ತುಮಕೂರು:
ಕೊರಟಗೆರೆಯಲ್ಲಿ 14.04.2022 ರಂದು ಆಚರಿಸಲಾದ ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ|| ಬಿ.ಆರ್.ಆಂಬೇಡ್ಕರ್ ರವರ 131ನೇ ಜಯಂತಿ ಕಾರ್ಯಕ್ರಮದಲ್ಲಿ ಮಾಡಲಾದ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವರಾದ ಮಾನ್ಯ ಡಾ.ಜಿ.ಪರಮೇಶ್ವರ್ ರವರ ಭಾಷಣ ರಾಜ್ಯದ ದಲಿತ ಜನಾಂಗಕ್ಕೆ ಆಘಾತಕಾರಿ ಸುದ್ದಿಯಾಗಿದೆ ಎಂದು ಭಾ.ಜ.ಪಾ ಜಿಲ್ಲಾ ಉಪಾಧ್ಯಕ್ಷ ವೈ.ಹೆಚ್. ಹುಚ್ಚಯ್ಯ ತಿಳಿಸಿದರು.
ನಾನು ಪಿಹೆಚ್‍ಡಿ ಮಾಡಿದ್ದೇನೆ, ವಿದೇಶಗಳಿಗೆ ಹೋಗಿ ಬಂದಿದ್ದೇನೆ, ಹಿಂದೆ ಸಚಿವನಾಗಿದ್ದೆ. ಈಗ ಶಾಸಕನಾಗಿದ್ದೆನೆ. ರಾಜ್ಯದಲ್ಲಿ ಹಿರಿಯ ರಾಜಕಾರಣಿಯಾಗಿದ್ದೇನೆ. ಆದರೂ ದೇವಸ್ಥಾನದ ಒಳಗೆ ಬಿಟ್ಟುಕೊಳ್ಳುವುದಿಲ್ಲ ದೇವಸ್ಥಾನದ ಒಳಗೆ ಬರುತ್ತಾರೆಂದು, ಮಂಗಳಾರತಿಯನ್ನು ಹಿಡಿದು ದೇವಸ್ಥಾನದ ಹೊರಗಡೆ ನಾನಿರುವ ಜಾಗಕ್ಕೆ ಓಡಿ ಬರುತ್ತಾರೆಂದು ತಿಳಿಸಿ, ಪ್ರಪಂಚದ ಯಾವುದೇ ದೇಶದಲ್ಲಿಯೂ ಇಂತಹ ಕೀಳು ಮಟ್ಟದ ವ್ಯವಸ್ಥೆ ಕೇಳಿಲ್ಲ ಎಂದು ಇಷ್ಟೆಲ್ಲಾ ಅಧಿಕಾರ ನಡೆಸಿರುವ ವ್ಯಕ್ತಿಯಾಗಿದ್ದರೂ, ಏನೂ ಮಡಲಾಗದ ಒಬ್ಬ ಅಸಹಾಯಕ ವ್ಯಕ್ತಿಯಂತೆ ಮಾತನಾಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದರು.
ನನಗೆ ಎಲ್ಲಾ ಅರ್ಹತೆಗಳಿದ್ದರೂ ನನ್ನನ್ನು ದಲಿತ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಮಾಡಲ್ಲಿಲ್ಲ ಎಂದು ಅಳುಬುರುಕನಂತೆ ಕೊರಗುವ ಇವರು ಮುಖ್ಯಮಂತ್ರಿಯಾದರೆ ರಾಜ್ಯದ ದಲಿತರಿಗೆ ಯಾವ ರಕ್ಷಣೆಯೂ ಸಿಗುವುದಿಲ್ಲ ಹಾಗೂ ದಲಿತರ ಉದ್ಧಾರವೂ ಆಗುವುದಿಲ್ಲ. ದೇವಸ್ಥಾನದ ಒಳಗಡೆ ಬಿಡಲಿಲ್ಲ ಎಂದು ಹೇಳುವ ಪರಮೇಶ್ವರ್ ಗೃಹಸಚಿವರಾಗಿ ಇಂತಹ ಜಾತಿ ಆದಾರಿತ ತಾರತಮ್ಯ, ಅಶ್ಪøಶ್ಯತೆ ಆಚರಣೆ ವಿರುದ್ಧ ಅಂದೇ ಏಕೆ ಕಾನೂನು ಕ್ರಮ ಜರುಗಿಸಲಿಲ್ಲ ಅಥವಾ ಈ ರೀತಿಯ ಜಾತಿ ತಾರತಮ್ಯ, ಅಶ್ಪøಶ್ಯತೆ ಆಚರಣೆ ಮಾಡಿದವರ ಮನಃ ಪರಿವರ್ತನೆಗೆ ಏಕೆ ಪ್ರಯತ್ನಿಸಲಿಲ್ಲ.
ಅವರು ಗೃಹ ಸಚಿವರಾಗಿದ್ದ ಕಾಲದಲ್ಲಿ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಒಬ್ಬ ದಲಿತ ಯುವಕನನ್ನು ಬೆತ್ತಲೆಗೊಳಿಸಿ ಮಾರಣಾಂತಿಕ ಹಲ್ಲೆ ಮಾಡಿದಾಗ ಕನಿಷ್ಠ ಸೌಜನ್ಯಕ್ಕೂ ಭೇಟಿ ನೀಡಿ ನೊಂದ ಸಂತ್ರಸ್ತನಿಗೆ ಸಾಂತ್ವನ ಹೇಳದೆ ತನಗೂ ಈ ವಿಚಾರಕ್ಕೂ ಸಂಬಂಧವೇ ಇಲ್ಲದಂತೆ ಜಾಣಕುರುಡುತನ ಪ್ರದರ್ಶಿಸಿದ ನೀವು ಈಗ ಭಾಷಣದಲ್ಲಿ ದಲಿತರ ಮೇಲೆ ದೌರ್ಜನ್ಯ, ತಾರತಮ್ಯ ನಡೆಯುತ್ತಿದೆ ಎಂದು ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ನಿಮ್ಮನ್ನು ರಾಜಕೀಯ ಬೂಟಾಟಿಕೆ ಚಾಂಪಿಯನ್ ಎಂದರೆ ತಪ್ಪಾಗಲಾರದು ಎಂದರು.
ಅಧಿಕಾರಕ್ಕಾಗಿ ಎಂದೂ ಜೋತುಬೀಳದೆ ದಲಿತರಿಗೆ ಸಮಾನತೆಗಾಗಿ ಹಾಗೂ ಅವರ ಸಾಮಾಜಿಕ ಅಭಿವೃದ್ಧಿಗಾಗಿ ತನ್ನ ಜೀವಿತದ ಕೊನೆಯ ಗಳಿಗೆಯವರೆಗೂ ಅವಿಶ್ರಾಂತಿ ಹೋರಾಟ ಮಾಡಿ, ಶಿಕ್ಷಣ, ಸಂಘಟನೆ, ಹೋರಾಟದ ಬೀಜಮಂತ್ರ ಸಾರಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ||.ಬಿ.ಆರ್.ಆಂಬೇಡ್ಕರ್ ರವರ ಮೀಸಲಾತಿ ಬಿಕ್ಷೆಯಿಂದ ದಲಿತರ ಹೆಸರಿನಲ್ಲಿ ರಾಜಕೀಯ ಅಧಿಕಾರ, ಶಿಕ್ಷಣ ಸಂಸ್ಥೆಗಳು, ಹಣ, ಸೌಲಭ್ಯ ಎಲ್ಲವನ್ನೂ ಅನುಭವಿಸುತ್ತಿರುವ ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿದ್ದಾಗ ಸಾರ್ವಜನಿಕರಿಗೆ ಮುಕ್ತವಾಗಿದ್ದಂತ ವಿಧಾನಸೌಧದ 3ನೇ ಮಹಡಿಯ ತನ್ನ ಕಛೇರಿಗೆ ಪೋಲೀಸ್ ಸರ್ಪಗಾವಲಿನಲ್ಲಿ, ಪತ್ರಕರ್ತರನ್ನೊಳಗೊಂಡು ಯಾರನ್ನೂ ಒಳಬಿಡದೆ ರಹಸ್ಯವಾಗಿ ಹೋಮ ಹವನ, ಪೂಜೆ ಪುನಸ್ಕಾರಗಳನ್ನು ಪುರೋಹಿತರ ತಂಡವನ್ನೇ ಕರೆಸಿ ಮಾಡಿಸಿದ ನೀವು ಈಗ ದೇವಸ್ಥಾನಗಳಿಗೆ ನನ್ನನ್ನು ಬಿಡುತ್ತಿಲ್ಲ ಎಂದು ಹೇಳುತ್ತಿರುವುದು ನಿಮ್ಮ ಡÀಬ್ಬಲ್ ಸ್ಟಾಂಡರ್ಡ್ ನಡವಳಿಕೆಗೆ ಸ್ಪಷ್ಠ ಉದಾಹರಣೆಯಾಗಿದೆ. ಇದರಿಂದ ನೀವು ಕ್ಷೇತ್ರದ ದಲಿತ ಹಾಗೂ ರಾಜ್ಯ ದಲಿತರ ನೈತಿಕ ಮನೋಸ್ಥೈರ್ಯವನ್ನು ಕುಗ್ಗಿಸುವ ಪಾಪದ ಕೆಲಸ ಮಾಡುತ್ತಿದ್ದೀರಿ ಎಂದರು.
ಅಧಿಕಾರ ಇದ್ದಾಗ ಅಧಿಕಾರದ ಅಮಲಿನಲ್ಲಿ, ಕೇವಲ “0” ಟ್ರಾಫಿಕ್ ಮಂತ್ರಿಯಾಗಿ ಕಾಲ ಹರಣ ಮಾಡಿದ ನೀವು ಇಡೀ ದಲಿತ ಸಮುದಾಯದ ಏಳಿಗೆಗೆ ರೂಪಿಸಿದ ಯಾವ ಯೋಜನೆಗಳೂ ಇಲ್ಲ.
ದಲಿತರಿಗೆ ಸಾಮಾಜಿಕ ನ್ಯಾಯ, ಸಾಮಾಜಿಕ ಅಭಿವೃದ್ಧಿಯನ್ನು ರಾಜಕೀಯ ಅಧಿಕಾರದಿಂದ ಮಾಡದೆ ಕೇವಲ ತನ್ನ ಶಿಕ್ಷಣ ಸಂಸ್ಥೆಗಳ ವಿಸ್ತರಣೆ ಹಾಗೂ ಅವುಗಳ ರಕ್ಷಣೆಗಾಗಿ ಮಾತ್ರವೇ ಕ್ಷೇತ್ರದ ಮತದಾರರಿಂದ ಪಡೆದ ಅಧಿಕಾರ ಸೀಮಿತವಾಗಿದೆಯೇ ಹೊರತು ನೀವು ಪ್ರತಿನಿಧಿಸಿದ ಇಷ್ಟೆಲ್ಲಾ ರಾಜಕೀಯ ಅಧಿಕಾರ ನೀಡಿದ ಮಧುಗಿರಿ ಮತ್ತು ಕೊರಟಗೆರೆ ಕ್ಷೇತ್ರದ ಜನರಿಗೆ ನಿಮ್ಮ ಕೊಡುಗೆ ಶೂನ್ಯವಾಗಿದೆ ಎಂದು ತಿಳಿಸಿದರು.

(Visited 3 times, 1 visits today)