ಬೆಂಗಳೂರು: ಪಂಚರಾಜ್ಯ ಚುನಾವಣೆ ಮುಗಿದ ಬೆನ್ನಲ್ಲೆ ಇಂಧನ ಬೆಲೆ ಏರಿಕೆಯಾಗಿದೆ ಎಂದು ಟೀಕಿಸುವವರನ್ನು ಬಾವಿ ಒಳಗಿನ ಕಪ್ಪೆ ಎಂದು ಕರೆಯಬೇಕೋ, ಪೊಟರೆ ಒಳಗಿನ ಕಪ್ಪೆ ಎನ್ನಬೇಕೋ ತಿಳಿಯುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಗಿ ಮಾತನಾಡಿದರು.
ಜಗತ್ತಿನಾದ್ಯಂತ ಏರಿಕೆಯಾಗುತ್ತಿದೆ. ಬರೀ ಈ ನಾಲ್ಕು ರಾಜ್ಯದ ಚುನಾವಣೆಯಿಂದ ದರ ಏರಿಕೆಯಾಗುತ್ತಿದೆ ಎನ್ನುವುದು ತಪ್ಪು ವ್ಯಾಖ್ಯಾನ. ಅವರನ್ನು ಶತ ಮೂರ್ಖರು ಎಂದು ಕರೆಯಬೇಕಾಗುತ್ತದೆ ಎಂದು ಕಿಡಿಕಾರಿದರು.
ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮದವರು ಯಾರು ಯಾರನ್ನು ಬದಲಾಯಿಸುತ್ತೀರಾ? ನಿಮ್ಮ ಹೇಳಿಕೆಗೆ ಉತ್ತರ ಕೊಡಲು ಆಗುತ್ತಾ? ಎಂದು ಉತ್ತರಿಸಿದರು.
ಸಿ.ಟಿ.ರವಿ ಆಕಾಂಕ್ಷಿ ಎಂಬುದಕ್ಕೆ ನಗುತ್ತಾಲೇ ಉತ್ತರಿಸಿದ ಅವರು ನಮ್ಮಲ್ಲಿ ಆಸೆ, ಆಕಾಂಕ್ಷೆ ಏನು ನಡೆಯಲ್ಲ. ನಾನು ಕಾರ್ಯಕರ್ತ, ಕಾರ್ಯಕರ್ತನಾಗಿ ಕೆಲಸ ಮಾಡಬೇಕು. ಜವಾಬ್ದಾರಿ ಬದಲಾಗುತ್ತದೆ, ಕಾರ್ಯಕರ್ತನೆಂಬ ಭಾವನೆ ಬದಲಾಗದು. ಚೆನ್ನಾಗಿರುವ ಸಂಸಾರಕ್ಕೆ ಹುಳಿ ಹಿಂಡಬೇಡಿ ಎಂದು ಚಟಾಕಿ ಹಾರಿಸಿದರು.