ತುಮಕೂರು:
60 ವರ್ಷ ವಯೋಮಾನ ನೆಪವೊಡ್ಡಿ 19 ವರ್ಷ ಸೇವೆಸಲ್ಲಿಸಿದ ಬಡ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ಬರಿಗೈಲ್ಲಿ ಕಳಿಸುವ ಸರ್ಕಾರದ ಅಮಾನವೀಯ ನಡೆಗೆ ಖಂಡನೆ. ಕನಿಷ್ಟ 1ಲಕ್ಷ ಇಡಿಗಂಟು ನೀಡಲು ಒತ್ತಾಯ.
ಮಧ್ಯಾನ್ಹದ ಬಿಸಿಯೂಟ ಯೋಜನೆಯು ಪ್ರಾರಂಭವಾದ ವರ್ಷದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿಗೆ, ಮಕ್ಕಳ ಗೈರುಹಾಜರಿ ತಡೆಗಟ್ಟಲು ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಅಡುಗೆಯವರನ್ನು 60 ವರ್ಷ ವಯೋಮಾನ ನೆಪವೊಡ್ಡಿ 19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ಅಮಾನವೀಯವಾಗಿ ಬಿಡುಗಡೆ ಮಾಡಿರುವ ಕ್ರಮವನ್ನು ಅಕ್ಷರದಾಸೋಹ ನೌಕರರ ಸಂಘ (ಸಿಐಟಿಯು ಸಂಯೋಜಿತ) ತೀವ್ರವಾಗಿ ಖಂಡಿಸಿ ದಿನಾಂಕ;11-04-2022 ರಂದು ಜಿಲ್ಲಾ ಪಂಚಾಯತಿ ಎದರು ಪ್ರತಿಭಟನೆ ನಡೆಸಿ ಉಪಕಾರ್ಯದರ್ಶಿ-1 ರವರಿಗೆ ಮನವಿ ಸಲ್ಲಿಸಲಾಯಿತು. ಸರ್ಕಾರ ನಿವೃತ್ತಿ ವೇತನ ನಿಗದಿ ಮಾಡುವವರೆಗೆ ಈ ತಕ್ಷಣದಲ್ಲಿ ಬಿಡುಗಡೆಮಾಡುವ ಬಿಸಿಯೂಟ ನೌಕರರಿಗೆ ಇಡಿಗಂಟು ರೂ. 1,00,000/-(ಒಂದು ಲಕ್ಷ ರೂಪಾಯಿಗಳು) ಪರಿಹಾರ ನೀಡಬೇಕು. ಇದಕ್ಕೆ ಸಂಬಂದಿಸಿದಂತೆ ನಮ್ಮ ಬೇಡಿಕೆಗಳ ಜಾರಿಗಾಗಿ ಒತ್ತಾಯಿಸಿ ಏಪ್ರೀಲ್ 18,2022 ರಿಂದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು. ಸರ್ಕಾರವು ಈ ಕೂಡಲೇ ಈ ಬೇಡಿಕೆ ಈಡೇರಿಸಬೇಕು ಎಂದು ಸಂಘಟನೆಯು ಸರ್ಕಾರವನ್ನು ಒತ್ತಾಯಿಸಿದರು.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವುದರ ಜೊತೆಗೆ ಮಕ್ಕಳಲ್ಲಿ ಏಕಾಗ್ರತೆ ಮತ್ತು ಉತ್ತಮ ಫಲಿತಾಂಶ ಹೊರಹೊಮ್ಮಲು ಈ ತಾಯಂದಿರು ತಮ್ಮ ಜೀವ ಸೆವೆಸಿದ್ದಾರೆ. ರಾಜ್ಯದಲ್ಲಿ ಸುಮಾರು 50 ಲಕ್ಷ ಬಡ, ರೈತ, ಕೃಷಿಕೂಲಿಕಾರರ, ದೀನದಲಿತ ಮಕ್ಕಳಿಗೆ ದಿನನಿತ್ಯ ಬಿಸಿ ಆಹಾರ ಬೇಯಿಸಿ ಬಡಿಸುವುದರೊಟ್ಟಿಗೆ ಆ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ಮಹಿಳೆಯರ ತಾಯ್ತನದ ಪರಿಶ್ರಮವಿದೆ.
2001-02 ರಲ್ಲಿ ಅಡುಗೆ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ ವಿಧ್ಯಾಭ್ಯಾಸ ಮತ್ತು ವಯಸ್ಸಿನ ಅರ್ಹತೆ ಮಾತ್ರ ನಿಗದಿಮಾಡಲಾಗಿತ್ತು. ಅದರಲ್ಲಿ ನಿವೃತ್ತಿ ವಯಸ್ಸನ್ನು ಸರ್ಕಾರದ ಕೈಪಿಡಿಯಲ್ಲಿ ನಿಗದಿಪಡಿಸಿರುವುದಿಲ್ಲ. ಅಕ್ಷರದಾಸೋಹ ನೌಕರರ ಸಂಘ (ಸಿಐಟಿಯು) 2016 ರಿಂದಲೂ ವಯಸ್ಸಿನ ಆಧಾರದಲ್ಲಿ ನಿವೃತ್ತಿ ಸೌಲಭ್ಯ ಕೊಡಬೇಕೆಂದು ಹಲವಾರು ಬಾರಿ ಸರ್ಕಾರಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡರು ಇದರ ಬಗ್ಗೆ ಸರ್ಕಾರವಾಗಲಿ , ಶಿಕ್ಷಣ ಇಲಾಖೆಯಾಗಲಿ ಹೆಚ್ಚಿನ ಮುತುವರ್ಜಿ ವಹಿಸಲಿಲ್ಲ.
ಆದರೆ ಬಿಸಿಯೂಟ ನೌಕರರ ನಿವೃತ್ತಿ ವಿಷಯಕ್ಕೆ ಸಂಭಂದಿಸಿದಂತೆ ಶಿಕ್ಷಣ ಇಲಾಖೆಯ ಸಚಿವರೊಂದಿಗೆ, ಶಿಕ್ಷಣ ಇಲಾಖೆಯ ಪ್ರಧಾನಕಾರ್ಯದರ್ಶಿ, ಆಯುಕ್ತರು, ಎಲ್.ಐ.ಸಿ ಯ ಪಿಂಚಣಿ ವಿಭಾಗದ ಮುಖ್ಯಸ್ಥರು ಹಾಗೂ ನಮ್ಮ ಸಂಘಟನೆಯ ಮುಖಂಡರೊಂದಿಗೆ ಜಂಟಿಯಾಗಿ ಹಲವು ಬಾರಿ ಸಭೆಗಳಾಗಿವೆ.
ಈ ಸಭೆಗಳಲ್ಲಿ ಬಿಸಿಯೂಟ ನೌಕರರ ವೇತನದಲ್ಲಿ ರೂ.100 ಹಾಗೂ ಸರ್ಕಾರ ರೂ 100 ರೂ ನೀಡಿ ಈ ಹಣವನ್ನು ಎಲ್.ಐ.ಸಿ ಮುಖಾಂತರ ವಿಶೇಷ ಪಿಂಚಣಿ ಯೋಜನೆಯನ್ನು ರೂಪಿಸಲು ಒಪ್ಪಿಗೆ ಸೂಚಿಸಲಾಗಿತ್ತು. ಹಾಗೂ ಇಲಾಖಾ ಅಧಿಕಾರಿಗಳು ಮತ್ತು ನಮ್ಮ ಸಂಘಟನೆಯ ಮುಖಂಡರನ್ನು ಒಳಗೊಂಡ ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು. ಆದರೆ ಈ ಎಲ್ಲ ಕ್ರಮಗಳು ಜಾರಿಯಾಗುವ ಮೊದಲೇ ಸರ್ಕಾರ ಏಕಾಏಕಿ ಬಿಸಿಯೂಟ ನೌಕರರನ್ನು ಕೆಲಸದಿಂದ ನಿವೃತ್ತಿ ಮಾಡುತ್ತಿರುವುದು ಅಮಾನವೀಯ ಮತ್ತು ಮಹಿಳಾ ವಿರೋಧಿ ಧೋರಣೆಯಾಗಿದೆ.
ಇದರಿಂದಾಗಿ ರಾಜ್ಯದಲ್ಲಿ ಸುಮಾರು 11000 ರಿಂದ 12,000 ನೌಕರರ ಕೆಲಸವನ್ನು ಯಾವುದೇ ನಿವೃತ್ತಿ, ಸೌಲಭ್ಯವಿಲ್ಲದೆ ಸರ್ಕಾರ ತೆಗೆದುಹಾಕಲು ಮುಂದಾಗಿದೆ. ಇದನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುವುದಲ್ಲದೇ ಸರ್ಕಾರ ಕೂಡಲೇ ಈ ಸುತ್ತೋಲೆಯನ್ನು ವಾಪಸ್ಸು ಪಡೆಯಬೇಕೆಂದು ಮತ್ತು ಈ ಬಡ, ವಿಧವಾ, ಅಲ್ಪಸಂಖ್ಯಾತ. ದಲಿತ, ಕೂಲಿಕಾರ ಮಹಿಳೆಯರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತದೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷರಾದ ಕೆಂಚಮ್ಮ,ಜಿಲ್ಲಾ ಖಜಾಂಚಿ ಗಿರಿಜಮ್ಮ, ಪ್ರಧಾನ ಕಾರ್ಯದರ್ಶಿ ನಾಗರತ್ನ, ತಿಪಟೂರಿನ ಅನೂಸಯ, ಮಹಬೂಬಿ, ರತ್ನಮ್ಮ, ಜಗದಾಂಬ, ನಾಗರತ್ನಮ್ಮ ಭಾಗವಹಿಸಿದ್ದರು.
(Visited 12 times, 1 visits today)