ಬೆಂಗಳೂರು:
ಆರೋಗ್ಯ ತಪಾಸಣೆಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಗಂಗಾ ಮಠಾಧ್ಯಕ್ಷರಾದ ಡಾ.ಶಿವಕುಮಾರ ಸ್ವಾಮೀಜಿ ಸೋಮವಾರ ಮಧ್ಯಾಹ್ನ ಮಠಕ್ಕೆ ಮರಳಿದರು.
ಡಿ.1 ರಂದು ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಶಿವಕುಮಾರ ಸ್ವಾಮೀಜಿಗಳು, ನಗರದ ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಶ್ರೀಗಳ ಆರೋಗ್ಯ ತಪಾಸಣೆ ನಡೆಸಿದಾಗ ರಕ್ತ ಹಾಗೂ ಕಿಡ್ನಿಯಲ್ಲಿ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರು.
ಜತೆಗೆ ಎರಡು ಸ್ಟಂಟ್‌ಗಳನ್ನು ಸಹ ಶಸ್ತ್ರಚಿಕಿತ್ಸೆ ಇಲ್ಲದೆ ಅಳವಡಿಸಲಾಗಿದೆ. ರವಿವಾರ ಶ್ರೀಗಳು ಚೇತರಿಸಿಕೊಂಡಿದ್ದರು. ಆದರೆ, ಶ್ರೀಗಳು ಮಠಕ್ಕೆ ತೆರಳಲೇಬೇಕು ಎಂದು ಹಠ ಮಾಡಿದರು. ಹಾಗಾಗಿ ಸೋಮವಾರ ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಿದ್ದೇವೆ ಎಂದು ವೈದ್ಯ ಡಾ.ರವೀಂದ್ರ ಅವರು ಸುದ್ದಿಗಾರರಿಗೆ ತಿಳಿಸಿದರು.
ಶಿವಕುಮಾರ ಸ್ವಾಮೀಜಿಗಳಿಗೆ ಇನ್ನೂ 3-4 ಆಂಟಿ ಬಯೋಟೆಕ್ ಚಿಕಿತ್ಸೆ ನೀಡಬೇಕಾಗಿದೆ. ಹೀಗಾಗಿ, ಇನ್ನೆರಡು ಮೂರು ದಿನ ಆಸ್ಪತ್ರೆಯಲ್ಲೆ ಇರಿಸಿಕೊಳ್ಳಲು ನಿರ್ಧರಿಸಿದ್ದೆವು. ಆದರೆ, ಶ್ರೀಗಳು ಆಸ್ಪತ್ರೆಯಲ್ಲಿ ಇರಲು ಒಪ್ಪದ ಕಾರಣ ಇಂದು ಮಠಕ್ಕೆ ಕಳುಹಿಸಿಕೊಟ್ಟಿದ್ದೇವೆ. ಮಠದಲ್ಲೇ ಚಿಕಿತ್ಸೆ ಮುಂದುವರೆಸಲಾಗುವುದು ಎಂದು ರವೀಂದ್ರ ಹೇಳಿದರು.