ತುಮಕೂರು :
ಸ್ವರಾಜ್ಯದ ಜೊತೆಗೆ ಪ್ರಜಾ ರಾಜ್ಯದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿ, ಪ್ರಜಾರಾಜ್ಯಕ್ಕಾಗಿ ಮೊಟ್ಟ ಮೊದಲಿಗನಾಗಿ ಧ್ವನಿ ಎತ್ತಿದ ಮಹಾನಾಯಕ ಡಾ|| ಬಿ.ಆರ್. ಅಂಬೇಡ್ಕರ್ ಅವರು, ಮಹಾನ್ ರಾಷ್ಟ್ರ ಭಕ್ತರು ಕೂಡ ಆಗಿದ್ದರು ಎಂದು ಪ್ರೊ. ಶ್ರೀ ಹರಿ ರಾಂ ಅವರು ತಿಳಿಸಿದರು.
ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಮತ್ತು ಹಸಿರು ಕ್ರಾಂತಿಯ ಹರಿಕಾರ ಡಾ|| ಬಾಬು ಜಗಜೀವನರಾಂ ಅವರ 115ನೇ ಜನ್ಮದಿನಾಚರಣೆಯಲ್ಲಿ ಮುಖ್ಯ ಭಾಷಣಾಕಾರರಾಗಿ ಭಾಗವಹಿಸಿ ಮಾತನಾಡುತ್ತಾ, ಜಗತ್ತಿನಾದ್ಯಂತ ಜನಸಾಮಾನ್ಯರು ಹಬ್ಬದ ರೀತಿ ಆಚರಿಸಿ ಸಂಭ್ರಮಿಸುವ ಏಕೈಕ ಹಬ್ಬ ಅದುವೇ ಮಹಾನಾಯಕ ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿ ಎಂದರು. ಮಹಾನಾಯಕ ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತವಾಗಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ. ಅವರು ಕೇವಲ ಒಂದು ದೇಶ, ಒಂದು ರಾಜ್ಯ, ಒಂದು ಜಾತಿಗೆ ಸೀಮಿತವಲ್ಲ, ಅವರು ವಿಶ್ವ ನಾಯಕ. ದಲಿತ ಪರ ಹೋರಾಟ, ಮೀಸಲಾತಿ ಹೋರಾಟ ಅಲ್ಲದೇ ದೇಶಕ್ಕಾಗಿ ಸಾಮಾಜಿಕ ಚಳುವಳಿ ಮಾಡಿದಂತಹ ಮಹಾನ್ ನಾಯಕ ಡಾ|| ಬಿ.ಆರ್. ಅಂಬೇಡ್ಕರ್ ಅವರು ಎಂದರು.
ದೇಶದ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಬದಲಾಯಿಸಬೇಕೆಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಓಟಿನ ಹಕ್ಕನ್ನು ಈ ದೇಶದ ಜನತೆಗೆ ಕೊಟ್ಟ ಮಹಾನಾಯಕ ಅವರು. ಟ್ರೇಡ್ ಯೂನಿಯನ್ ಕಾಯಿದೆಗಳ ಮೂಲಕ ಟ್ರೇಡ್ ಯೂನಿಯನ್‍ಗಳನ್ನು ಗುರುತಿಸುವ, ಕಾರ್ಮಿಕರು ಕೆಲಸ ಮಾಡುವ ವಾತಾವರಣ ಉತ್ತಮವಾಗಿಸುವ, ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೆ ತಂದಂತಹ, ರಜಾ ದಿನದ ಸಂಬಳ ಅಥವಾ ಬದಲಿ ರಜೆ, ಇಎಸ್‍ಐ, ಪಿಎಫ್, ಕಾರ್ಮಿಕರಿಗೆ 8 ಗಂಟೆಗಳ ಕೆಲಸ, ಮಹಿಳೆಯರಿಗೆ ಪ್ರಸೂತಿ ರಜೆ ಮುಂತಾದ ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳನ್ನು ಬ್ರಿಟೀಷ್ ಪರಕೀಯ ಸರ್ಕಾರದಲ್ಲಿ ಕಾನೂನು ಮಂತ್ರಿಯಾಗಿ ಅವರು ಭಾರತೀಯರ ಪರ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಕಾನೂನು ಮೂಲಕ ಜಾರಿಗೆ ತಂದರು ಎಂದು ಹರಿ ರಾಂ ಅವರು ವಿವರಿಸಿದರು.
ಮತ್ತೋರ್ವ ಭಾಷಣಾಕಾರ ಡಾ. ರವಿಕುಮಾರ್ ನೀಹ ಅವರು ಮಾತನಾಡಿ, ದಲಿತರ, ದಮನಿತರ, ಮಹಿಳೆಯರ ಏಳ್ಗೆಗಾಗಿ ಹಸಿರು ಕ್ರಾಂತಿಯ ಹರಿಕಾರ ಡಾ|| ಬಾಬು ಜಗಜೀವನರಾಂ ಅವರು ನಿರಂತರವಾಗಿ ಹೋರಾಡಿದ್ದಾರೆ. ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ, ರಾಜಕೀಯ ಶೋಷಣೆಗಳು ನಿಲ್ಲಬೇಕು. ಎಲ್ಲಾ ಸಮುದಾಯದವರು ಒಟ್ಟಾಗಿ ಕೆರೆ-ಕಟ್ಟೆ, ದೇವಾಲಯ, ಶಾಲೆಗೆ ಪ್ರವೇಶ ಪಡೆದಾಗ ಸಮಾನತೆ ಸಾಧ್ಯ ಎಂಬುದು ಜಗಜೀವನ ರಾಂ ಅವರ ಆಶಯವಾಗಿತ್ತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಂತಹ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಮಾತನಾಡಿ, ತಾವು ಜೀವನದಲ್ಲಿ ಪಟ್ಟಂತಹ ಕಷ್ಟಗಳನ್ನು ಮೆಟ್ಟಿನಿಂತು ದೇಶಕ್ಕಾಗಿ ಸಾಮಾಜಿಕ ಚಳುವಳಿ ಮಾಡಿದಂತಹ ಡಾ|| ಬಿ.ಆರ್. ಅಂಬೇಡ್ಕರ್ ಅವರು ಭಾರತದ ಪ್ರಜಾಪ್ರಭುತ್ವದ ಪಿತಾಮಹ ಎನಿಸಿದ್ದಾರೆ ಎಂದರು. ಶಿಕ್ಷಣದಿಂದ ಮಾತ್ರ ಸಾಮಾಜಿಕ ಅಸಮತೋಲನ, ಅಸಮಾನತೆ ಹೋಗಲಾಡಿಸಲು ಸಾಧ್ಯ ಎಂಬುದನ್ನು ಪ್ರತಿಪಾದಿಸಿದವರು ಡಾ|| ಬಿ.ಆರ್. ಅಂಬೇಡ್ಕರ್ ಅವರು. ಇಂದು ಅಧಿಕಾರ ವಿಕೇಂದ್ರೀಕರಣ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಇದೆ ಎಂದಾದರೆ ಇದಕ್ಕೆ ಕಾರಣ ಡಾ|| ಬಿ.ಆರ್. ಅಂಬೇಡ್ಕರ್ ಅವರು ಎಂದರು.
ಇದೇ ಸಂದರ್ಭ ಜಿಲ್ಲೆಯ ವಿವಿಧ ತಾಲ್ಲೂಕುಗಳ 12 ಮಂದಿ ಸಮಾಜ ಸೇವಕರನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂಧ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾಪೌರರಾದ ಬಿ,ಜಿ. ಕೃಷ್ಣಪ್ಪ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ಕೆ. ವಿದ್ಯಾಕುಮಾರಿ, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಷಹಪೂರ್‍ವಾಡ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಪಾಲಿಕೆ ಆಯುಕ್ತೆ ರೇಣುಕಾ ಇದ್ದರು.
(Visited 10 times, 1 visits today)