ತುಮಕೂರು :
ತುಮಕೂರು ಜಿಲ್ಲೆಯ 10 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಎಲ್ಲಾ ಕಾಮಗಾರಿಗಳಿಗೆ ಡಿಸೆಂಬರ್ 30ರೊಳಗೆ ಕಾಮಗಾರಿಗಳ ಆದೇಶವನ್ನು ನೀಡಿ ಆದಷ್ಟು ಶೀಘ್ರ ಕುಡಿಯುವ ನೀರಿನ ಕೊರತೆ ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಅವರು ತಾಲ್ಲೂಕು ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಗ್ರಾಮೀಣ ಕುಡಿಯುವ ನೀರು ಯೋಜನೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಬರಗಾಲ ಸಂದರ್ಭದಲ್ಲಿ ಕುಡಿಯುವ ನೀರು ಒದಗಿಸಲು ಈಗಾಗಲೇ ಪ್ರತಿ ತಾಲ್ಲೂಕಿಗೆ 50ಲಕ್ಷ ರೂ.ನಂತೆ ಜಿಲ್ಲೆಗೆ 5 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಬರಗಾಲದ ಸಂದರ್ಭದಲ್ಲಿ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದು ಎಂಬುದರ ಬಗ್ಗೆ ಪಿಡಿಓಗಳಿಂದ ಮಾಹಿತಿ ಪಡೆದು ಮುಂಜಾಗ್ರತಾ ಕ್ರಮವಾಗಿ ಆಯಾ ಗ್ರಾಮದಲ್ಲಿ ರೈತರ ಬೋರ್‍ವೆಲ್‍ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲು ಪ್ರಯತ್ನಿಸಿ. 14ನೇ ಹಣಕಾಸಿನಲ್ಲಿ ಗ್ರಾಮಪಂಚಾಯತಿಗಳಿಗೆ ಸಾಕಷ್ಟು ಹಣವನ್ನು ಒದಗಿಸಿದ್ದೇವೆ. ಕುಡಿಯುವ ನೀರಿಗೆ ಯಾವುದೇ ಹಣಕಾಸಿನ ತೊಂದರೆ ಇಲ್ಲ. ಕುಡಿಯುವ ನೀರಿನ ಕೊಳವೆ ಬಾವಿಗಳು ಬತ್ತಿಹೋಗುವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಪಿಡಿಓಗಳು ತಹಶೀಲ್ದಾರರ ಮೌಖಿಕ ಅನುಮತಿ ಪಡೆದು ಎರಡೇ ದಿನಗಳಲ್ಲಿ ನೀರು ಪೂರೈಸುವ ಕಾರ್ಯ ಆರಂಭಿಸಬೇಕೆಂದು ಸೂಚನೆ ನೀಡಿದರು.
ಬರಗಾಲ ಸಂದರ್ಭದಲ್ಲಿ ಟಪಾಲು ಸಿಸ್ಟಮ್‍ನ್ನು ಬದಿಗೊತ್ತಿ ಕುಡಿಯುವ ನೀರು ಸೇರಿದಂತೆ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಿ. ಕಾಮಗಾರಿಗಳನ್ನು ನಿಗಧಿತ ಸಮಯದೊಳಗೆ ಪೂರ್ಣಗೊಳಿಸಿ ಬರುವ ಮಾರ್ಚ್ 31ರೊಳಗೆ ಬಿಲ್ ಪಾವತಿಯಾಗಬೇಕು. ದೊಡ್ಡ ನಿರ್ಮಾಣ ಕಾಮಗಾರಿಗಳನ್ನು ಹೊರತುಪಡಿಸಿ ಯಾವುದೇ ಕಾಮಗಾರಿಯನ್ನು ಸ್ಪಿಲ್ ವರ್ಕ್ ಇಲ್ಲದಂತೆ ಪೂರ್ಣಗೊಳಿಸಬೇಕು ಎಂದ ಅವರು, ಜಿಲ್ಲೆಯಲ್ಲಿ ಬತ್ತಿಹೋಗಿರುವ/ ವಿಫಲವಾಗಿರುವ ಕೊಳವೆಬಾವಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಆ ಬೋರ್‍ವೆಲ್‍ಗಳ ಪರಿಕರಗಳ ಕುರಿತು ದಾಸ್ತಾನು ಪುಸ್ತಕ ವಹಿ ಹಾಗೂ ವಿದ್ಯುತ್ ಸಂಪರ್ಕದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿ ಪುನರ್ ಬಳಕೆ ಮಾಡುವ ಬಗ್ಗೆ ಕ್ರಮ ವಹಿಸಿ ಎಂದು ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ನಿರ್ದೇಶನ ನೀಡಿದರು.
ತುಮಕೂರು ಜಿಲ್ಲೆಯ ಒಂದೆರಡು ತಾಲ್ಲೂಕುಗಳಲ್ಲಿ ನರೇಗಾ ಯೋಜನೆಯಡಿ ಸರಕು ಆಧಾರಿತ ಕಾಮಗಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಂಡು ಕೂಲಿ ಆಧಾರಿತ ಕಾಮಗಾರಿಗೆ ಕಡಿಮೆ ಆಧ್ಯತೆಯನ್ನು ನೀಡಲಾಗಿದೆ. ನರೇಗಾ ಯೋಜನೆಯ ನಿಯಮಾವಳಿಯಂತೆ ಕಾಮಗಾರಿಗಳನ್ನು ಕೈಗೊಳ್ಳಲು ಗ್ರಾಮೀಣಾಭಿವೃದ್ಧಿ, ತೋಟಗಾರಿಕೆ ಮತ್ತಿತರ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ ತೆಂಗು, ದ್ರಾಕ್ಷಿ, ಕರಿಮೆಣಸು ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಶಾಲೆಗಳ ಕಾಂಪೌಂಡ್ ಹಾಗೂ ಆಟದ ಮೈದಾನಗಳಿಗೆ ಸಂಪೂರ್ಣ ಕಾಂಪೌಂಡ್ ನಿರ್ಮಾಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು. ಶಾಲೆಗಳು, ಆಸ್ಪತ್ರೆ ಆವರಣ, ಸಾರ್ವಜನಿಕ ಸ್ಥಳಗಳಲ್ಲಿ ಮುಂದಿನ ವರ್ಷದಿಂದ ಸಸಿಗಳನ್ನು ನೆಡಲು ಈಗಲೇ ಅಗತ್ಯವಿರುವ ಸಸಿಗಳ ಪ್ರಮಾಣದ ಬಗ್ಗೆ ಸಂಬಂಧಪಟ್ಟವರಿಂದ ಮಾಹಿತಿ ಪಡೆದು ಸಾಮಾಜಿಕ ಅರಣ್ಯ ಇಲಾಖೆಗೆ ಸಲ್ಲಿಸಿ ಎಂದು ಸಿಇಓ ಅವರಿಗೆ ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಲೋಟ, ತಟ್ಟೆ ಮತ್ತಿತರ ವಸ್ತುಗಳ ಬಳಕೆ ಹೆಚ್ಚಾಗಿ, ಹಳ್ಳಿಗಳ ಚರಂಡಿಗಳು ತುಂಬಿವೆ. ಇದರಿಂದ ರೋಗ-ರುಜಿನಗಳು ಹೆಚ್ಚಾಗಲಿವೆ. ಇದನ್ನು ತಡೆಗಟ್ಟಲು ಪ್ರಾಯೋಗಿಕವಾಗಿ ಪ್ರತಿ ತಾಲ್ಲೂಕಿನ 3 ಗ್ರಾಮಪಂಚಾಯತಿಗಳ ವ್ಯಾಪ್ತಿಯಲ್ಲಿ ಒಣ ಕಸವನ್ನು ಸಂಗ್ರಹಿಸುವ ಪ್ರಕ್ರಿಯೆಯನ್ನು ಆರಂಭಿಸಲು ಈಗಾಗಲೇ ತಿಳಿಸಲಾಗಿದೆ. ಈ ಒಣ ಕಸವನ್ನು ಖರೀದಿಸಲು ಜನರು ಇದ್ದಾರೆ. ಇಂತಹ ಕಾರ್ಯಕ್ಕೆ ಸ್ವಯಂಸೇವಾ ಸಂಸ್ಥೆಗಳು, ಸಂಘ ಸಂಸ್ಥೆಗಳು ಹಾಗೂ ಶಾಲಾ ಕಾಲೇಜುಗಳ ಸಹಕಾರ ಪಡೆದು ಜನರನ್ನು ಮನವೊಲಿಸುವ ಕಾರ್ಯ ಆಗಬೇಕಿದೆ. ಈ ಕೆಲಸವನ್ನು ಪಂಚಾಯತಿ ಸದಸ್ಯರುಗಳು ಹಾಗೂ ಸಿಬ್ಬಂದಿಗಳು ಹೆಚ್ಚಿನ ಆಸಕ್ತಿ ವಹಿಸಿ ನಿರ್ವಹಿಸಬೇಕು ಎಂದರು.
ತುಮಕೂರು ಜಿಲ್ಲೆಯಲ್ಲಿ 269 ಗ್ರಾಮಪಂಚಾಯತಿಗಳು 4 ವರ್ಷದಿಂದ ತೆರಿಗೆಯ ಪ್ರಮಾಣವನ್ನು ಪರಿಷ್ಕರಿಸಿಲ್ಲ. ಸರ್ಕಾರದ ಸುತ್ತೋಲೆಯ ಪ್ರಕಾರ ಎಲ್ಲಾ ಗ್ರಾಮಪಂಚಾಯತಿಗಳು ತೆರಿಗೆಯನ್ನು ಪರಿಷ್ಕರಿಸಬೇಕು. ಬಿಲ್ ಕಲೆಕ್ಟರ್‍ಗಳು ತೆರಿಗೆ ಸಂಗ್ರಹಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕರಾದ ವೀರಭದ್ರಯ್ಯ, ಜಯರಾಮ್, ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ನರೇಗಾ ಆಯುಕ್ತೆ ಕನಗವಲ್ಲಿ, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಸಿಇಓ ಅನೀಸ್ ಕಣ್ಮಣಿ ಜಾಯ್, ನಿರ್ದೇಶಕ ನಾಗರಾಜು, ಸಚಿವರ ಆಪ್ತ ಕಾರ್ಯದರ್ಶಿ ಡಾ: ವೆಂಕಟೇಶಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಗೂ ಮುನ್ನ ಕ್ಷೇತ್ರ ಭೇಟಿ:
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಅವರು ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ತುಮಕೂರು ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ತುಮಕೂರಿನ ಹಿರೇಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ನೇರವಾಗಿ ತುಮಕೂರು ತಾಲ್ಲೂಕಿನ ಮೈದಾಳ ಗ್ರಾಮಪಂಚಾಯತಿಗೆ ತೆರಳಿ ಪಂಚಾಯತಿಯಲ್ಲಿನ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದರು.
ಮೈದಾಳದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಬಸವಣ್ಣಯ್ಯ ಅವರ ಕೊಟ್ಟಿಗೆ ಮನೆ, ಅಯ್ಯನಪಾಳ್ಯದಲ್ಲಿ ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆದು ಬೆಳೆದಿರುವ ರೈತ ಶ್ರೀರಂಗಯ್ಯ ಅವರ ವಿ-ಒನ್ ರೇಷ್ಮೆ ತಳಿಯ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಮಾಹಿತಿಯನ್ನು ಪಡೆದರು. ಹೊಲಕ್ಕೆ ಹೊಂದಿಕೊಂಡಂತಿದ್ದ ಮಳೆ ನೀರು ಕಾಲುವೆಗೆ ಮೂರು ಚೆಕ್‍ಡ್ಯಾಂಗಳನ್ನು ನಿರ್ಮಿಸುವಂತೆ ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ ಸೂಚಿಸಿದರು.
ತಿಮ್ಮಲಾಪುರದಲ್ಲಿರುವ ಬೆಳ್ಳಾವಿ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅಸಲಿಕೆರೆಯ ಪಂಪ್‍ಹೌಸ್ ಹಾಗೂ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಲ್ಲಿಂದ ಟಿ.ಗೊಲ್ಲಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸುತ್ತಿರುವ ಶಾಲಾ ಕಾಂಪೌಂಡ್ ಕಾಮಗಾರಿಯನ್ನು ವೀಕ್ಷಿಸಿದರು. ಸಚಿವರ ಜೊತೆಯಲ್ಲಿ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಸಿಇಓ ಅನೀಸ್ ಕಣ್ಮಣಿ ಜಾಯ್ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.