ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಒದಗಿಸುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಕಾಲ ಯೋಜನೆಯಡಿ ಸೇವೆ ನೀಡುವಲ್ಲಿ ತುಮಕೂರು ಜಿಲ್ಲೆ 2ನೇ ಸ್ಥಾನ ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಜಿಲ್ಲಾಧಿಕಾರಿಗಳಿಂದ ಪ್ರಶಸ್ತಿ ಸ್ವೀಕಾರ:
ನಾಗರಿಕರ ಸೇವೆಗೆ ಸಾರ್ಥಕತೆ ತಂದ ಸಕಾಲ ಸೇವೆ ಜಾರಿಗೆ ಬಂದು 2022ರ ಏಪ್ರಿಲ್ 2ಕ್ಕೆ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿಂದು ಜರುಗಿದ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ಅವರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಪ್ರಶಸ್ತಿ ಹಾಗೂ ಪ್ರಶಂಸನಾ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಜಿಲ್ಲೆಯಲ್ಲಿ ಸಕಾಲ ಸೇವೆ ಅನುಷ್ಠಾನದಲ್ಲಿ 2022ರ ಮಾರ್ಚ್ ಮಾಹೆಯ ಪ್ರಗತಿಯನ್ನಾಧರಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
1,55,378 ಅರ್ಜಿ ವಿಲೇವಾರಿ
ನಾಗರಿಕರು ಸರ್ಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಸರ್ಕಾರದ ಸೇವೆಗಳನ್ನು ನಿಗಧಿತ ಕಾಲಮಿತಿಯೊಳಗೆ ನೀಡುವ ಸಲುವಾಗಿ 2012ರ ಏಪ್ರಿಲ್ 2ರಂದು ಸಕಾಲ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಹತ್ತು ವರ್ಷಗಳಲ್ಲಿ ರಾಜ್ಯದ ನಾಗರಿಕರು ಸೇವೆ ಕೋರಿ ಸಲ್ಲಿಸಿರುವ ಅರ್ಜಿಗಳಲ್ಲಿ 95.07ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ವಿವಿಧ ಇಲಾಖೆಯ ಸೇವೆಗಾಗಿ ಸಕಾಲ ಯೋಜನೆಯಡಿ 2022ರ ಮಾರ್ಚ್ ಮಾಹೆಯಲ್ಲಿ 148639 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 155378(ಜನವರಿಯಿಂದ ಬಾಕಿಯಿರುವ) ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ವಿವಿಧ ಇಲಾಖೆಗಳ 1115 ಸೇವೆ:
ಸಕಾಲ ಯೋಜನೆಯಡಿ ಕಂದಾಯ ಇಲಾಖೆಯ 53 ಸೇವೆ ಸೇರಿದಂತೆ 1115 ಸೇವೆಗಳನ್ನು ಒದಗಿಸಲಾಗುತ್ತಿದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಸತಿ ದೃಢೀಕರಣ ಪತ್ರ, ಜನನ ಮತ್ತು ಮರಣ ಪ್ರಮಾಣಪತ್ರ, ವಾಸಸ್ಥಳ ಪ್ರಮಾಣಪತ್ರ, ಜೀವಂತ ಪ್ರಮಾಣ ಪತ್ರ, ಕೃಷಿ ಕುಟುಂಬ ಸದಸ್ಯ ಪ್ರಮಾಣ ಪತ್ರ, ನಿರುದ್ಯೋಗ ಪ್ರಮಾಣ ಪತ್ರ, ಕೃಷಿ ಕಾರ್ಮಿಕ ಪ್ರಮಾಣ ಪತ್ರ, ಭೂರಹಿತ ಪ್ರಮಾಣ ಪತ್ರ, ನಿರ್ಗತಿಕ ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ವೇತನ, ಭೂ ಹಿಡುವಳಿ ಪ್ರಮಾಣ ಪತ್ರ, ವಂಶವೃಕ್ಷ ಪ್ರಮಾಣ ಪತ್ರ, ಮೈತ್ರಿ, ಮನಸ್ವಿನಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಯೋಜನೆ ಜಾರಿಗೆ ಬಂದ ಆರಂಭದಲ್ಲಿ ವಿವಿಧ ಇಲಾಖೆಗಳಡಿ ಬರುವ 281 ಸೇವೆಗಳನ್ನು ಒದಗಿಸಲಾಗುತ್ತಿತ್ತು.
ಇತರೆ ರಾಜ್ಯಗಳಿಗೂ ಪ್ರೇರಣೆ:
ರಾಜ್ಯದ ಈ ಸಕಾಲ ಯೋಜನೆಯ ಯಶಸ್ಸಿನಿಂದ ಪ್ರೇರಣೆಗೊಂಡು ದೇಶದ ಇತರೆ ರಾಜ್ಯ ಸರ್ಕಾರಗಳು ಸಕಾಲ ಯೋಜನೆಯನ್ನು ಅಳವಡಿಸಿಕೊಂಡಿರುವುದು ಯೋಜನೆಯ ಹೆಗ್ಗಳಿಕೆಯಾಗಿದೆ.
ಸೇವಾ ವಿಳಂಬ-ಪರಿಹಾರ ವೆಚ್ಚ:
ನಾಗರಿಕರು ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸಿದ ಕೂಡಲೇ 15 ಜಿಎಸ್‍ಸಿ ಸಂಖ್ಯೆಯು ಅರ್ಜಿದಾರರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳಿಸಲಾಗುವುದು. ಈ ಜಿಎಸ್‍ಸಿ ಸಂಖ್ಯೆಯನ್ನು ಬಳಸಿ ತಮ್ಮ ಅರ್ಜಿಗಳ ಹಂತವನ್ನು ತಿಳಿಯಬಹುದಾಗಿದೆ. ನಿಗಧಿತ ಕಾಲ ಮಿತಿಯಲ್ಲಿ ಸೇವೆ ಲಭ್ಯವಾಗದಿದ್ದಲ್ಲಿ ವಿಳಂಬವಾಗುವ ಪ್ರತಿದಿನಕ್ಕೆ 20 ರೂ.ನಂತೆ ಗರಿಷ್ಠ 500 ರೂ.ವರೆಗೆ ನಾಗರಿಕರಿಗೆ ಪರಿಹಾರ ವೆಚ್ಚ ನೀಡಲಾಗುವುದು.
ಜಿಎಸ್‍ಸಿ ಸಂಖ್ಯೆಯಿಂದ ಅರ್ಜಿ ಸ್ಥಿತಿ:
ಸಕಾಲದಡಿ ಸೇವೆಗೆ ಅರ್ಜಿ ಸಲ್ಲಿಸುವಾಗ ನಾಗರಿಕರು ತಾವು ಬಳಸುವ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಸೇವೆ ಪಡೆಯಲು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಒದಗಿಸಬೇಕು. ಅರ್ಜಿ ಸಲ್ಲಿಸಿದ ನಂತರ ಜಿಎಸ್‍ಸಿ ಸಂಖ್ಯೆ ಸೃಜನೆಯಾಗಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಜಿಎಸ್‍ಸಿ ಸಂಖ್ಯೆಯಿಂದ ಅರ್ಜಿ ಸ್ಥಿತಿಯನ್ನು ಜಾಲತಾಣ ತಿತಿತಿ.sಚಿಞಚಿಟಚಿ.ಞಚಿಡಿ.ಟಿiಛಿ.iಟಿ ಅಥವಾ ಸಹಾಯವಾಣಿ ಸಂಖ್ಯೆ 080-44554455ನ್ನು ಮೂಲಕ ತಿಳಿಯಬಹುದು. ಸಕಾಲ ಯೋಜನೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದಲ್ಲಿ ಸಕಾಲ ಕರೆ ಕೇಂದ್ರ(ಅಚಿಟಟ ಅeಟಿಣಡಿe)ವನ್ನು ಸಂಪರ್ಕಿಸಬೇಕು.
ಸಾರ್ವಜನಿಕರು ಸಕಾಲ ಸೇವೆಗಾಗಿ ಸಂಬಂಧಿಸಿದ ಕಚೇರಿಗೆ ಭೇಟಿ ನೀಡುವ/ಆನ್‍ಲೈನ್/ಸಾಮಾನ್ಯ ಸೇವಾ ಕೇಂದ್ರ/ತುಮಕೂರು ಒನ್/ಕರ್ನಾಟಕ ಒನ್/ ಗ್ರಾಮ ಒನ್/ಜನಸೇವಕ/ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.
ಮೇಲ್ಮನವಿಗೆ ಅವಕಾಶ:
ನಿಗಧಿತ ಕಾಲಮಿತಿಯಲ್ಲಿ ಸೇವೆ ಸ್ವೀಕೃತವಾಗದಿದ್ದಲ್ಲಿ ಹಾಗೂ ಸಮಂಜಸವಲ್ಲದ ಕಾರಣಗಳನ್ನು ನೀಡಿ ಅರ್ಜಿಯನ್ನು ತಿರಸ್ಕರಿಸಿದ್ದಲ್ಲಿ ಅಂತಹ ಅರ್ಜಿಗಳಿಗೆ ನಾಗರಿಕರು ಸಂಬಂಧಪಟ್ಟ ಸಕ್ಷಮ ಅಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು. ಸಕ್ಷಮ ಅಧಿಕಾರಿಯು ತಪ್ಪಿತಸ್ಥ ಎಂದು ಹೆಸರಿಸಲಾದ ಅಧಿಕಾರಿಗಳನ್ನು ವಿಚಾರಣೆ ನಡೆಸಿ ಸೂಕ್ತ ಆದೇಶ ನೀಡುವರು. ಇಂತಹ ಆದೇಶವು ಸಮಾಧಾನಕರವಾಗಿರದಿದ್ದಲ್ಲಿ ಈ ಬಗ್ಗೆ ಸಂಬಂಧಿಸಿದ ಮೇಲ್ಮನವಿ ಪ್ರಾಧಿಕಾರಕ್ಕೆ 2ನೇ ಮೇಲ್ಮನವಿ ಸಲ್ಲಿಸಬಹುದು.
ಸಕಾಲದಡಿ ಅರ್ಜಿ ಸಲ್ಲಿಸಿದ ನಾಗರಿಕರ ಅರ್ಜಿಗಳ ವಿಲೇವಾರಿ ವಿಳಂಬ ಅಥವಾ ತಿರಸ್ಕøತವಾದಲ್ಲಿ ಮೇಲ್ಮನವಿ ಅವಕಾಶ ಲಭ್ಯವಿರುವ ಬಗ್ಗೆ ನಾಗರಿಕರಿಗೆ ಎಸ್‍ಎಂಎಸ್ ಸಂದೇಶ ಕಳುಹಿಸಲಾಗುವುದು. ರಾಜ್ಯದಲ್ಲಿ ಕಳೆದ 2022ರ ಜನವರಿ ಮಾಹೆಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ. 97.58 ನಾಗರಿಕರು ಸಕಾಲ ಕುರಿತು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.
ಇದೀಗ ಸಕಾಲ 2.0 :
ಇಂದು.. ನಾಳೆ… ಇನ್ನಿಲ್ಲ. ಹೇಳಿದ ಸಮಯ ತಪ್ಪೊಲ್ಲ.. ಎನ್ನುವ ಧ್ಯೇಯದೊಂದಿಗೆ ಇದೀಗ ಸಕಾಲ 2.0 ಅಡಿ ಹೊಸದಾಗಿ ಮೊಬೈಲ್ ಸಂದೇಶ, ಡಿಬಿಟಿ(ಆiಡಿeಛಿಣ ಃeಟಿeಜಿiಣ ಖಿಡಿಚಿಟಿsಜಿeಣ), ಸಕಾಲ ಮಿತ್ರ, ಸಕಾಲ ಸಿಟಿಜನ್ ಹ್ಯಾಪಿನೆಸ್ ಇಂಡೆಕ್ಸ್, ಸಕಾಲ ಇಂಟರ್ನ್‍ಶಿಪ್, ಹೆಸರು ಹೊಂದಾಣಿಕೆ ತಂತ್ರಜ್ಞಾನ ಕಾರ್ಯಕ್ರಮಗಳನ್ನು ಪರಿಚಯಿಸಲಾಗಿದೆ.
ಸಕಾಲದಡಿ ನಿಗಧಿತ ಕಾಲಮಿತಿಯಲ್ಲಿ ಸೇವೆ ವಿಲೇವಾರಿಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.