ತುಮಕೂರು:
ನಗರದ ಲೋಕೋಪಯೋಗಿ ಉಪವಿಭಾಗದ ಪ್ರಭಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಂಭುಕುಮಾರ್ ವಿರುದ್ಧ ಬೆಂಗಳೂರಿನ ಮಹಾಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ದಿನಾಂಕ 12.04.2022ರಂದು ಮೊಕದ್ದಮೆ ದಾಖಲಾಗಿದೆ.
ಮಹಾಲಕ್ಷ್ಮೀಪುರಂ ಠಾಣೆಯಲ್ಲಿ ಜಾತಿ ನಿಂದನೆ ಮತ್ತು ಕೊಲೆ ಪ್ರಯತ್ನ ಆರೋಪದ ಮೇಲೆ ಒಂದನೇ ಆರೋಪಿಯಾಗಿ ಶಂಭುಕುಮಾರ್, ಎರಡನೇ ಆರೋಪಿಯಾಗಿ ಅಶ್ವಿನಿ ಮತ್ತು ಮೂರನೇ ಆರೋಪಿಯಾಗಿ ಲಕ್ಷ್ಮೀ ಸೇರಿದಂತೆ ಈ ಮೂವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.
ಮೊದಲನೇ ಆರೋಪಿಯಾಗಿರುವ ಶಂಭುಕುಮಾರ್, ಸಹಾಯಕ ಇಂಜಿನಿಯರ್ ಆಗಿ ತುಮಕೂರು ಲೋಕೋಪಯೋಗಿ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಭಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯನ್ನು ಸಹ ಕಳೆದ ಒಂದೂವರೆ ವರ್ಷದಿಂದ ನಿರ್ವಹಿಸುತ್ತಿದ್ದಾರೆ.
ತಮ್ಮ ಕಚೇರಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಶ್ವಿನಿ ಅವರನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಅವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಆಕೆಯ ಪತಿ ಲೋಕೋಪಯೋಗಿ ಕಚೇರಿಯ ಮುಂದೆ ಬಂದು ಇಂಜಿನಿಯರ್ ಶಂಭುಕುಮಾರ್ ಅವರಿಗೆ ಬುದ್ದಿ ಹೇಳಿ ಎಚ್ಚರಿಸಿರುವುದಾಗಿ ತಿಳಿದುಬಂದಿತ್ತು. ಆನಂತರವೂ ಸಹ ಅಶ್ವಿನಿಯೊಂದಿಗಿನ ಅಕ್ರಮ ಸಂಬಂಧವನ್ನು ಹಾಗೆಯೇ ಮುಂದುವರಿಸಿದ್ದು, ತದನಂತರ ಅಶ್ವಿನಿಗೆ ಬೆಂಗಳೂರಿನಲ್ಲಿ ಮನೆ ಮಾಡಿ ಅಲ್ಲಿಯೇ ಇರಿಸಿ ಆಕೆಯ ಮನೆಗೆ ಶಂಭುಕುಮಾರ್ ಹೋಗಿ ಬರುತ್ತಿದ್ದ ಎನ್ನುವ ಮಾಹಿತಿ ತಿಳಿದು, ಆಕೆಯ ಪತಿ ತಡೆಯಲು ಯತ್ನಿಸಿದಾಗ ಶಂಭುಕುಮಾರ್ ಮತ್ತು ಅಶ್ವಿನಿ ಮತ್ತು ಲಕ್ಷ್ಮೀ ಇವರುಗಳು ಸೇರಿ ಬಿಜೆಪಿ ಮುಖಂಡರೂ ಆದ ಅಶ್ವಿನಿಯವರ ಪತಿಯನ್ನು ಜಾತಿ ನಿಂದನೆ ಮಾಡಿ ತನ್ನ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ್ದು ಈ ಸಂಬಂಧ ಬೆಂಗಳೂರಿನ ಮಹಾಲಕ್ಷ್ಮೀ ಪುರಂನಲ್ಲಿ ಮೊಕದ್ದಮೆ ದಾಖಲಾಗಿದೆ.
ಕಳೆದ ಒಂದೂವರೆ ವರ್ಷದಿಂದ ಪ್ರಭಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಅಕ್ರಮವಾಗಿ ಮುಂದುವರೆದಿದ್ದು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದ ಎಂಬ ಆಪಾದನೆ ಇವರ ಮೇಲಿತ್ತು. ಉತ್ತಮ ಆಡಳಿತಾತ್ಮಕವಾಗಿ ಮತ್ತು ಅಭಿವೃದ್ಧಿಯ ವಿಚಾರಗಳಲ್ಲಿ ಗಮನ ಹರಿಸದೆ ಅನೈತಿಕ ಸಂಬಂಧಗಳು ಮತ್ತು ಅಕ್ರಮ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದರಿಂದ ಭ್ರಷ್ಟ ರಾಜಕಾರಣಿಗಳ ಮತ್ತು ಸ್ವಜನಾಂಗದ ಮುಖಂಡರ ಪ್ರಭಾವದಿಂದ ಅರ್ಹತೆಯಲ್ಲದ ಹುದ್ದೆಯಲ್ಲಿ ಅಕ್ರಮವಾಗಿ ಮುಂದುವರೆಯುತ್ತಿದ್ದ ಎಂಬ ಆಪಾದನೆ ಈತನ ವಿರುದ್ಧ ವ್ಯಾಪಕವಾಗಿ ಕೇಳಿಬರುತ್ತಿತ್ತು.
ಈತನು ಬಹಳಷ್ಟು ಜನರೊಂದಿಗೆ ಅಕ್ರಮ ವ್ಯವಹಾರಗಳು ಮತ್ತು ಅಕ್ರಮ ಸಂಬಂಧಗಳನ್ನು ಹೇರಳವಾಗಿ ಇಟ್ಟುಕೊಳ್ಳುತ್ತಿದ್ದ ಎಂಬ ವಿಚಾರ ಇಲಾಖಾ ವ್ಯಾಪ್ತಿಯಲ್ಲದೆ ಸಾರ್ವಜನಿಕ ವಲಯದಲ್ಲೂ ಕೇಳಿ ಬರುತ್ತಿತ್ತು. ಇಂತಹ ಅಧಿಕಾರಿ ಕೇವಲ ಮೂರು ತಿಂಗಳು ಮಾತ್ರ ಪ್ರಭಾರಿ ಹುದ್ದೆಯನ್ನು ನಿರ್ವಹಿಸಬಹುದಿತ್ತು.
ಆದರೆ ಭ್ರಷ್ಟಾಚಾರಿಗಳ ಕೃಪಾಶಿರ್ವಾದದಿಂದ ಒಂದೂವರೆ ವರ್ಷಗಳ ಕಾಲ ಮುಂದುವರೆದಿದ್ದ. ಇದೀಗ ಕೇವಲ ಮಾತು ಮತ್ತು ಗಲಾಟೆಯ ಹಂತದಲ್ಲಿದ್ದ ಪ್ರಕರಣ ಕೊಲೆ ಯತ್ನದ ಹಂತದವರೆಗೂ ತಲುಪಿ ಕೇಸು ದಾಖಲಿಸಿಕೊಂಡು ತಲೆ ಮರೆಸಿಕೊಳ್ಳುವ ಹಂತ ತಲುಪಿದೆ.