ತುಮಕೂರು:
ರಾಜ್ಯ ಬಿಜೆಪಿ ಸರ್ಕಾರದ 40 ಪರ್ಸಂಟೇಜ್ ಕಮೀಷನ್ ದಂಧೆ ಖಂಡಿಸಿ ಹಾಗೂ ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಟೌನ್‍ಹಾಲ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರು ರಾಜ್ಯ ಬಿಜೆಪಿ ಸರ್ಕಾರ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಅವರು, ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರನ್ನು ಎಫ್‍ಐಆರ್‍ನಲ್ಲಿ ಸೇರ್ಪಡೆ ಮಾಡಿ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಪಕ್ಷದ ಮುಖಂಡನಾಗಿದ್ದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವಂತಹ ದಯನೀಯ ಸ್ಥಿತಿ ಬಿಜೆಪಿ ಸರ್ಕಾರದಲ್ಲಿದೆ. ಇದು ಆ ಪಕ್ಷ ಹಾಗೂ ಸರ್ಕಾರಕ್ಕೆ ಗೌರವ ತರುವುದಿಲ್ಲ ಎಂದು ಕಿಡಿಕಾರಿದರು.
ಭ್ರಷ್ಟಾಚಾರದ ಆರೋಪ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಈಶ್ವರಪ್ಪನವರ ಬಗ್ಗೆ ಮುಖ್ಯಮಂತ್ರಿಗಳು ನೀಡುತ್ತಿರುವ ಹೇಳಿಕೆಯನ್ನು ಗಮನಿಸಿದರೆ ಈಗಾಗಲೇ ಈಶ್ವರಪ್ಪನವರು ನಿರ್ದೋಷಿ ಎಂದು ಅವರೇ ತೀರ್ಮಾನ ಮಾಡಿದಂತೆ ಕಂಡು ಬರುತ್ತಿದೆ. ಮುಖ್ಯಮಂತ್ರಿಗಳು ಇಂತಹ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದರು.
ಭ್ರಷ್ಟಾಚಾರ ಎಲ್ಲ ಕಾಲದಲ್ಲೂ ಇದೆ. ಆದರೆ ಈ ರೀತಿ ಅತಿರೇಖಕ್ಕೆ ಹೋಗಿದ್ದನ್ನು ನಾನೆಂದೂ ನೋಡಿರಲಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಸ್ವಾಮೀಜಿಗಳನ್ನು ನಾವು ಎರಡನೇ ದೇವರು ಎಂದು ಕರೆಯುತ್ತೇವೆ. ಆದರೆ ಬಿಜೆಪಿ ಸರ್ಕಾರ ಸ್ವಾಮೀಜಿಗಳ ಬಳಿಯೂ ಕಮೀಷನ್ ಪಡೆದಿದೆ ಎಂದರೆ ಏನರ್ಥ ಎಂದು ಪ್ರಶ್ನಿಸಿದ ಅವರು, ಈ ಸರ್ಕಾರ ಜನರ ತೆರಿಗೆ ಹಣವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಇದು ಸರಿಯಲ್ಲ. ರಾಜ್ಯದ ಜನರ ಶ್ರೇಯೋಭಿವೃದ್ಧಿಗೆ ತೆರಿಗೆ ಹಣ ವಿನಿಯೋಗವಾಗಬೇಕು ಎಂದರು.
ಬಿಜೆಪಿ ಸರ್ಕಾರ ಬಂದ ಮೇಲೆ ಸರ್ಕಾರಿ ಕಚೇರಿಗಳು ಲಂಚಮಯವಾಗಿವೆ. ಭ್ರಷ್ಟಚಾರ ಮುಕ್ತ ಸಮಾಜ ನಿರ್ಮಾಣ ಮಾಡುವುದಾಗಿ ಹೇಳಿಕೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿಗಳು ಇದುವರೆಗೂ ಹೇಳಿದ ಮಾತಿನಂತೆ ನಡೆದುಕೊಳ್ಳದೆ ಬರೀ ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ದೇಶದ ಜನರ ಖಾತೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದ ಪ್ರಧಾನಿಗಳು ಅವರ ಖಾತೆಗೆ ಹಣ ಹಾಕುವುದಿರಲಿ, ಇದ್ದ ಉದ್ಯೋಗವನ್ನು ಕಿತ್ತುಕೊಂಡು ನಿರುದ್ಯೋಗ ಸಮಸ್ಯೆ ತಾಂಡವವಾಡುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಪರ್ಸಂಟೇಜ್ ಕಮೀಷನ್ ನೀಡಬೇಕಾಗಿದೆ ಎಂದು ಸ್ವತಃ ಗುತ್ತಿಗೆದಾರರೇ ಆರೋಪಿಸಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆದರೂ ಇದುವರೆಗೂ ಯಾವುದೇ ಕ್ರಮ ಆಗಿಲ್ಲ. ಪ್ರತಿಭಟನೆ ಮಾಡಿದಷ್ಟೂ ಪರ್ಸಂಟೇಜ್ ಜಾಸ್ತಿಯಾಗುತ್ತಿದೆ ಎಂದು ಆರೋಪಿಸಿದರು.
ಭ್ರಷ್ಟ ಬಿಜೆಪಿ ಪಕ್ಷ ರಾಜ್ಯದಿಂದ ತೊಲಗಬೇಕು. ಈ ನಿಟ್ಟಿನಲ್ಲಿ ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದರು.
ಈ ಹಿಂದೆ ಬಿಜೆಪಿಯ ಮುಖ್ಯಮಂತ್ರಿಗಳು ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿದ್ದರು. ಈಗ ಮಂತ್ರಿಗಳು ಸಹ ಜೈಲಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಂಡು ಭ್ರಷ್ಟ ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದರು.
ಶಾಸಕ ವೆಂಕಟರಮಣಪ್ಪ ಮಾತನಾಡಿ, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ನಡೆಯುತ್ತಿರುವ 40 ಪರ್ಸೆಂಟ್ ಕಮೀಷನ್ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಡಾ. ರಫೀಕ್‍ಅಹಮದ್ ಮಾತನಾಡಿ, ಮಾಜಿ ಸಚಿವ ಈಶ್ವರಪ್ಪ ಹಾಗೂ ಇತರೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ತನಿಖೆಯನ್ನು ಹಾಲಿ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂದರು.
ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ ಪಾಟೀಲ್ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಮತ್ತು ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಅಜಯ್ ಅವರಿಗೆ ಕಾಂಗ್ರೆಸ್ ನಾಯಕರುಗಳು ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ, ಮಾಜಿ ಶಾಸಕರಾದ ಆರ್. ನಾರಾಯಣ್, ಕೆ. ಷಡಕ್ಷರಿ, ಬಿ.ಬಿ. ರಾಮಸ್ವಾಮಿಗೌಡ, ಎಂ.ಡಿ. ಲಕ್ಷ್ಮೀನಾರಾಯಣ್, ಹೊನ್ನಗಿರಿಗೌಡ, ಚೌದ್ರಿರಂಗಪ್ಪ, ಇಕ್ಭಾಲ್ ಅಹಮದ್, ಅತೀಕ್ ಅಹಮದ್, ಲೋಕೇಶ್ವರ್, ಕೆಂಚಮಾರಯ್ಯ, ಸಿಮೆಂಟ್ ಮಂಜುನಾಥ್, ಆಟೋರಾಜು, ಮೆಹಬೂಬು ಪಾಷ, ಪಾಲಿಕೆ ಸದಸ್ಯರಾದ ಮಹೇಶ್, ಶಕೀಲ್ ಅಹಮದ್, ರೂಪಶೆಟ್ಟಳ್ಳಯ್ಯ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
(Visited 89 times, 1 visits today)