ತುಮಕೂರು:
ನಗರದ ಅಮಾನಿಕೆರೆಗೆ ಅಣೆತೋಟದ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಹರಿಯುತ್ತಿರುವ ಕಾಲುವೆಗೆ ತಡೆಗೋಡೆ ನಿರ್ಮಾಣ ಮಾಡುವ ಕಾಮಗಾರಿಗೆ ಶಾಸಕ ಜ್ಯೋತಿಗಣೇಶ್ ಇಂದು ಚಾಲನೆ ನೀಡಿದರು.
ಅಣೆತೋಟದ ಮೂಲಕ ಹಾದು ಹೋಗಿರುವ ಮುಖ್ಯ ಕಾಲುವೆಗೆ ತಡೆಗೋಡೆ ಹಾಗೂ ಅಮಾನಿಕೆರೆಗೆ ಈ ಕಾಲುವೆ ಸೇರಿಕೊಳ್ಳುವ ಜಾಗದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾರ್ಯಕ್ಕೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ನಗರದ ಸತ್ಯಮಂಗಲ ಸೇರಿದಂತೆ ವಿವಿಧೆಡೆಗಳಿಂದ ಮಳೆ ನೀರು ಅಣೆತೋಟದಲ್ಲಿ ಹಾದು ಹೋಗಿರುವ ಮುಖ್ಯ ಕಾಲುವೆ ಮೂಲಕ ಹರಿದು ಅಮಾನಿಕೆರೆಗೆ ಸೇರುತ್ತಿದ್ದು, ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದ ಸಂದರ್ಭದಲ್ಲಿ ಜನತೆಗೆ ತೀವ್ರ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಈ ಭಾಗದ ಪಾಲಿಕೆ ಸದಸ್ಯರುಗಳು, ಸಾರ್ವಜನಿಕರ ಮನವಿ ಮೇರೆಗೆ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಈ ಕಾಲುವೆಗೆ ತಡೆಗೋಡೆ ನಿರ್ಮಿಸಲು ಅನುದಾನ ನೀಡುವಂತೆ ಮನವಿ ಮಾಡಲಾಯಿತು. ನಮ್ಮ ಮನವಿಗೆ ಸ್ಪಂದಿಸಿದ ಸಚಿವರು ತಡೆಗೋಡೆ ಮತ್ತು ಚೆಕ್ ಡ್ಯಾಂ ನಿರ್ಮಾಣಕ್ಕೆ 1 ಕೋಟಿ 60 ಲಕ್ಷ ರೂ. ಅನುದಾನ ನೀಡಿದ್ದಾರೆ ಎಂದರು.
ಮುಖ್ಯ ಕಾಲುವೆ ತಡೆಗೋಡೆ ಮತ್ತು ಚೆಕ್ ಡ್ಯಾಂ ನಿರ್ಮಾಣಕ್ಕೆ 124 ಕೋಟಿ ರೂ.ಗಳಿಗೆ ಟೆಂಡರ್ ಆಗಿದ್ದು, ಇಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬಹುಶಃ ಈ ಕಾಮಗಾರಿ ಪೂರ್ಣಗೊಂಡ ಬಳಿಕ ಈ ಭಾಗದಲ್ಲಿ ಮಳೆ ನೀರಿನಿಂದ ಉಂಟಾಗುತ್ತಿದ್ದ ಸಮಸ್ಯೆ ಶೇ. 50 ರಷ್ಟಾದರೂ ಪರಿಹಾರವಾಗಲಿದೆ ಎಂದರು. ಸತ್ಯಮಂಗಲ ಸೇರಿದಂತೆ ಎಲ್ಲ ಕಡೆಯಿಂದಲೂ ಮಳೆ ನೀರು ಹರಿದು ಬರುವ ಜಾಗ ಇದು. ಹಾಗಾಗಿ ಇಲ್ಲಿರುವ ಸಮಸ್ಯೆಗೆ ಶೇ. 50 ಪರಿಹಾರವನ್ನು ತಡೆಗೋಡೆ ಮತ್ತು ಚೆಕ್ ಡ್ಯಾಂ ನಿರ್ಮಾಣದಿಂದ ಸಿಗಲಿದೆ ಎಂದು ಅವರು ತಿಳಿಸಿದರು.
ನಗರದ ಅಮಾನಿಕೆರೆ ಈ ಭಾಗದ 15-16 ಕಿಲೋ ಮೀಟರ್ ಸುತ್ತಮುತ್ತಲ ಪ್ರದೇಶಗಳಿಗೆ ಜೀವಾಳವಾಗಿದೆ ಎಂದು ಅವರು ಹೇಳಿದರು.
ಈ ಭಾಗದ ಮುಖ್ಯ ರಸ್ತೆಗಳಿಗೆ ಈಗಾಗಲೇ ಡಾಂಬರೀಕರಣ ಮಾಡಲಾಗಿದೆ. ಯುಜಿಡಿ 2ನೇ ಹಂತ ಕಾಮಗಾರಿ ನಡೆದಿದ್ದರೂ ಸಹ ಸಮಾಧಾನ ತಂದಿಲ್ಲ. ರಾಯಗಾಲುವೆ ಪಕ್ಕದಲ್ಲೇ ಯುಜಿಡಿ ಪೈಪ್‍ಲೈನೆ ತೆಗೆದುಕೊಂಡು ಹೋಗಲಾಗಿದೆ. ಹಾಗಾಗಿ 2ನೇ ಹಂತದ ಯುಜಿಡಿ ತಮಗೆ ತೃಪ್ತಿ ತಂದಿಲ್ಲ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ನರಸಿಂಹಮೂರ್ತಿ, ಶ್ರೀನಿವಾಸ್, ಅಣೆತೋಟ ಶ್ರೀನಿವಾಸ್. ಸತ್ಯಮಂಗಲ ಜಗಣ್ಣ ಮತ್ತಿತರರು ಉಪಸ್ಥಿತರಿದ್ದರು.
(Visited 13 times, 1 visits today)