ತುಮಕೂರು: ಜಿಲ್ಲೆಯಲ್ಲಿರುವ ಕೆರೆಗಳನ್ನು ಮಲಿನಗೊಳಿಸದೆ ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ‘ವಿಶ್ವ ಜಲ ದಿನಾಚರಣೆ’ ಪ್ರಯುಕ್ತ ಮಂಗಳವಾರ ನಗರದ ಮರಳೂರು ಕೆರೆ ದಂಡೆಯಲ್ಲಿ ಏರ್ಪಡಿಸಿದ್ದ ಕೆರೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವಸಂಸ್ಥೆಯ ಆಶಯದಂತೆ ನೀರಿನ ಮಹತ್ವ ಮತ್ತು ಜಲ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಬತ್ತಿ ಹೋಗುತ್ತಿದ್ದು, ಕೆರೆಗಳಲ್ಲಿ ನೀರು ಭರ್ತಿಯಾಗುತ್ತಿಲ್ಲ. ಗಿಡ-ಮರಗಳನ್ನು ಕಡಿಯುತ್ತಿರುವುದರಿಂದ ಉತ್ತಮ ಮಳೆ ಬಾರದಾಗಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕಳೆದ ವರ್ಷವೂ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡಿದ್ದರಿಂದ ಕೆರೆ ದಂಡೆ ಸ್ವಚ್ಛವಾಗಿ ಕಾಣುತ್ತಿದೆ. ಮುಂದಿನ ಪೀಳಿಗೆಗೆ ಶುದ್ಧ ನೀರಿನ ಸಮಸ್ಯೆಯಾಗದಂತೆ ನೀರಿನ ಸಂರಕ್ಷಣೆ ಮಾಡುವ ಪಣತೊಡಬೇಕೆಂದು ಕರೆ ನೀಡಿದರು.
ಪಾಲಿಕೆ ಸದಸ್ಯ ಧರಣೇಂದ್ರ ಕುಮಾರ್ ಮಾತನಾಡಿ, ಕಳೆದ ಒಂದು ವರ್ಷದ ಹಿಂದೆ ಮರಳೂರು ಕೆರೆ ದಂಡೆಯಲ್ಲಿ ಕಸದ ರಾಶಿಯೇ ತುಂಬಿಕೊಂಡಿತ್ತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪಾಲಿಕೆ ವತಿಯಿಂದ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಕಸ ಸುರಿಯುವುದು ತಪ್ಪಿದೆ ಎಂದು ತಿಳಿಸಿದರಲ್ಲದೆ, ವಿದ್ಯಾರ್ಥಿಗಳ ಮುಂದಾಳತ್ವದಲ್ಲಿ ಮೂರು ತಿಂಗಳಿಗೊಮ್ಮೆ ಈ ಕೆರೆ ದಂಡೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದರಿಂದ ಜನ ಎಚ್ಚೆತ್ತು, ಕಸ ಸುರಿಯುವುದು ಬಿಟ್ಟಿದ್ದಾರೆ. ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಸ್ವಚ್ಛಗೊಳಿಸಲು 1.5 ಕೋಟಿ ರೂ.ಗಳ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಸ್ವಚ್ಛತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಆಗಿಂದಾಗ್ಗೆ ಹಮ್ಮಿಕೊಳ್ಳುವುದರಿಂದ ನೈರ್ಮಲ್ಯತೆ ಕಾಪಾಡಲು ಸಾಧ್ಯವಾಗುತ್ತದೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕೆರೆ ತುಂಬಿ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗಿದೆ. ನಗರ ನೀರು ಸರಬರಾಜು ಮಂಡಳಿಗೆ ಸ್ಥಳಾವಕಾಶ ಹಾಗೂ ಮತ್ತಿತರ ಸೌಕರ್ಯ ಕಲ್ಪಿಸಿದಲ್ಲಿ ಮರಳೂರು ಕೆರೆಯಿಂದ ನಗರದ ಶೇ.25ರಷ್ಟು ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಅನುಕೂಲವಾಗುತ್ತದೆ. ಸ್ಮಾರ್ಟ್ ಸಿಟಿ ಮತ್ತು ಪಾಲಿಕೆಯಿಂದ ಕೆರೆಯ ಸುತ್ತ ಫೆನ್ಸಿಂಗ್ ಹಾಗೂ ಲೈಟಿಂಗ್ ವ್ಯವಸ್ಥೆ ಮಾಡಿದರೆ ಕೆರೆ ನೀರು ಕಲುಷಿತವಾಗದಂತೆ ತಡೆಯಬಹುದೆಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ.ವಿದ್ಯಾಕುಮಾರಿ ಮಾತನಾಡಿ, ಆಧುನೀಕರಣದ ನೆಪದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಕೆರೆ-ಕಟ್ಟೆಗಳನ್ನು ಸಂರಕ್ಷಿಸದಂತಾಗಿದೆ. ಈಗಲಾದರೂ ನಾವೆಲ್ಲರೂ ಎಚ್ಚೆತ್ತುಕೊಂಡು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವ ಮೂಲಕ ಕೆರೆ-ಕಟ್ಟೆ ಸೇರಿದಂತೆ ನೀರಿನ ಮೂಲಗಳನ್ನು ಸಂರಕ್ಷಿಸಬೇಕು ಎಂದರಲ್ಲದೆ ಕೆರೆಗಳನ್ನು ಸ್ವಚ್ಛಗೊಳಿಸುವುದರಿಂದ ಸಕಲ ಜೀವರಾಶಿಗಳಿಗೂ ಕುಡಿಯುವ ನೀರಿನ ತೊಂದರೆಯಾಗದಂತೆ ರಕ್ಷಿಸಬಹುದು ಎಂದು ತಿಳಿಸಿದರು.
ವಕೀಲ ಸಂಘದ ಅಧ್ಯಕ್ಷ ಗೋಪಾಲಗೌಡ ಮಾತನಾಡಿ ನೀರು ತುಂಬಿ ಹಸಿರಿನಿಂದ ಕಂಗೊಳಿಸುತ್ತಿದ್ದ ಮರಳೂರು ಕೆರೆ ಸಂರಕ್ಷಣೆಯಿಲ್ಲದೆ ಅನೈರ್ಮಲ್ಯದಿಂದ ಕೂಡಿತ್ತು. ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪಾಲಿಕೆಯ ಸಹಕಾರದಲ್ಲಿ ಸ್ವಚ್ಛತಾ ಕಾಮಗಾರಿ ಕೈಗೊಂಡಿದ್ದರಿಂದ ಮತ್ತೊಮ್ಮೆ ಕೆರೆಗೆ ಮರುಜೀವ ಬಂದಂತಾಗಿದೆ ಎಂದರಲ್ಲದೆ, ಕೆರೆಗಳನ್ನು ಸಂರಕ್ಷಣೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ನೀರಿಗಾಗಿ ಹೋರಾಟ ನಡೆಯುವುದಂತೂ ಸುಳ್ಳಲ್ಲವೆಂದು ಅಭಿಪ್ರಾಯಪಟ್ಟರು.
ಪೌರಕಾರ್ಮಿಕರು, ಎನ್‍ಸಿಸಿ ಕೆಡೆಟ್ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ವಕೀಲರ ಸಂಘದ ಪ್ರಧಾನ ಕಾಯದರ್ಶಿ ಡಿ.ಸಿ.ಹಿಮಾನಂದ್, ಪಾಲಿಕೆ ವೈದ್ಯಾಧಿಕಾರಿ ಡಾ: ರಕ್ಷಿತ್, ಪರಿಸರ ಇಂಜಿನಿಯರ್ ಕೃಷ್ಣಮೂರ್ತಿ, ಆರೋಗ್ಯ ನಿರೀಕ್ಷಕ ಆನಂದ್, ಲೆಫ್ಟಿನೆಂಟ್‍ಗಳಾದ ಪ್ರದೀಪ್ ಕುಮಾರ್ ಹಾಗೂ ಜಯಪ್ರಕಾಶ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು, ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.