ತುಮಕೂರು :


      ಬೇಸಿಗೆ ಪ್ರಾರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಕುಡಿಯುವ ನೀರಿಗೆ ಸಮಸ್ಯೆ ಉಂಟಾಗದಂತೆ ಗ್ರಾಮೀಣ ಪ್ರದೇಶಗಳಲ್ಲಿ ಆಯಾ ಪಿ.ಡಿ.ಒ ಹಾಗೂ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕಾಧಿಕಾರಿಗಳು ಮತ್ತು ನಗರ ಪ್ರದೇಶಗಳಲ್ಲಿ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರಲ್ಲದೆ, ಅಗತ್ಯ ಇರುವ ಕಡೆ ಕೊಳವೆಬಾವಿ ಕೊರೆಸುವುದು, ಪೈಪ್ ಲೈನ್ ಅಳವಡಿಸುವ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಬೇಕೆಂದು ಸೂಚಿಸಿದರು.

      ಜಿಲ್ಲೆಯಲ್ಲಿ ಸಕಾಲ ಯೋಜನೆಯಡಿ ಸರ್ಕಾರಿ ಸೇವೆಗಳನ್ನು ಸಾರ್ವಜನಿಕರಿಗೆ ಅತ್ಯತ್ತಮವಾಗಿ ಒದಗಿಸುವಲ್ಲಿ ಜಿಲ್ಲೆ ಎರಡನೇ ಸ್ಥಾನ ಪಡೆದುಕೊಳ್ಳುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು ಅಭಿನಂದಿಸಿದರಲ್ಲದೆ, ಇನ್ನೂ ಉತ್ತಮ ರೀತಿಯಲ್ಲಿ ಸೇವೆ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

      ಕೋರೊನಾ ನಿಯಂತ್ರಣಕ್ಕಾಗಿ 12-14 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ಕೊರ್ಬಿವ್ಯಾಕ್ಸ್ ಲಸಿಕಾಕರಣವನ್ನು ಎಪ್ರಿಲ್ 10 ರೊಳಗೆ ಶೇ.100ರಷ್ಟು ಪೂರ್ಣಗೊಳಿಸಲು ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ಡಾ. ಬಿ.ಆರ್. ಅಂಬೇಡ್ಕರ್, ವಾಜಪೇಯಿ ವಸತಿ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಮೂರು ದಿನಗಳೊಳಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸೂಚಿಸಿದರು.=

      ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಮಾತನಾಡಿ ಕೋವಿಡ್‍ನಿಂದ ಮೃತಪಟ್ಟ ಕುಟುಂಬದವರಿಗೆ ನೀಡಲಾಗುವ ಪರಿಹಾರ ಧನಕ್ಕೆ ಸಂಬಂಧಿಸಿದಂತೆ ಈವರೆಗೂ 1129 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಈಗಾಗಲೇ ಅರ್ಹ ಕುಟುಂಬಗಳಿಗೆ ಡಿಬಿಟಿ ಹಾಗೂ ಚೆಕ್ ಮೂಲಕ ಪರಿಹಾರವನ್ನು ವಿತರಿಸಲಾಗಿದೆ ಎಂದರು.

      ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ|| ಮಹಿಮಾ ಮಾತನಾಡಿ “ಸ್ವಚ್ಚತಾ ಪಾಕ್ಷಿಕ” ಕಾರ್ಯಕ್ರಮದಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಶ್ರಮದಾನ; ಹೆರಿಗೆ ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿ, ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು; ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿ ಮಾಡಲು ತಂಡವನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.

      ಪೈಕಿ ಪಹಣಿ ಒಗ್ಗೂಡಿಸುವಿಕೆ, 3/9 ಮಿಸ್ ಮ್ಯಾಚ್, ಸ್ಮಶಾನ ಸೇರಿ ವಿವಿಧ ಉದ್ದೇಶಗಳಿಗೆ ಭೂಮಿಯನ್ನು ಕಾಯ್ದಿರಿಸುವುದು, ನಾಡ ಕಚೇರಿ ಪರಿಶೀಲನೆ ಸೇರಿದಂತೆ ಇನ್ನಿತರ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

      ಸಭೆಯಲ್ಲಿ ಉಪವಿಭಾಗಾಧಿಕಾರಿ ವಿ ಅಜಯ್, ತಹಶಿಲ್ದಾರ್ ಮೋಹನ್ ಕುಮಾರ್, ಪಾಲಿಕೆ ಆಯುಕ್ತೆ ರೇಣುಕಾ, ಡಿಎಚ್‍ಒ ಡಾ: ಎಂ.ಬಿ. ನಾಗೇಂದ್ರಪ್ಪ, ಆರ್.ಸಿ.ಎಚ್ ಅಧಿಕಾರಿ ಡಾ: ಕೇಶವರಾಜ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 15 times, 1 visits today)