ತುಮಕೂರು:
ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ 1043ನೇ ಜಯಂತಿ ಅಂಗವಾಗಿ ದೇವರದಾಸಿಮಯ್ಯನವರ ಭಾವಚಿತ್ರ ಮೆರವಣಿಗೆಯು ನಗರದಲ್ಲಿ ಅದ್ದೂರಿಯಾಗಿ ನಡೆಯಿತು.
ನಗರದ ಟೌನ್‍ಹಾಲ್ ವೃತ್ತದಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಆರಂಭವಾದ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಅವರು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಆರ್. ರಾಜೇಂದ್ರ ಅವರು, 2015 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿ ದೇವರ ದಾಸಿಮಯ್ಯನವರ ಜಯಂತಿಯನ್ನು ಪ್ರಾರಂಭಿಸಲಾಯಿತು. ಅಂದಿನಿಂದ ಈ ಜಯಂತಿಯನ್ನು ಆಚರಿಸುತ್ತಾ ಬರಲಾಗುತ್ತಿದೆ.ಹಿಂದುಳಿದ ವರ್ಗಗಳಲ್ಲಿ ಒಂದಾದ ನೇಕಾರರ ಸಮುದಾಯ ರಾಜಕೀಯ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಮುಂದೆ ಬರಬೇಕು. ಈ ಸಮುದಾಯದ ಏಳ್ಗೆಗೆ ತಾವು ಸದಾ ಶ್ರಮಿಸುವುದಾಗಿ ಹೇಳಿದರು.
ರಾಜಕೀಯವಾಗಿ ಈ ಜನಾಂಗ ಅತ್ಯಂತ ಹಿಂದುಳಿದಿದೆ. ಇತ್ತೀಚೆಗೆ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸ್ಪರ್ಧಿಸಿ ಗೆದ್ದಿದ್ದಾರೆ. ಆದ್ದರಿಂದ ನಾವೆಲ್ಲರೂ ಪಕ್ಷಾತೀತಾಗಿ ಈ ಹಿಂದುಳಿದ ಜನಾಂಗದ ಏಳ್ಗೆಗೆ ಶ್ರಮಿಸುವ ಅಗತ್ಯವಿದೆ.ಈ ಜನಾಂಗದ ಅಭಿವೃದ್ಧಿಗಾಗಿ ಸದಾ ಜತೆಯಲ್ಲಿರುತ್ತೇನೆ. ಹಾಗೆಯೇ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಸಹ ಹಿಂದುಳಿದ ಈ ಜನಾಂಗದ ಏಳ್ಗೆಗೆ ಮುಂದಾಗುವ ಅಗತ್ಯವಿದೆ ಎಂದು ಅವರು ಹೇಳಿದರು.
ನೇಕಾರ ಸಮಾಜದ ಎಲ್ಲ ಪಂಗಡಗಳಿಗೂ ದಾಸಿಮಯ್ಯ ಅವರು ಗುರುಗಳಾಗಿದ್ದು, ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.ನೇಕರಾರೆಲ್ಲರೂ ಒಂದುಗೂಡಿ ಗುರುಗಳಾದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿಯನ್ನು ಮೆರವಣಿಗೆಯ ಮೂಲಕ ಆಚರಿಸಲಾಗುತ್ತಿದೆ ಎಂದ ಅವರು, ನೇಕಾರರ ಬದುಕು ಹಸನಾಗಲಿ ಎಂದು ಆಶಿಸಿದರು.
ಟೌನ್‍ಹಾಲ್ ವೃತ್ತದಿಂದ ಹೊರಟ ಮೆರವಣಿಗೆಯು ಬಿ.ಹೆಚ್. ರಸ್ತೆ, ಎಂ.ಜಿ. ರಸ್ತೆ, ಗುಂಚಿ ಸರ್ಕಲ್ ಮುಖೇನ ಡಾ. ಗುಬ್ಬಿ ವೀರಣ್ಣ ರಂಗಮಂದಿರದ ತಲುಪಿತು.
ಮೆರವಣಿಗೆಯಲ್ಲಿ ದೊಡ್ಡಬಳ್ಳಾಪುರದ ಶ್ರೀದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ, ಹುಬ್ಬಳ್ಳಿಯ ಕುರಹೀನಶೆಟ್ಟಿ ಮಠದ ಶ್ರೀ1008 ಜಗದ್ಗುರು ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಶ್ರೀಪ್ರಭುಲಿಂಗ ಸ್ವಾಮೀಜಿ, ಧನಿಯಕುಮಾರ್, ಪಾಲಿಕೆ ಸದಸ್ಯ ಗಿರಿಜಾ ಧನಿಯಕುಮಾರ್, ಟಿ.ಆರ್.ಆಂಜಿನಪ್ಪ, ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದ ಸಂಚಾಲಕ ಚಂದ್ರಶೇಖರಗೌಡ, ಶಿವಾನಂದ್, ಆರ್.ರಾಮಕೃಷ್ಣಯ್ಯ, ರವೀಂದ್ರಕುಮಾರ್,ಶಂಕರಪ್ಪ, ರಂಗನಾಥ್, ಶ್ರೀನಿವಾಸ್, ಜಗದೀಶ್, ಯೋಗಾನಂದ್, ಕೌದಿ ರಂಗನಾಥ್ ಸೇರಿದಂತೆ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.
(Visited 15 times, 1 visits today)