ತುಮಕೂರು:
ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ಹುಟ್ಟು ಹಬ್ಬದ ಕಾರ್ಯಕ್ರಮದ ಅಂಗವಾಗಿ ಬುಧವಾರ ಕ್ಯಾತ್ಸಂದ್ರದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಪೌರಕಾರ್ಮಿಕರು, ಸಾರ್ವಜನಿಕರಿಗಾಗಿ ಬೃಹತ್ ಆರೋಗ್ಯ ಮೇಳ ಏರ್ಪಡಿಸಲಾಗಿತ್ತು.
ರಾಜಣ್ಣ ಅವರ ಹುಟ್ಟು ಹಬ್ಬದ ಅಂಗವಾಗಿ ಬೆಳಗ್ಗೆ 6 ಗಂಟೆಯಿಂದ ಅವರ ಅಭಿಮಾನಿಗಳು, ಸಾರ್ವಜನಿಕರು ಕ್ಯಾತ್ಸಂದ್ರದ ಅವರ ಮನೆಗೆ ತೆರಳಿ ಹಾರ, ತುರಾಯಿ ತೊಡಿಸಿ, ತಮ್ಮ ಅಭಿನಂದನೆ ಸಲ್ಲಿಸಿದರು.ಬಂದವರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಕೆ.ಎನ್.ರಾಜಣ್ಣ ಅವರು,ಕಳೆದ ಎರಡು ವರ್ಷಗಳ ಕಾಲ ಕೋರೋನದಿಂದಾಗಿ ಅಭಿಮಾನಿಗಳ ಒತ್ತಡವಿದ್ದರೂ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಅವಕಾಶ ನೀಡಿರಲಿಲ್ಲ. ಆದರೆ ಈ ಬಾರಿ ಜನರ ಒತ್ತಡ ಮಣಿದು ಹುಟ್ಟು ಹಬ್ಬ ಆಚರಿಸಿಕೊಳ್ಳುತಿದ್ದೇನೆ. ಇಡೀ ಜಿಲ್ಲೆಯ ಜನರು ಬಂದು ತಮ್ಮ ಅಭಿಮಾನ ತೋರಿಸುತ್ತಿದ್ದಾರೆ. ಇದಕ್ಕಿಂತ ಸೌಭಾಗ್ಯ ಮತ್ತೊಂದು ಇಲ್ಲ ಎಂದರು.
ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸÀಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ನಿಜಕ್ಕೂ ಇಡೀ ರಾಜಕೀಯ ವಲಯವೇ ತಲೆ ತಗ್ಗಿಸುವಂತಹ ವಿಚಾರವಾಗಿದೆ.ಅತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿರುವ ಸಂತೋಷ ಅವರು ಬರೆದಿರುವ ಸೂಸೈಡ್ ನೋಟ್‍ನಲ್ಲಿ ಮಂತ್ರಿ ಈಶ್ವರಪ್ಪ ಅವರ ಹೆಸರಿದೆ.ಅಲ್ಲದೆ ಅವರ ಹೇಳಿಕೆಯ ವಿರುದ್ದವೇ ಈಶ್ವರಪ್ಪ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅದಾಗ್ಯೂ ಸಂತೋಷ ಯಾರು ಗೊತ್ತೇ ಇಲ್ಲ ಎಂದು ಬಾಲಿಷವಾಗಿ ಹೇಳುವುದು ನಾಚಿಕೆಗೇಡು ಎಂದರು.
ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದುಕೊಂಡೇ ನಾನು ನಲವತ್ತು ಪರ್ಸೆಂಟ್ ಕಮಿಷನ್ ನೀಡಬೇಕು ಎಂದು ಸಂತೋಷ ಹೇಳಿಕೆ ನೀಡಿದ್ದಾರೆ. ಅಲ್ಲದೆ ಮೃತ ಸಂತೋಷ ಸಹೋದರ ಕೂಡ, ನನ್ನ ತಮ್ಮನ ಸಾವಿಗೆ ಈಶ್ವರಪ್ಪ ಅವರೇ ನೇರ ಹೊಣೆ ಎಂದು ಹೇಳಿಕೆ ನೀಡಿದ್ದಾರೆ. ಹಾಗಾಗಿ ಶಿಸ್ತಿನ ಪಕ್ಷ ಎನ್ನವ ಬಿಜೆಪಿ ಪಕ್ಷದವರಿಗೆ ನಿಜವಾಗಿಯೂ ಮಾನ, ಮರ್ಯಾದೆ ಇದ್ದರೆ ಕೂಡಲೇ ಸಚಿವ ಈಶ್ವರಪ್ಪ ಅವರ ರಾಜಿನಾಮೆ ಪಡೆಯಬೇಕು.ಇಲ್ಲವೇ ರಾಜ್ಯಪಾಲರ ಮೂಲಕ ಅವರನ್ನು ಮಂತ್ರಿ ಪದವಿಯಿಂದ ವಜಾಗೊಳಿಸಬೇಕೆಂದು ಕೆ.ಎನ್.ರಾಜಣ್ಣ ಆಗ್ರಹಿಸಿದರು.
ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ರಾಜ್ಯದಲ್ಲಿ ಕಮಿಷನ್ ದಂಧೆ ನಡೆಯುತ್ತಿರುವ ಬಗ್ಗೆ ಸ್ವತಹ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಕ್ರಮ ಆಗಿಲ್ಲ.ಇದನ್ನು ನೋಡಿದರೆ ಬಿಜೆಪಿ ಪಕ್ಷದಲ್ಲಿ ಹೈಕಮಾಂಡ್ ಎನ್ನವುದು ಇದೆಯೋ ಇಲ್ಲ,ಸತ್ತು ಹೋಗಿದೆಯೋ ಎಂಬ ಅನುಮಾನ ದೇಶದ ಜನರನ್ನು ಕಾಡುತ್ತದೆ.ಕೂಡಲೇ ಸರಕಾರ ಮೃತ ಕುಟುಂಬದ ನೆರವಿಗೆ ಬರಬೇಕು.ಹಾಗೆಯೇ ಸಚಿವ ಸಂಪುಟದಿಂದ ಕೆ.ಎಸ್.ಈಶ್ವರಪ್ಪ ಅರನ್ನು ವಜಾಗೊಳಿಸಬೇಕೆಂದರು.
ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣ ನಡೆದು, ತಮ್ಮ ಸಚಿವ ಸಂಪುಟದ ಸಹದ್ಯೋಗಿಯ ವಿರುದ್ದವೇ ದೂರು ದಾಖಲಾಗಿದ್ದರೂ ಇದುವರೆಗೂ ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿಲ್ಲದಿರುವುದು ಆಶ್ಚರ್ಯ ಮೂಡಿಸಿದೆ.ಪ್ರತಿಯೊಂದಕ್ಕೂ ಹೈಕಮಾಂಡ್ ಸೂಚನೆ ಕಾಯುತ್ತಿರುವುದನ್ನು ಗಮನಿಸಿದರೆ, ಬಸವರಾಜ ಬೊಮ್ಮಾಯಿ ಅವರು ಒತ್ತಡಕ್ಕೆ ಒಳಗಾಗಿದ್ದಾರೆ ಎಂಬುದು ಗೊತ್ತಾಗಲಿದೆ.ಅವರ ಅಸಮರ್ಥತೆ ರಾಜ್ಯದ ಜನತೆಯ ಮುಂದೆ ಜಗ್ಗ ಜಾಹೀರಾಗಿದೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.
ಇದೇ ವೇಳೆ ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ,ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕರಾದ ಜಿ.ಎನ್.ಮೂರ್ತಿ, ಮುಖಂಡರಾದ ವೆಂಕಟೇಶ್, ಪ್ರಭಾಕರ್ ಮತ್ತಿತರರು ಉಸಪ್ಥಿತರಿದ್ದರು.

(Visited 1 times, 1 visits today)