ತುಮಕೂರು:
ಭೂಮಿ ಮತ್ತು ವಸತಿ ವಂಚಿತ ಸಮುದಾಯ ಹಾಗೂ ಭ್ರಷ್ಟಾಚಾರ ನಿಮೂರ್ಲನ ವೇದಿಕೆಯ ವತಿಯಿಂದ ಭೂಮಿ ಮತ್ತು ವಸತಿ ಹಕ್ಕಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಯುತ್ತಿರುವ ಆಹೋರಾತ್ರಿ ಧರಣಿ 17ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಭೇಟಿ ನೀಡಿ ಪ್ರತಿಭಟನಾನಿರತರ ಮನವಿ ಆಲಿಸಿದರು.
ಕಳೆದ 17ನೇ ದಿನದಿಂದ ಜಿಲ್ಲೆಯ ವಿವಿಧೆಡೆ ವಸತಿ ಮತ್ತು ಭೂಮಿ ರಹಿತ ಹೋರಾಟಗಾರರು ಒಂದೆಡೆ ಸೇರಿ,ಬಗರ್ ಹುಕಂ ಸಾಗುವಳಿಗೆ ಅರ್ಜಿ ಸಲ್ಲಿಸಿರುವ ಜನರಿಗೆ ಕೂಡಲೇ ಸಾಗುವಳಿ ಚೀಟಿ ಬಿಡುಗಡೆ ಮಾಡಬೇಕು ಹಾಗು ದಲಿತ ವಿರೋಧಿ ಧೋರಣೆ ಹೊಂದಿರುವ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಬೇಕೆಂದು ಆಗ್ರಹಿಸಿ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯ ಸಂಚಾಲಕ ಹಂದ್ರಾಳು ನಾಗಭೂಷಣ್ ಅವರ ನೇತೃತ್ವದಲ್ಲಿ ಮಾರ್ಚ್ 21 ರಿಂದ ತಮ್ಮ ಕುಟುಂಬದ ಸದಸ್ಯರು,ಕುರಿ,ಮೇಕೆಗಳೊಂದಿಗೆ ಸ್ಥಳದಲ್ಲಿಯೇ ಅಡುಗೆ ತಯಾರಿಸಿ,ಊಟೋಪಚಾರ ಮಾಡುವ ಮೂಲಕ ಹೋರಾಟ ನಡೆಸುತ್ತಿದ್ದಾರೆ.
ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರತಿಭಟನಾ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ವಿಧಾನಪರಿಷತ್ ಸದಸ್ಯರಿಗೆ,ತಮ್ಮ ಬೇಡಿಕೆಗಳನ್ನು ಮನವರಿಕೆ ಮಾಡಿಕೊಟ್ಟ ಹೋರಾಟಗಾರರು,ಚಿಕ್ಕನಾಯಕನಹಳ್ಳಿ ಹಕ್ಕಿಪಿಕ್ಕಿ ಕಾಲೋನಿಯ ಜನರಿಗೆ ಸರಕಾರ ಜಾಗ ನೀಡಿದ್ದರು, ತಾಲೂಕು ಆಡಳಿತ ಇದುವರೆಗೂ ಹಕ್ಕುಪತ್ರ ವಿತರಿಸಿಲ್ಲ.ಕೇಳಲು ಹೋದ ಕುಟುಂಬಗಳ ವಿರುದ್ದ ಅಲ್ಲಿನ ತಹಶೀಲ್ದಾರ್ ಅವಾಚ್ಚ ಶಬ್ದಗಳಿಂದ ನಿಂದಿಸಿದ್ದಾರೆ.ಈ ಸಂಬಂಧ ಆಟ್ರಾಸಿಟಿ ದೂರ ದಾಖಲಾಗಿ, ಎಫ್‍ಐಆರ್ ಆದರೂ ಇದುವರೆಗೂ ತಹಶೀಲ್ದಾರರ ವಿರುದ್ದ ಯಾವುದೇ ಕಾನೂನು ಕ್ರಮ ಜರುಗಿಲ್ಲ.ಹಾಗೆಯೇ ಚೇಳೂರು ತಾಲೂಕು ಅಮ್ಮನಘಟ್ಟ ಗ್ರಾಮದ ದಲಿತ ಕುಟುಂಬಕ್ಕೆ ಅರಣ್ಯ ಇಲಾಖೆಯವರು ಇನ್ನಿಲ್ಲದ ತೊಂದರೆ ನೀಡುತ್ತಿದ್ದಾರೆ.ರೈತರು ಜಮೀನಿನಲ್ಲಿ ಬೆಳೆಸಿದ್ದ ತೆಂಗು,ಅಡಿಕೆ,ಬೇವು ಇನ್ನಿತರ ಫಲ ನೀಡುವ ಸಸಿಗಳನ್ನು ಕಿತ್ತು ದೌರ್ಜನ್ಯ ಎಸಗಿದ್ದಾರೆ. ಪ್ರಶ್ನಿಸಿದರೆ, ಬಂಧಿಸುವ ಬೆದರಿಕೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಕುತ್ತಿದ್ದಾರೆ ಎಂದು ದೂರಿದರು.
ಇದೇ ಅಲ್ಲದೆ ತುಮಕೂರು ಜಿಲ್ಲೆಯ ಹಲವು ಭಾಗಗಳಲ್ಲಿ ಬಗರ್ ಹುಕ್ಕಂ ಕಮಿಟಿ ಸಭೆಗಳೇ ನಡೆದಿಲ್ಲ.ಮೂರ್ನಾಲ್ಕು ತಲೆಮಾರುಗಳಿಂದ ಸರಕಾರಿ ಜಮೀನು ಉಳುಮೆ ಮಾಡುತ್ತಾ, ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿ,ಜ್ಞಾತಕ ಪಕ್ಷಿಯಂತೆ ಕಾಯುತ್ತಿರುವ ಜನರಿಗೆ ಯಾವುದೇ ಉಪಯೋಗವಿಲ್ಲದಂತಾಗಿದೆ.ಹಾಗಾಗಿ ಮಾಡು, ಇಲ್ಲವೆ ಮಡಿ ಎಂಬ ಹೋರಾಟಕ್ಕಾಗಿ ಮುಂದಾಗಿದ್ದೇವೆ.ನಮಗೆ ಶಾಮಿಯಾನಕ್ಕೆ ದುಡ್ಡು ಕಟ್ಟಲಾಗುತ್ತಿಲ್ಲ. ಮುಂದಿನ ವಾರದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಗುಡಿಸಲು ಹಾಕಿ ವಾಸಿಸುವ ಮೂಲಕ ಪ್ರತಿಭಟನೆ ಮುಂದುವರೆಸುವುದಾಗಿ ವಿವರಿಸಿದರು.
ಪ್ರತಿಭಟನಾನಿರತ ಮನವಿ ಆಲಿಸಿದ ನಂತರ ಮಾತನಾಡಿದ ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ,ಇಡೀ ಜಿಲ್ಲೆಯಲ್ಲಿಯೇ ಬಗರ್ ಹುಕ್ಕಂ ಸಮಿತಿಯ ಸಭೆಗಳು ಸರಿಯಾಗಿ ಆಗುತ್ತಿಲ್ಲ.ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಇಂದೇ ಮಾತುಕತೆ ನಡೆಸಿ, ಶೀಘ್ರದಲ್ಲಿಯೇ ಎಲ್ಲಾ ಶಾಸಕರಗಳ ಸಭೆ ಕರೆದು, ತ್ವರಿತವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸುವುದಾಗಿ ತಿಳಿಸಿದ ಅವರು, ಎಫ್.ಐ.ಆರ್. ಆದ ನಂತರವೂ ತಹಶೀಲ್ದಾರರ ವಿರುದ್ದ ಕ್ರಮ ಕೈಗೊಳ್ಳದಿರುವ ಬಗ್ಗೆಯೂ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು ಎಂದರು.
ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ.ಭೂಮಿ ಮತ್ತು ವಸತಿ ರಹಿತರಿಗೆ ಅದ್ಯತೆಯ ಮೇಲೆ ಸೂರು ಒದಗಿಸುವುದು ಮತ್ತು ಈಗಾಗಲೇ ಬಗರ್‍ಹುಕ್ಕುಂ ಸಾಗುವಳಿಗೆ ಅರ್ಜಿ ಸಲ್ಲಿಸಿರುವವರಿಗೆ ಸಾಗುವಳಿ ಚೀಟಿ ನೀಡುವುದು ಸರಕಾರದ ಕರ್ತವ್ಯವಾಗಿದೆ. ಹಾಗಾಗಿ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದ ಎಂದು ಆರ್.ರಾಜೇಂದ್ರ ಭರವಸೆ ನೀಡಿದರು.