ಗುಬ್ಬಿ :
ದೇವೇಗೌಡರು ದೂರದೃಷ್ಟಿ ಇಟ್ಟುಕೊಂಡು ಜನತಾ ಜಲಧಾರೆ ಕಾರ್ಯಕ್ರಮವನ್ನು ಮಾಡುತ್ತಿದ್ದು ಇದರಿಂದ ರಾಜ್ಯಕ್ಕೆ ಒಳಿತಾಗುತ್ತದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಜನತಾ ಜಾಲಧಾರೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ಮುಂದಿನ ಗುಬ್ಬಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ. ಎಸ್ ನಾಗರಾಜು ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ರಾಜ್ಯದ ನೀರಿನ ವಿಚಾರದಲ್ಲಿ ದೂರದೃಷ್ಟಿಯನ್ನು ಇಟ್ಟುಕೊಂಡು ರಾಜ್ಯದ ಎಲ್ಲ ನದಿಗಳನ್ನು ಒಟ್ಟುಗೂಡಿಸಿ ರಾಜ್ಯದ ಜನರಿಗೆ ನೀರಾವರಿ, ಹಾಗೂ ಕುಡಿಯುವ ನೀರು ಒದಗಿಸಿ ಕೊಡುವಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ರಾಜ್ಯದ 184 ವಿಧಾನಸಭಾ ಕ್ಷೇತ್ರ ಹಾಗೂ 140 ಕೇಂದ್ರಗಳು ಸುತ್ತಿಕೊಂಡು ಗುಬ್ಬಿ ಕ್ಷೇತ್ರಕ್ಕೆ ರಥವು ಆಗಮಿಸಿದೆ 75 ವರ್ಷಗಳ ಕಾಲ ರಾಷ್ಟ್ರೀಯ ಎರಡೂ ಪಕ್ಷಗಳು ಆಡಳಿತ ಮಾಡಿದ್ದರೂ ಸಹ ರಾಜ್ಯಕ್ಕೆ ಯಾವುದೇ ರೀತಿ ಅಭಿವೃದ್ಧಿ ಕೆಲಸ ಮಾಡಿಲ್ಲ. ಈ ಬಾರಿ 2023 ಕ್ಕೆ ಜೆಡಿಎಸ್ ಗೆ ಸಂಪೂರ್ಣ ಅಧಿಕಾರವನ್ನು ನೀಡಿದರೆ ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ತೆಗೆದುಕೊಂಡು ಹೋಗಲು ಈಗಾಗಲೇ ಪಂಚರತ್ನ ಯೋಜನೆಗಳನ್ನು ಮಾಡಲಾಗಿದೆ ತಾವೆಲ್ಲರೂ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರ ಧರ್ಮ, ಜಾತಿ, ಹಿಜಾಬ್, ಮಾಂಸದ ವಿಚಾರದಲ್ಲಿ ಚರ್ಚೆ ಮಾಡುತ್ತಿದ್ದಾರೆ ಬಿಟ್ಟರೆ ಯಾವುದೇ ಅಭಿವೃದ್ಧಿಯ ಚರ್ಚೆ ಇಲ್ಲ.
ಇನ್ನು ಕಾಂಗ್ರೆಸ್ ಪಕ್ಷ ಮೇಕೆದಾಟು ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಮೇಕೆದಾಟು ಯೋಜನೆ ಮಾಡಲು ಡಿ ಪಿ ಆರ್ ಸಿದ್ಧಪಡಿಸಿದ್ದರು ಆಗ ವಿರೋಧಿಸಿದವರು ಈಗ ಇದನ್ನು ಏಕೆ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಸರಕಾರ ಶೇ 40 ಕಮಿಷನ್ ಪಡೆದು ಗುತ್ತಿಗೆದಾರರ ಆತ್ಮಹತ್ಯೆಗೆ ದಾರಿ ಮಾಡಿದರೆ, ಅದೇ ಸಾವಿನ ಮನೆಯಲ್ಲಿ ಕುಳಿತು ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ.ರಾಜ್ಯ ಶಾಂತಿಯ ತೋಟ ವಾಗಬೇಕಿತ್ತು ಆದರೆ ಕೋಮು ದಳ್ಳುರಿಯಲ್ಲಿ ಬೇಯುತ್ತಿದೆ ಎಂದು ಬೇಸರವನ್ನೂ ವ್ಯಕ್ತಪಡಿಸಿದರು.
ಗುಬ್ಬಿ ವಿಧಾನಸಭಾ ಕ್ಷೇತ್ರದ ಮುಖಂಡ ಬಿ .ಎಸ್ ನಾಗರಾಜು ಮಾತನಾಡಿ ಗುಬ್ಬಿ ಕ್ಷೇತ್ರದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ನಾವು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾಗ ಸಿ ಎಸ್ ಪುರ ಕ್ಷೇತ್ರದಲ್ಲಿ 45 ಕೋಟಿ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದು ರೈತರ ಪಕ್ಷವಾದ ಜೆಡಿಎಸ್ ಪಕ್ಷದಿಂದ ಕ್ಷೇತ್ರಕ್ಕೆ ಅವಕಾಶ ಮಾಡಿಕೊಟ್ಟಿದ್ದು ತಾವೆಲ್ಲರೂ ಕೂಡ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ ಮಾತನಾಡಿ ಗ್ರಾಮಾಂತರ ಭಾಗದಲ್ಲಿ ಓದಿರುವ ಲಕ್ಷಾಂತರ ವಿದ್ಯಾರ್ಥಿಗಳು ಕಷ್ಟಬಿದ್ದು ಪರೀಕ್ಷೆ ಬರೆಯಲು ಹೋದರೆ ಆ ಹುದ್ದೆಗಳೇ ಮಾರಾಟವನ್ನ ಮಾಡಿರುವ ಭ್ರಷ್ಟ ಸರಕಾರ ಅಂದರೆ ಅದು ಬಿಜೆಪಿ ಸರಕಾರವಾಗಿದೆ. ರಾಮನ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ರಾಮನ ಆದರ್ಶವನ್ನು ಕಿಂಚಿತ್ತೂ ಇಟ್ಟುಕೊಂಡಿಲ್ಲ ಎಂದು ಕಿಡಿಕಾರಿದರು.
ಗುಬ್ಬಿ ಕ್ಷೇತ್ರದ ಶಾಸಕರಿಗೆ ನಮ್ಮ ಪಕ್ಷ ಯಾವುದೇ ಅನ್ಯಾಯ ಮಾಡಿಲ್ಲ ಅವರನ್ನು ಸಚಿವರನ್ನಾಗಿ ಸಹ ಮಾಡಲಾಗಿತ್ತು ಆದರೆ ಅವರು ಅಧಿಕಾರ ಕೊಟ್ಟ ಪಕ್ಷಕ್ಕೆ ಬೆನ್ನಿಗೆ ಚೂರಿ ಹಾಕಿದ್ದಾರೆ ಇನ್ನೂ ಅವರು ಯಾವ ಪಕ್ಷದಲ್ಲಿದ್ದಾರೆ ಎಂಬುದು ಅವರಿಗೆ ಗೊತ್ತಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಗುಬ್ಬಿ ತಾಲೂಕಿನ ದೊಣೆ ಗಂಗಾ ಕ್ಷೇತ್ರದಿಂದ ಜಲಧಾರೆ ರಥಕ್ಕೆ ಚಾಲನೆ ನೀಡಲಾಯಿತು ನಿಟ್ಟೂರಿನಿಂದ ಬೈಕ್ ಜಾಥಾಕ್ಕೆ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿ ಸಾಂಸ್ಕೃತಿಕ ಕಲಾ ತಂಡದೊಂದಿಗೆ ವೇದಿಕೆಗೆ ಆಗಮಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆಂಜನಪ್ಪ, ಎಂಎಲ್ ಸಿ ತಿಪ್ಪೇಸ್ವಾಮಿ, ರಾಜ್ಯ ಸಂಚಾಲಕ ಬೆಳ್ಳಿ ಲೋಕೇಶ್ ,ಎಪಿಎಂಸಿ ಸದಸ್ಯ ಕಳ್ಳಿಪಾಳ್ಯ ಲೋಕೇಶ್ ,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗಾಯಿತ್ರಿ ನಾಗರಾಜು, ಜೆಡಿಎಸ್ ಚುನಾವಣಾ ಅಧಿಕಾರಿ ದೇವರಾಜು, ಮುಖಂಡರಾದ ಸುರೇಶಗೌಡ, ಗಂಗಣ್ಣ, ಮಾವಿನಹಳ್ಳಿ ಕರಿಯಪ್ಪ, ಶಿವಲಿಂಗೇಗೌಡ, ಶಿವಣ್ಣ, ಸೇರಿದಂತೆ ಇನ್ನಿತರರು ಹಾಜರಿದ್ದರು.
(Visited 128 times, 1 visits today)