ತುಮಕೂರು:
ಅಂಬೇಡ್ಕರ್ ಕೊಟ್ಟ ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ. ಪರಮೇಶ್ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಕನ್ನಡ ಭವನದಲ್ಲಿ ಝೆನ್ ಟೀಮ್ ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ಶಿವಮೊಗ್ಗ ರಂಗಾಯಣದವರು ಪ್ರಸ್ತುತಪಡಿಸಿದ ವಿ ದ ಪೀಪಲ್ ಆಫ್ ಇಂಡಿಯಾ ನಾಟಕ ಪ್ರದರ್ಶನಕ್ಕೆ ನಗಾರಿ ಬಾರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಬಾಬಾ ಸಾಹೇಬ್ ಅವರ 125ನೇ ಜಯಂತಿಯನ್ನು ಪ್ರಪಂಚದ 100 ಕ್ಕೂ ಹೆಚ್ಚು ರಾಷ್ಟ್ರಗಳು ಆಚರಣೆ ಮಾಡಿದ್ದನ್ನು ಗಮನಿಸಿದರೆ ಅವರ ಆದರ್ಶ, ವ್ಯಕ್ತಿತ್ವ ಇಡೀ ಪ್ರಪಂಚಕ್ಕೆ ಪಸರಿಸಿದೆ ಎಂಬುದು ತಿಳಿಯುತ್ತದೆ ಎಂದರು.
ಅವರು ಮಾಡಿರುವ ಕಾರ್ಯಗಳನ್ನು ನಾವು ಪಾಲಿಸಬೇಕು. ಲೇಬರ್ ಮಂತ್ರಿಯಾಗಿದ್ದಾಗ ಬಹಳಷ್ಟು ಬದಲಾವಣೆ ಮಾಡಿದರು. ಅವರ ಆದರ್ಶ, ಜೀವನ ಪ್ರತಿಯೊಬ್ಬರಿಗೂ ಮಾದರಿ. ಬುದ್ದ, ಬಸವ, ಗಾಂಧಿ ಹಾಗೂ ಅಂಬೇಡ್ಕರ್ ಈ ದೇಶದ ಮುತ್ತುಗಳಿದ್ದಂತೆ ಎಂದು ಬಣ್ಣಿಸಿದರು.
ವಿ ದ ಪೀಪಲ್ ಆಫ್ ಇಂಡಿಯಾ ನಾಟಕ ಒಂದು ಅತ್ಯುತ್ತಮ ಕಥಾ ವಸ್ತುವನ್ನು ಹೊಂದಿದ್ದು ಮುಂದಿನ ತಲೆಮಾರಿಗೆ ಸಂವಿಧಾನದ ಮಹತ್ವವನ್ನು ಪರಿಚಯಿಸುವುದು ಇದರ ಉz್ದÉೀಶವಾಗಿದೆ ಎಂದರು. ಇವತ್ತು ಬಂದಿರುವ ಪ್ರೇಕ್ಷಕರಲ್ಲಿ ಹೆಚ್ಚಿನ ಪಾಲು ಯುವಕರೇ ಇರುವುದರಿಂದ ಈ ನಾಟಕದ ಆಶಯವನ್ನು ಯುವ ಸಮೂಹ ಅಳವಡಿಸಿಕೊಳ್ಳಬೇಕು ಎಂದರು.
ತುಮಕೂರು ಸೇರಿದಂತೆ ರಾಜ್ಯದುದ್ದಕ್ಕೂ ಹೊಸ ಅಲೆ ನಾಟಕಗಳು ಪ್ರದರ್ಶನ ಕಾಣುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ತುಮಕೂರಿನಲ್ಲೂ ಸಹ ಹೊಸ ಹೊಸ ತಂಡಗಳು ಪ್ರಯೋಗಾತ್ಮಕ ನಾಟಕಗಳನ್ನು ಆಡಿಸುತ್ತಿವೆ. ಇದು ಸ್ವಾಗತಾರ್ಹ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಲಾಶ್ರೀ ಡಾ. ಲಕ್ಷ್ಮಮದಾಸ್ ಮಾತನಾಡಿ ನಾಟಕ ಎಂಬುದು ಪ್ರಭಾವಿ ಮಾಧ್ಯಮವಾಗಿದ್ದು ಎಲ್ಲಾ ಕಲೆಗಳ ಸಂವಹನ ಕ್ರಿಯೆಯಾಗಿದೆ ಎಂದರು. ಮಾತಿಗಷ್ಟೆ ಸೀಮಿತವಾಗಿದ್ದ ನಾಟಕಗಳು ಇಂದು ಸಾಕಷ್ಟು ಬದಲಾಗಿದ್ದು ಸಂಕೇತದ ಮೂಲಕ ನಾಟಕಗಳನ್ನು ಕಟ್ಟುವ ಕೆಲಸ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎಂದರು.
ನಾಟಕ ರಚನೆಕಾರ ರಾಜಪ್ಪ ದಳವಾಯಿ ಅವರು ಮಾತನಾಡಿ ಶಿವಮೊಗ್ಗ ರಂಗಾಯಣದವರು ಈ ನಾಟಕವನ್ನು ರಾಜ್ಯಾದ್ಯಂತ ಪ್ರದರ್ಶನ ಮಾಡುವ ಮೂಲಕ ಅಂಬೇಡ್ಕರ್ ವಿಚಾರಧಾರೆಗಳು ಹಾಗೂ ಸಂವಿಧಾನ ರಚನೆ ಸಂಬಂಧ ನಡೆದ ಚರ್ಚೆಗಳನ್ನು ಜನರ ಮುಂದಿಡುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ ತುಮಕೂರು ನಾಟಕಗಳ ತವರೂರು. ಗುಬ್ಬಿ ವೀರಣ್ಣನವರಿಂದ ಮೊದಲಗೊಂಡು ಇಲ್ಲಿಯವರೆಗೂ ಅನೇಕ ನಾಟಕಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಅಲ್ಲದೇ ಹೊಸ ಹೊಸ ತಂಡಗಳು ಕೂಡ ರಂಗಪ್ರಯೋಗದಲ್ಲಿ ತೊಡಗಿಸಿಕೊಂಡಿದೆ. ಇದು ಒಳ್ಳೆಯ ಬೆಳವಣಿಗೆ ಎಂದರು.
ಪ್ರಾಸ್ತಾವಿಕವಾಗಿ ಝೆನ್ ಟೀಮ್‍ನ ಉಗಮ ಶ್ರೀನಿವಾಸ್ ಮಾತನಾಡಿ ಸಂವಿಧಾನವನ್ನು ಜನಪದವಾಗಿಸಬೇಕಾಗಿದೆ. ಸಂವಿಧಾನವೊಂದೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡಬಲ್ಲ ಔಷಧಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸುಗಮ ಸಂಗೀತಗಾರ ಮಲ್ಲಿಕಾರ್ಜುನ ಕೆಂಕೆರೆ, ವಿಮರ್ಶಕ ರವಿಕುಮಾರ್ ನೀಹಾ ಮತ್ತಿತರರು ಇದ್ದರು.
(Visited 15 times, 1 visits today)