವರು ಈ ರೀತಿ ಓವರ್ ಲೋಡ್ ತುಂಬಿಕೊಂಡು ಸಾರ್ವಜನಿಕರ ಪ್ರಾಣದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ದುರಂತದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಐವರು ಜೀವ ಕಳೆದುಕೊಂಡಿದ್ದಾರೆ. ಉಳಿದ 30ಕ್ಕೂ ಅಧಿಕ ಮಂದಿ ಪ್ರಯಾಣಿಕರು ಕೈ ಮುರಿತ, ಕಾಲು ಮುರಿತ, ಬೆನ್ನಿನ ಮೂಳೆ ಮುರಿತ ಸೇರಿದಂತೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರಂತ ನಡೆಯಬಾರದಿತ್ತು ಎಂದರು.
ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಮಾತನಾಡಿ, ಪಾವಗಡದಲ್ಲಿ ಈ ಬಸ್ ಅಪಘಾತದ ದುರಂತ ನಡೆಯಬಾರದಿತ್ತು. ದುರಾದೃಷ್ಟವಶಾತ್ ನಡೆದು ಹೋಗಿದೆ. ಅಪಘಾತದಲ್ಲಿ ಸಾವನ್ನಪ್ಪಿರುವ ಕುಟುಂಬದವರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಹೇಳಿದರು.
ಬಸ್ ಚಾಲಕರುಗಳು ಬಹಳ ಎಚ್ಚರಿಕೆಯಿಂದ ಬಸ್ ಚಲಾಯಿಸಬೇಕು. ಹತ್ತಾರು ಮಂದಿ ಪ್ರಯಾಣಿಕರ ಜೀವ ಚಾಲಕನ ಕೈಯಲ್ಲಿ ಇರುತ್ತದೆ. ಇದನ್ನು ಅರ್ಥ ಮಾಡಿಕೊಂಡು ಬಹಳ ಜಾಗರೂಕತೆಯಿಂದ ಬಸ್ ಚಲಾಯಿಸಬೇಕು ಎಂದ ಅವರು, ಪಾವಗಡಕ್ಕೂ ತೆರಳಿ ಮೃತ ಕುಟುಂಬದವರಿಗೆ ಸಾಂತ್ವನ ಹೇಳಿ, ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸುವ ಕೆಲಸವನ್ನು ಮಾಡಲಾಗುವುದು. ಜತೆಗೆ ಮೃತರ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಬಗ್ಗೆಯೂ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಪಳವಳ್ಳಿ ಕೆರೆ ಕಟ್ಟೆ ಮೇಲೆ ಬಸ್ ಚಲಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬಸ್ ವೇಗವಾಗಿ ಹೋಗುತ್ತಿತ್ತು. ಹೇಗೆ ಬಿತ್ತು ಎಂಬುದು ಗೊತ್ತಿಲ್ಲ ಎಂದು ಅಪಘಾತದಲ್ಲಿ ಎಡಗೈ ಮೂಳೆ ಮುರಿದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯಲ್ಲಪ್ಪನಾಯಕನಹಳ್ಳಿ ರಾಜು ಹೇಳಿದರು.
ಪಳವಳ್ಳಿಕೆರೆ ಕಟ್ಟೆ ಮೇಲೆ ಕ್ರಾಸ್‍ನಲ್ಲಿ ವೇಗವಾಗಿ ಬಸ್ ಬಂದಿದ್ದರಿಂದ ಕ್ರಾಸ್ ಮಾಡುವಾಗ ಪಲ್ಟಿ ಹೊಡೆಯಿತು. ಬಸ್ ಒಳಗೂ ಮತ್ತು ಟಾಪ್ ಮೇಲೂ ಜನ ಕಿಕ್ಕಿರಿದು ತುಂಬಿದ್ದರು ಎಂದು ಮೂಳೆ ಮುರಿದು ಚಿಕಿತ್ಸೆ ಪಡೆಯುತ್ತಿರುವ ಕಲ್ಯಾಣ್‍ಕುಮಾರ್ ತಿಳಿಸಿದರು.