ತುಮಕೂರು :
ವಿದ್ಯುಧೀಕರಣ ಪೂರ್ಣಗೊಂಡಿರುವ ತುಮಕೂರು ಬೆಂಗಳೂರು ನಡುವಿನ ಮಾರ್ಗದಲ್ಲಿ 16 ಕೋಚಿನ ಮೆಮು ರೈಲು (ವಿದ್ಯುತ್ ರೈಲು) ಸಂಚಾರಕ್ಕೆ ನೈರುತ್ಯ ವಲಯದ ರೈಲ್ವೆ ಅಧಿಕಾರಿಗಳಿಂದ ಹಸಿರು ನಿಶಾನೆ ದೊರಕಿದ್ದು, ಏಪ್ರಿಲ್ 8, 2022 ರಿಂದ ರೈಲು ಸಂಚಾರ ಆರಂಭಗೊಳ್ಳಿಲಿದೆ ಎಂದು ಸಂಸದ ಜಿ.ಎಸ್.ಬಸವರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತೆಯೇ ಅರಸಿಕೆರೆ-ತಿಪಟೂರು-ಬಾಣಸಂದ್ರ-ನಿಟ್ಟೂರು-ಗುಬ್ಬಿ-ತುಮಕೂರು-ಬೆಂಗಳೂರು ನಡುವೆ ಸದ್ಯ ಓಡುತ್ತಿರುವ 8 ಕೋಚಿನ ಬದಲಾಗಿ 18 ಕೋಚಿನ ಐಸಿಎಫ್ ಕೋಚ್ ರೈಲು ಏಪ್ರಿಲ್ 8 ರಿಂದ ಸಂಚಾರ ಪ್ರಾರಂಭಿಸಲಿದ್ದು ಇದಕ್ಕಾಗಿ ಮಾನ್ಯ ರೈಲ್ವೇ ಸಚಿವರಿಗೆ ಮತ್ತು ವಲಯ ಮಟ್ಟ ವಿಭಾಗೀಯ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಲು ಹರ್ಷಿಸುವುದಾಗಿ ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಮಕೂರು – ಯಶವಂತಪುರ ನಡುವೆ ಹಾಲಿ 8 ಕೋಚಿನ ಡೆಮು ಸೇವೆ ಚಾಲನೆಯಲ್ಲಿದ್ದು ಪ್ರತಿನಿತ್ಯ ಬೆಂಗಳೂರಿಗೆ ಕೆಲಸಕ್ಕೆ ಹೋಗುವ ಸಾವಿರಾರು ಪ್ರಯಾಣಿಕರು ಜನದಟ್ಟನೆಯಿಂದಾಗಿ ನಿಂತುಕೊಂಡೆ ಪ್ರಯಾಣ ಮಾಡಬೇಕಿತ್ತು. ಈ ಹಿನ್ನೆಲೆಯಲ್ಲಿ ತಾವು ಲೋಕಸಭಾ ಅಧಿವೇಶನ ಸಂದರ್ಭದಲ್ಲಿ ಮಾನ್ಯ ರೈಲ್ವೇ ಸಚಿವರಿಗೆ ಮನವಿ ಮಾಡಿದ್ದರಿಂದ ನೈರುತ್ಯ ವಲಯದ ವಿಭಾಗೀಯ ಮ್ಯಾನೇಜರ್ ಹುಬ್ಬಳ್ಳಿ ಇವರಿಗೂ ಸಹಾ ಪತ್ರ ಬರೆದಿದ್ದರಿಂದ ಹಸಿರು ನಿಶಾನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.