ತುಮಕೂರು:
ರಾಜ್ಯದಲ್ಲಿರುವ ಎಲ್ಲಾ ವರ್ಗದ ಜನರನ್ನು ರಕ್ಷಿಸುವುದಾಗಿ ಪ್ರಮಾಣ ವಚನ ಸ್ವೀಕರಿಸುವ ಶಾಸಕರು, ಸಚಿವರುಗಳು, ಇಬ್ಬರು ದಲಿತ ಯುವಕರ ಕೊಲೆಯಾಗಿ 8 ದಿನಗಳು ಕಳೆಯುತ್ತಾ ಬಂದರೂ ಇದುವರೆಗೂ ಸೌಜನ್ಯಕ್ಕಾದರೂ ಒಬ್ಬರು ಭೇಟಿ ನೀಡದಿರುವುದು ದಲಿತರ ಬಗ್ಗೆ ಸರಕಾರಕ್ಕೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಸರಕಾರದ ವಿರುದ್ದ ಕಿಡಿ ಕಾರಿದ್ದಾರೆ.
ಇಂದು ಏಪ್ರಿಲ್ 22 ರಂದು ಭರ್ಬರವಾಗಿ ತನ್ನ ಗ್ರಾಮದವರಿಂದಲೇ ಕೊಲೆಯಾದ ಪೆದ್ದನಹಳ್ಳಿಯ ಗಿರೀಶ್ ಮತ್ತು ಮಂಚಲದೊರೆಯ ಗಿರೀಶ್ ಮನೆಗೆ ಭೇಟಿ ನೀಡಿ,ಅವರು ಕುಟುಂಬಗಳಿಗೆ ಸಾಂತ್ವಾನ ಹೇಳಿ, ತಮ್ಮ ಕೈಲಾದ ಅರ್ಥಿಕ ನೆರವು ನೀಡಿ,ನಿಮ್ಮ ಕುಟುಂಬದೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲ್ವರ್ಗದ ಜನರು ಕೊಲೆಯಾದಾಗÀ, ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನೆ ನಡೆಸಿ, ಶವದ ಮೆರವಣಿಗೆ ನಡೆಸಿ,ಪರಿಹಾರ ವಿತರಿಸುವ ಸರಕಾರದ ಸಚಿವರುಗಳು, ತುಮಕೂರು ಜಿಲ್ಲೆಯಲ್ಲಿ ದಲಿತ ಯುವಕರ ಸಾವಿಗೆ ಸ್ಪಂದನೆಯೇ ಇಲ್ಲದಂತಾಗಿದೆ. ಇಂತಹ ತಾರತಮ್ಯ ಅಗತ್ಯವೇ ಎಂದು ಪ್ರಶ್ನಿಸಿದರು.
ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಸ್ವತಹಃ ಗೃಹ ಸಚಿವರಿದ್ದಾರೆ.ಹಾಗೆಯೇ ಜೆ.ಸಿ.ಮಾಧುಸ್ವಾಮಿ ಮತ್ತು ಬಿ.ಸಿ.ನಾಗೇಶ್ ಅವರುಗಳು ಸಚಿವರಾಗಿದ್ದಾರೆ. ಹಾಗೆಯೇ ಕ್ಷೇತ್ರದ ಶಾಸಕರು ಸಹ ಬಿಜೆಪಿ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಹೀಗಿದ್ದೂ ಒಬ್ಬರು ಸಂತ್ರಸ್ತ ಕುಟುಂಬವನ್ನು ಇದುವರೆಗೂ ಭೇಟಿ ಮಾಡದಿರುವುದು ದುರಾದೃಷ್ಟ. ಸರಕಾರಕ್ಕೆ ದಲಿತರ ಬಗ್ಗೆ ಇರುವ ಕಾಳಜಿಯನ್ನು ಇದು ತೋರಿಸುತ್ತದೆ ಎಂದರು.
ಕಳ್ಳತನ ಮಾಡುತ್ತಿದ್ದರು ಎಂಬುದು ಕೊಲೆ ಮಾಡಲು ಇರುವ ರಹದಾರಿಯಲ್ಲ.ಎಲ್ಲಾ ಸಮುದಾಯದಲ್ಲಿಯೂ ಈ ರೀತಿಯ ಸಣ್ಣಪುಟ್ಟ ತಪ್ಪು ಮಾಡುವವರು ಇದ್ದೇ ಇರುತ್ತಾರೆ. ಕಳ್ಳರನ್ನು ಶಿಕ್ಷಿಸಲು ನಮ್ಮಲ್ಲಿ ಪೊಲೀಸ್ ವ್ಯವಸ್ಥೆ ಇದೆ. ಅದನ್ನು ಬಿಟ್ಟು, ಸಾರ್ವಜನಿಕರೇ ಕಾನೂನು ಕೈಗೆ ತೆಗೆದುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಸರಕಾರ ಬಂಧನಕ್ಕೆ ಒಳಗಾಗಿರುವ ಎಲ್ಲಾ ಆರೋಪಿಗಳನ್ನು ಕೂಲಂಕಷ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಹಾಗೆಯೇ ರಾಜ್ಯದಲ್ಲಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಆರ್.ರಾಜೇಂದ್ರ ಆಗ್ರಹಿಸಿದರು. ದಲಿತ ಯುವಕರು ಕೊಲೆಯಾಗಿರುವ ರೀತಿ ನೋಡಿದರೆ ನಿಜಕ್ಕೂ ಭಯವೆನಿಸುತ್ತದೆ. ನಿಜಕ್ಕು ಇದು ಖಂಡನೀಯ. ಅಲ್ಲದೆ ಇಡೀ ಗ್ರಾಮವೇ ಕೊಲೆಯಾದ ಗಿರೀಶ್ ಕುಟುಂಬದ ಜೊತೆಗೆ ಮಾತನಾಡುತ್ತಿಲ್ಲ. ಸಂತ್ರಸ್ತರಿಗೆ ಧೈರ್ಯ ತುಂಬಬೇಕಾದ ದಲಿತ ಸಮುದಾಯದ ಜನರೇ ಅವವರೊಂದಿಗೆ ಮಾತುಕತೆ ನಿಲ್ಲಿಸಿರುವುದು ದುರಂತ.ಇಡೀ ಕುಟುಂಬ ಭಯದ ವಾತಾವರಣದಲ್ಲಿದೆ.ಹಾಗಾಗಿ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು. ಕನಿಷ್ಠ 15 ಲಕ್ಷ ರೂಗಳ ಪರಿಹಾರವನ್ನು ಒದಗಿಸಬೇಕು ಎಂದು ಆರ್.ರಾಜೇಂದ್ರ ಸರಕಾರವನ್ನು ಒತ್ತಾಯಿಸಿದರು. ಈ ವೇಳೆ ಮುಖಂಡರಾದ ಗಂಗಣ್ಣ, ಸಿಂಗದಹಳ್ಳಿ ರಾಜಕುಮಾರ್, ಜಿ.ಪಂ.ಸದಸ್ಯ ಪ್ರಭಾಕರ್ ದಲಿತ ಮುಖಂಡರಾದ ಕೊಟ್ಟಶಂಕರ್, ವಿರೂಪಾಕ್ಷ ಡ್ಯಾಗೇರಹಳ್ಳಿ,ಮಂಜೇಶ್ ಗುಬ್ಬಿ, ಮಾದಿಗ ದಂಡೋರ ರಾಜ್ಯ ವಕ್ತಾರ ಎಂ.ವಿ.ರಾಘವೇಂದ್ರಸ್ವಾಮಿ, ಮರಳೂರು ರಾಮಣ್ಣ, ಕುರಿ ಮೂರ್ತಿ, ಮುರಳಿ ಕುಂದೂರು, ಚೇಳೂರು ಶಿವನಂಜಪ್ಪ ಉಪಸ್ಥಿತರಿದ್ದರು.
(Visited 205 times, 1 visits today)