ತುಮಕೂರು :
ಕಾಯಕ ಯೋಗಿ, ಆಧುನಿಕ ಬಸವಣ್ಣ, ತ್ರಿವಿಧ ದಾಸೋಹಿ, ನಾಡಿನ ಉದ್ದಗಲಕ್ಕೂ ನಡೆದಾಡುವ ದೇವರೆಂದೇ ಹೆಸರುವಾಸಿಯಾಗಿದ್ದ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವಕ್ಕೆ ನಡೆದಿರುವ ಅಂತಿಮ ಹಂತದ ಸಿದ್ದತೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಶೀಲನೆ ನಡೆಸಿದರು.
ಶ್ರೀಗಳ 115ನೇ ಜಯಂತಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೈಗೊಂಡಿರುವ ಅಭೂತ ಪೂರ್ವ ಭದ್ರತಾ ಕಾರ್ಯ, ಶ್ರೀಗಳ ಗುರುವಂದನಾ ಮಹೋತ್ಸವಕ್ಕೆ ಸಿದ್ದಗೊಳ್ಳುತ್ತಿರುವ ಬೃಹತ್ ವೇದಿಕೆಯನ್ನು ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಅವರಿಂದ ಮಾಹಿತಿ ಪಡೆದರು.
ನಗರದ ಸಿದ್ದಗಂಗಾ ಮಠಕ್ಕೆ ಸಚಿವರಾದ ಅರಗ ಜ್ಞಾನೇಂದ್ರ, ಜೆ.ಸಿ. ಮಾಧುಸ್ವಾಮಿ, ವಿ. ಸೋಮಣ್ಣ ಅವರೊಂದಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ರೀಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ನಂತರ ಶ್ರೀಮಠದ ಆವರಣದಲ್ಲಿ ನಡೆದಿರುವ ಸಿದ್ದತೆಗಳು, ವೇದಿಕೆ ನಿರ್ಮಾಣ, ಆಸನಗಳ ವ್ಯವಸ್ಥೆ ಹಾಗೂ ಕೈಗೊಂಡಿರುವ ಭದ್ರತಾ ವ್ಯವಸ್ಥೆಗಳನ್ನು ಖುದ್ದು ವೀಕ್ಷಿಸಿ, ಗಣ್ಯರು ಹಾಗೂ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗೈಕ್ಯ ಡಾ. ಶಿವಕುಮಾರ ಶ್ರೀಗಳ 115ನೇ ಜನ್ಮ ಜಯಂತಿಯನ್ನು ಒಂದು ಉತ್ಸವದ ರೀತಿಯಲ್ಲಿ ಆಚರಿಸಬೇಕು. ಶ್ರೀಗಳ ಜಯಂತಿ ಮತ್ತು ಗುರುವಂದನಾ ಸಮಾರಂಭಕ್ಕೆ ಕೇಂದ್ರ ಸಚಿವ ಅಮಿತ್ ಶಾ ಆಗಮಿಸುತ್ತಿದ್ದು, ಸುಮಾರು 2 ಗಂಟೆಗಳ ಕಾಲ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದರು.
ಶ್ರೀಮಠದ ಪರಂಪರೆ, ದಾಸೋಹ, ಶಿಕ್ಷಣ ಪದ್ದತಿಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಸಲುವಾಗಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು. ಏ. 1 ರಂದು ಬೆಳಿಗ್ಗೆ ಬೆಳಿಗ್ಗೆ 10.45ಕ್ಕೆ ತುಮಕೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‍ಗೆ ಹೆಲಿಪ್ಯಾಡ್‍ನಲ್ಲಿ ಆಗಮಿಸುವರು. 10.50ಕ್ಕೆ ಶ್ರೀಮಠಕ್ಕೆ ಆಗಮಿಸಲಿರುವ ಅಮಿತ್ ಶಾ ಅವರು ಶ್ರೀಗಳ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುವರು. ಮಧ್ಯಾಹ್ನ ಪ್ರಸಾದ ಸೇವಿಸಿದ ಬಳಿಕ ಅಮಿತ್ ಶಾ ಹೊರಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ ಇದ್ದರು.