ಬೆಂಗಳೂರು :
ಕರ್ನಾಟಕ ರಾಜ್ಯ ನೌಕರರ ಪ್ರಮುಖ ಬೇಡಿಕೆ ಈಡೇರಿಸುವ ಭರವಸೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು. ರಾಜ್ಯ ಸರ್ಕಾರಿ ನೌಕರ ತುಟ್ಟಿ ಭತ್ಯೆ ಹೆಚ್ಚಳ ಮಾಡುವ ಬಗ್ಗೆ ತಿಳಿಸಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ಜನವರಿ 1 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯನ್ನು ಶೇ. 2.75 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸರ್ಕಾರ 1447 ಕೋಟಿ ರೂ. ವಾರ್ಷಿಕ ವೆಚ್ಚ ಭರಿಸಲಿದೆ. ಸರ್ಕಾರಿ ಆದೇಶ ಹೊರಡಿಸಲಾಗುವುದು” ಎಂದು ಮುಖ್ಯಮಂತ್ರಿ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ವೇತನ ಪರಿಷ್ಕರಣೆ ಕುರಿತಂತೆ ಆಯೋಗ ರಚನೆಗಾಗಿ ಮಾಜಿ ಸಿಎಂ ಯಡಿಯೂರಪ್ಪ ಪತ್ರ ಬರೆದಿದ್ದರು. ಕಳೆದ ಹಲವು ವರ್ಷಗಳಿಂದ ರಾಜ್ಯ ನೌಕರರ ಸಂಘದ ವತಿಯಿಂದ ಸರ್ಕಾರ ಸಲ್ಲಿಸಿದ ಬೇಡಿಕೆಯಲ್ಲಿ ಈ ಅಂಶ ಪ್ರಮುಖವಾಗಿತ್ತು.
7ನೇ ವೇತನ ಆಯೋಗದಂತೆ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಮಿತಿ ರಚನೆಗೆ ಚಾಲನೆ ನೀಡಲಾಗುತ್ತದೆ ಎಂದು ಸದನದಲ್ಲಿ ಸಿಎಂ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ತುಟ್ಟಿಭತ್ಯೆ ಹೆಚ್ಚಳವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಸ್ವಾಗತಿಸಿದ್ದಾರೆ.
ಕೊವಿಡ್ 19 ಸಾಂಕ್ರಾಮಿಕದ ಕಾಲದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಕಳೆದ ವರ್ಷದಿಂದ ತುಟ್ಟಿಭತ್ಯೆ ಹೆಚ್ಚಳವನ್ನು ತಡೆ ಹಿಡಿಯಲಾಗಿತ್ತು. ಕೇಂದ್ರ ಸರ್ಕಾರಿ ನೌಕರರಂತೆ ರಾಜ್ಯ ಸರ್ಕಾರಿ ನೌಕರರಿಗೂ ಮೂರು ಅವಧಿಯ ತುಟ್ಟಿಭತ್ಯೆ ಹೆಚ್ಚಳವನ್ನು ತಡೆ ಹಿಡಿಯಲಾಗಿತ್ತು.
ಈಗ ಹೊಸ ವೇತನ ಆಯೋಗ ರಚನೆ ಬಗ್ಗೆ ಘೋಷಣೆಯಾಗಿದ್ದು, ಬಹುತೇಕ ಜುಲೈ 2022ರ ವೇಳೆಗೆ ಹೊಸ ಆಯೋಗ ಅನುಷ್ಠಾನಕ್ಕೆ ಬರಲಿದ್ದು, ಆಯೋಗದ ಶಿಫಾರಸ್ಸಿನ ಅನ್ವಯ ಮೂಲ ವೇತನ, ಸಂಬಳ ಏರಿಕೆ, ತುಟ್ಟಿಭತ್ಯೆ ಹೆಚ್ಚಳವಾಗಲಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ನೀಡಿದಂತೆ ಮೂಲ ವೇತನದ 5ರಷ್ಟು ಹೆಚ್ಚಳಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಹಿಂದೆ 4.25ರಷ್ಟು ಹೆಚ್ಚಳಕ್ಕೆ ಮನವಿ ಬಂದಿತ್ತು. ಆದರೆ, ಈ ಹಿಂದಿನ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರವು ಜನವರಿ 01, 2018ರಿಂದ ಪೂರ್ವಾನ್ವಯವಾಗುವಂತೆ ಶೇ 1.75ರಷ್ಟು ಹೆಚ್ಚಳ ಮಾಡಲಾಗಿತ್ತು. ನಂತರ ಶೇ 2ರಷ್ಟು ಹೆಚ್ಚಳವಾಗಿತ್ತು. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರವು ಕಳೆದ ದೀಪಾವಳಿ ಹಬ್ಬದ ವೇಳೆಗೆ ಶೇ2ರಷ್ಟು ತುಟ್ಟಿಭತ್ಯೆ(ಡಿಎ) ಹೆಚ್ಚಿಸಿತ್ತು. ನಂತರ 2019ರ ದೀಪಾವಳಿ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಸರ್ಕಾರಿ ನೌಕರರಿಗೆ ಶೇ.4.75 ತುಟ್ಟಿಭತ್ಯೆ ಹೆಚ್ಚಳ ಮಾಡಿದ್ದರು. ಈ ಮೂರು ಅವಧಿಯದ್ದು ಸೇರಿಸಿ 11% ಡಿಎ ಹೆಚ್ಚಳವಾಗಿದೆ. ಸರ್ಕಾರಿ ನೌಕರರ ಮೂಲ ವೇತನ 17, 000ರು ನಿಂದ 67,550ರು ತನಕ ಇದೆ.
ಸರ್ಕಾರಿ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರು, ರಾಜ್ಯ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪಡೆಯುವವರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೂ ವೇತನ ಆಯೋಗದ ಶಿಫಾರಸ್ಸಿನಂತೆ ಸಂಬಳ, ಪಿಂಚಣಿ ಮೊತ್ತ ಹೆಚ್ಚಳ ಅನ್ವಯವಾಗಲಿದೆ.
ತುಟ್ಟಿ ಭತ್ಯೆ ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ.