ತುಮಕೂರು :
ಜಿಲ್ಲೆಯಲ್ಲಿ ಏಪ್ರಿಲ್ 22 ರಿಂದ ಮೇ 18ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ದೋಷರಹಿತವಾಗಿ ನಡೆಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿಂದು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಪರೀಕ್ಷಾ ಅಕ್ರಮಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಪೂರ್ವಾಪರಗಳನ್ನು ಪರಿಶೀಲಿಸಿದ ಬಳಿಕ ಪರೀಕ್ಷಾ ಕಾರ್ಯಗಳಿಗೆ ನಿಯೋಜಿಸಬೇಕು. ಪರೀಕ್ಷಾ ನಿರ್ವಹಣೆಗಾಗಿ ನಿಯೋಜಿಸಿದವರು ಜಿಲ್ಲಾ ಖಜಾನೆ ಹಾಗೂ ಮಧುಗಿರಿ ತಾಲೂಕು ಖಾಜಾನಾಧಿಕಾರಿಗಳ ಕಚೇರಿಯಲ್ಲಿ ಕಡ್ಡಾಯವಾಗಿ ಏಪ್ರಿಲ್ 18ರೊಳಗಾಗಿ ಬಯೋಮೆಟ್ರಿಕ್ ನೋಂದಣಿ ಮಾಡಿಸಿ ಗುರುತಿನ ಚೀಟಿ ಪಡೆಯಬೇಕು ಎಂದು ನಿರ್ದೇಶನ ನೀಡಿದರು.
ಪರೀಕ್ಷಾ ಗೌಪ್ಯ ವಸ್ತುಗಳ ಲೋಡಿಂಗ್, ಅನ್ಲೋಡಿಂಗ್, ಠೇವಣಿಸುವ, ವಿತರಿಸುವ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಬಂಡಲ್ಗಳನ್ನು ತೆರೆಯುವ ಮತ್ತು ಉತ್ತರ ಪತ್ರಿಕೆಗಳನ್ನು ಸ್ವೀಕರಿಸಿ ಬಂಡಲ್ ಮಾಡುವ ಕಾರ್ಯಗಳನ್ನು ಸಿಸಿಟಿವಿ ವೀಕ್ಷಣೆಯಡಿ ನಿರ್ವಹಿಸಬೇಕು ಎಂದು ಸೂಚಿಸಿದರು.
ಪರೀಕ್ಷೆ ನಡೆಯುವ ದಿನಗಳಂದು ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದರಿಂದ ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಜೆóರಾಕ್ಸ್ ಅಂಗಡಿಗಳನ್ನು ಮುಚ್ಚಿಸುವಂತೆ ಕ್ರಮ ಕೈಗೊಳ್ಳಬೇಕು. ನಿಷೇಧಿತ ಪ್ರದೇಶದೊಳಗೆ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶ ನೀಡಬಾರದು. ಅತಿಕ್ರಮವಾಗಿ ಪ್ರವೇಶಿದವರ ವಿರುದ್ಧ ಪೊಲೀಸ್ ದೂರು ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಖರೀದಿ ಮತ್ತು ಮಾರಾಟ ಮಾಡುವ/ಪ್ರಯತ್ನಿಸುವ/ ಪ್ರಚೋದಿಸುವ/ ವದಂತಿ ಹರಡುವುದರಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಕರ್ನಾಟಕ ಶಿಕ್ಷಣ ಕಾಯ್ದೆಯಡಿ 5 ವರ್ಷಗಳ ಕಾಲ ಸೆರೆವಾಸ ಅಥವಾ 5ಲಕ್ಷ ರೂ.ಗಳ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಾಗಲಿ/ ಸಿಬ್ಬಂದಿಗಳಾಗಲಿ ಮೊಬೈಲ್ ಫೋನ್, ಈ ಕ್ಯಾಮೆರಾ, ಲ್ಯಾಪ್ಟಾಪ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ರೀತಿಯ ವಿದ್ಯುನ್ಮಾನ ಉಪಕರಣ ಹೊಂದಿರುವುದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುವುದು ಎಂದು ತಿಳಿಸಿದರು.
ಹಿಂದಿನ ಶೈಕ್ಷಣಿಕ ಸಾಲಿನ ಪ್ರಶ್ನೆಪತ್ರಿಕೆ, ಪ್ರಶ್ನೆಪತ್ರಿಕೆಗಳ ಕೈಬರಹ, ಪ್ರಶ್ನಾವಳಿ, ಹ್ಯಾಂಡ್ಬುಕ್ ಸೇರಿದಂತೆ ಪರೀಕ್ಷೆಗಳಲ್ಲಿ ಬಳಸುವ ಮತ್ತಿತರ ಸಾಮಗ್ರಿಗಳನ್ನು ಹಂಚುವ, ವಾಟ್ಸಾಪ್ ಗ್ರುಪ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಿಗೆ ರವಾನಿಸಿ ವದಂತಿಗಳನ್ನು ಹಬ್ಬಿಸಿ ವಿದ್ಯಾಥಿಗಳು, ಪೋಷಕರು ಮತ್ತು ಸಾರ್ವಜನಿಕರಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವವರ ವಿರುದ್ಧ ಸೈಬರ್ ಕ್ರೈಂನಡಿ ಎಫ್ಐಆರ್ ದಾಖಲಿಸಲು ಕ್ರಮವಿಡಲಾಗುವುದೆಂದು ಎಚ್ಚರಿಕೆ ನೀಡಿದರು.
ಗೌಪ್ಯ ವಸ್ತುಗಳ ಸಾಗಾಣಿಕೆ ಮಾಡುವ ವಾಹನಗಳಿಗೆ ಜಿಪಿಎಸ್ ಉಪಕರಣ ಅಳವಡಿಸಬೇಕು. ಮುಂಜಾಗ್ರತಾ ಕ್ರಮವಾಗಿ ಪ್ರತೀ ಪರೀಕ್ಷಾ ಕೇಂದ್ರಗಳಿಗೆ ತಲಾ ಒಬ್ಬ ಆರೋಗ್ಯ ಸಹಾಯಕರನ್ನು ನೇಮಿಸಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಗಾಳಿ ಮತ್ತು ಬೆಳಕಿನ ವ್ಯವಸ್ಥೆಯಿರುವ ಪರೀಕ್ಷಾ ಕೊಠಡಿ, ಉತ್ತಮ ರೀತಿಯ ಪೀಠೋಪಕರಣ/ಡೆಸ್ಕು, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಪಿಯುಸಿ ಪರೀಕ್ಷೆ ಪ್ರಮುಖ ಘಟ್ಟವಾಗಿದ್ದು, ಪರೀಕ್ಷೆಯಲ್ಲಿ ಗಳಿಸುವ 1 ಅಂಕದಿಂದ ಇಡೀ ಜೀವನವೇ ಬದಲಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಬಾರದು. ಪರೀಕ್ಷಾ ಕೇಂದ್ರಕ್ಕೆ ತಮ್ಮ ಮಕ್ಕಳನ್ನು ಕರೆತರುವ ಪೋಷಕರು ನಿರ್ಬಂಧಿತ ಪ್ರದೇಶದೊಳಗೆ ಪ್ರವೇಶಿಸದೆ ಅಲ್ಲಿಯೇ ಬಿಟ್ಟು ತೆರಳಬೇಕು. ಯಾವುದೇ ರೀತಿಯ ಗೊಂದಲ/ಗಲಾಟೆಗಳಿಗೆ ಅವಕಾಶ ನೀಡದೆ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಸಹಕರಿಸಬೇಕೆಂದು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಾಧರ್ ಸಭೆಗೆ ಮಾಹಿತಿ ನೀಡುತ್ತಾ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಜಿಲ್ಲೆಯಲ್ಲಿ 34 ಕೇಂದ್ರಗಳನ್ನು ತೆರೆಯಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆ ಬರೆಯಲು 25398 ಹೊಸ ವಿದ್ಯಾರ್ಥಿಗಳು, 2146 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 546 ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 28090 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ತುಮಕೂರು ಜಿಲ್ಲಾ ಖಜಾನೆ ಹಾಗೂ ಮಧುಗಿರಿ ತಾಲೂಕು ಖಜಾನೆಯಲ್ಲಿ ಪ್ರಶ್ನೆಪತ್ರಿಕೆಗಳ ಠೇವಣಿ ಹಾಗೂ ವಿತರಿಸಲು ತ್ರಿಸದಸ್ಯ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
(Visited 8 times, 1 visits today)