ತುಮಕೂರು :
ಜಿಲ್ಲಾಡಳಿತ ಹಾಗೂ ಸಂಘಟನೆಗಳೆಲ್ಲರ ಸಹಕಾರದೊಂದಿಗೆ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ 131ನೇ ಡಾ: ಬಿ.ಆರ್. ಅಂಬೇಡ್ಕರ್ ಹಾಗೂ 115ನೇ ಡಾ: ಬಾಬು ಜಗಜೀವನರಾಂ ಜನ್ಮದಿನಾಚರಣೆಯನ್ನು ಏಪ್ರಿಲ್ 14ರಂದು ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ಆಚರಿಸಲು ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಯಂತಿಯನ್ನು ವಿಜೃಂಭಣೆಯಿಂದ ನಡೆಸಲು ಹಾಗೂ ಡೀಸಿ ಕಚೇರಿಯಿಂದ ಎಂ.ಜಿ.ರಸ್ತೆ, ಟೌನ್ ಹಾಲ್ ವೃತ್ತ ಮಾರ್ಗವಾಗಿ ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೆ ಡಾ: ಬಾಬು ಜಗಜೀವನರಾಂ ಹಾಗೂ ಡಾ: ಬಿ.ಆರ್. ಅಂಬೇಡ್ಕರ್ ಭಾವಚಿತ್ರಗಳ ಮೆರವಣಿಗೆ ಏರ್ಪಡಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಚೇರಿ, ಪಂಚಾಯತಿಗಳಲ್ಲಿ ಕಡ್ಡಾಯವಾಗಿ ಮಹನೀಯರ ದಿನಾಚರಣೆಯನ್ನು ಆಚರಿಸಬೇಕು. ಜನ್ಮ ದಿನಾಚರಣೆ ಕಾರ್ಯಕ್ರಮ ಹಾಗೂ ಮೆರವಣಿಗೆಯಲ್ಲಿ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಶಿಷ್ಟಾಚಾರದನ್ವಯ ಮುಖ್ಯ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಹರಿರಾಮ್ ಹಾಗೂ ಡಾ: ಸದಾಶಿವ ಅವರಿಂದ ಉಪನ್ಯಾಸ ಏರ್ಪಡಿಸುವ ಹಾಗೂ ದಲಿತ ಸಂಘಟನೆಯ 20 ಮಂದಿ(ತಾಲ್ಲೂಕುವಾರು ತಲಾ ಇಬ್ಬರು ಸೇರಿದಂತೆ) ಹೋರಾಟಗಾರರನ್ನು ಗುರುತಿಸಿ ಸನ್ಮಾನಿಸಬೇಕು. ಪ್ರಶಸ್ತಿಗೆ ಈಗಾಗಲೇ ಸನ್ಮಾನ ಪಡೆದವರನ್ನು ಪರಿಗಣಿಸದೆ ಹೊಸಬರಿಗೆ ಆದ್ಯತೆ ನೀಡಬೇಕೆಂದು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏಪ್ರಿಲ್ 5ರಂದು ಡಾ: ಬಾಬು ಜಗಜೀವನ್‍ರಾಂ ಹಾಗೂ ಏಪ್ರಿಲ್ 14ರಂದು ಮಹಾವೀರ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಕೋವಿಡ್ ಸೋಂಕಿನಿಂದ ಕಳೆದ 2 ವರ್ಷಗಳಲ್ಲಿ ಸರ್ಕಾರದ ನಿರ್ದೇಶನದನ್ವಯ ಮಹನೀಯರ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ. ಈ ಬಾರಿ ಅದ್ದೂರಿಯಾಗಿ ಆಚರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದರಲ್ಲದೆ, ಪ್ರಸ್ತುತ ಕೋವಿಡ್ ಸೋಂಕು ಕಡಿಮೆಯಾಗಿದ್ದು, ಮುಕ್ತವಾಗಿಲ್ಲದ ಕಾರಣ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ತಿಳಿಸಿದರು.